ಮಲೆನಾಡಿನ ಜನತೆಗೆ ಆನೆ ಬಂತೊಂದಾನೆ ಕಥೆಯಲ್ಲ, ನಿಜ ಜೀವನ: ಕಾಡು ಪ್ರಾಣಿಗಳ ದಾಳಿಗೆ ರೈತರು ಹೈರಾಣು
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಕಾಡುಪ್ರಾಣಿಗಳ ದಾಳಿ ಹೆಚ್ಚುತ್ತಿದ್ದು, ಜನರು ಆತಂಕದಲ್ಲಿ ದಿನ ದೂಡುವಂತಾಗಿದೆ. ಕಾಡಾನೆಗಳು ಮತ್ತು ಕಾಡು ಕೋಣಗಳ ಹಾವಳಿಯಿಂದ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.18): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಾಡುಪ್ರಾಣಿಗಳ ನಿರಂತರ ದಾಳಿಯಿಂದ ಜನರು, ರೈತಾಪಿ ವರ್ಗ ಹೈರಾಣುಯಾಗುವಂತೆ ಮಾಡಿದೆ. ಒಂದಡೆ ಕಾಡಾನೆಗಳು ದಾಳಿ, ಮತ್ತೋಂದಡೆ ಕಾಡು ಕೋಣಗಳ ದಾಳಿಯಿಂದ ರೈತರು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ, ಜೀವವನ್ನು ಉಳಿಸಿಕೊಳ್ಳುವುದೂ ಎನ್ನುವ ಮಟ್ಟಿಗೆ ಕಾಡುಪ್ರಾಣಿಗಳ ಕಾಟ ವಿಪರೀತವಾಗಿದೆ. ಆನೆ ಬಂತೊಂದಾನೆ ಎಂಬ ಕಥೆ ಇಲ್ಲಿನ ಜನರಿಗೆ ಜೀವನವಾಗಿದೆ. ಇನ್ನು ಓಡ್ರೋ ಓಡ್ರೋ ಓಡ್ರೋ ಆನೆ ಬಂತು ಅನ್ನೋದು ನಿತ್ಯ ಘೋಷವಾಕ್ಯವಾಗಿದೆ ಎಂದು ಮಲೆನಾಡಿಗರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಸಮೀಪಕ್ಕೆ ಬಂದ ಕಾಡಾನೆ : ಮೂಡಿಗೆರೆ ತಾಲೂಕಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಕಾಡಾನೆ ಹಾವಳಿ ಮಿತಿಮೀರಿದೆ. ಈಗಾಗಲೇ ಮೂಡಿಗೆರೆ ತಾಲೂಕಿನಲ್ಲಿ ಕಳೆದ ಐದಾರು ವರ್ಷಗಳಲ್ಲಿ ಕಾಡಾನೆ ದಾಳಿಗೆ 8-10 ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಆದರೆ, ಇಷ್ಟು ದಿನಗಳ ಕಾಲ ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಇದ್ದ ಆನೆ ಭೀತಿ ಇದೀಗ ತಾಲೂಕು ಕೇಂದ್ರಕ್ಕೂ ಆವರಿಸಿದೆ. ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪದ ಮುದ್ರೆ ಮನೆ ಎಸ್ಟೇಟ್ ಬಳಿ ಹಾಡ ಹಗಲೇ ಕಾಡಾನೆ ರಾಜಾರೋಷವಾಗಿ ಓಡಾಡಿರೋದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
Chikkamagaluru: ಕಸ್ತೂರಿ ರಂಗನ್ ವರದಿಯ ವಿರುದ್ದ ಮಲೆನಾಡಿನ ಜನರ ಆಕ್ರೋಶ: ಅಸಲಿಗೆ ಏನಾಯ್ತು?
ಒಂಟಿ ಸಲಗ ಯಾವಾಗ ಎಲ್ಲಿ ಹೇಗೆ ಬರುತ್ತೋ ಎಂಬ ಆತಂಕದಲ್ಲಿ ದಿನ ದೂಡುವಂತಾಗಿದೆ. ಕಳೆದ 20 ದಿನಗಳ ಹಿಂದಷ್ಟೇ ಆಲ್ದೂರು ಸಮೀಪದ ಗೋರಿಗಂಡಿ ಗ್ರಾಮದಲ್ಲಿ ಕಾಡಾನೆ ಮನೆ ಬಾಗಿಲಿಗೆ ಬಂದಿತ್ತು. ಇದೀಗ ತಾಲೂಕು ಕೇಂದ್ರದ ಪಕ್ಕಕ್ಕೂ ಆಗಮಿಸಿದ್ದು ಮಲೆನಾಡಿಗರು ನಮಗೆ ಆನೆ ಹಾವಳಯಿಂದ ಮುಕ್ತಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕಾಡಂಚು ಹಾಗೂ ನಗರದ ಅಂಚಿನಲ್ಲೇ ಕಾಡಾನೆ ಕಂಡ ಜನ ಹಾಗೂ ಕೂಲಿ ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ನಿತ್ಯ ಒಂದಿಲ್ಲೊಂದು ಗ್ರಾಮದಲ್ಲಿ ಆನೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿರೋ ಹಳ್ಳಿಗರು ಕೂಡಲೇ ಆನೆಯನ್ನ ಸೆರೆ ಹಿಡಿಯಬೇಕು ಅಥವ ಕಾಡಿಗೆ ಅಟ್ಟಬೇಕು ಎಂದು ಆಗ್ರಹಿಸಿದ್ದಾರೆ.
ತೀವ್ರ ಬರ: ನಮೀಬಿಯಾ ನಂತರ ಜಿಂಬಾಬ್ವೆಯಲ್ಲೂ 200 ಆನೆಗಳ ಹತ್ಯೆಗೆ ಪ್ಲಾನ್
ಕಾಡು ಕೋಣಗಳು ಕಾಫಿ ತೋಟಕ್ಕೆ ಲಗ್ಗೆ ಆತಂಕದಲ್ಲಿ ಮಲೆನಾಡಿಗರು: ಒಂದೆಡೆ ಕಾಡಾನೆಗಳ ಉಪಟಳ ಮಲೆನಾಡಿನಲ್ಲಿ ಮುಂದುವರೆದಿದ್ದರೆ, ಇತ್ತ ಕೊಪ್ಪ ತಾಲೂಕಿನಲ್ಲಿ ಕಾಡು ಕೋಣಗಳ ಹಾವಳಿ ದಿನೇ -ದಿನೇ ಹೆಚ್ಚಾಗುತ್ತಿದೆ. ಕೊಪ್ಪ ತಾಲೂಕಿನ ಬಸರೀಕಟ್ಟೆ ಗ್ರಾಮದಲ್ಲಿ 15ಕ್ಕೂ ಹೆಚ್ಚು ಕಾಡುಕೋಣಗಳ ಗುಂಪು ಕಾಣಿಸಿಕೊಂಡಿದ್ದು ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಪ್ರತಿ ನಿತ್ಯ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಾಟ ನಡೆಸುತ್ತಿರುವ ಕಾಡು ಕೋಣಗಳ ಗುಂಪು ಕಾಫಿ ಗಿಡಗಳನ್ನೆಲ್ಲಾ ಮುರಿದು ಹಾಕುತ್ತಿವೆ. ಇನ್ನೆರಡು ತಿಂಗಳಲ್ಲಿ ಕಾಫಿ ಕಟಾವಿಗೆ ಬರಲಿದ್ದು ಈ ಸಂದರ್ಭದಲ್ಲಿ ಕಾಡು ಕೋಣಗಳು ಬೆಳೆ ನಷ್ಟ ಮಾಡುತ್ತಿದ್ದು ಕಾಫಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಅರಣ್ಯ ಇಲಾಖೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.