Asianet Suvarna News Asianet Suvarna News

ಚಿಕ್ಕಮಗಳೂರು: ವಿಪರೀತ ಕಾಡಾನೆ ಕಾಟ,  ಓಡಿಸಲು ಹರಸಾಹಸ  ಪಡುತ್ತಿರುವ ಅರಣ್ಯ ಇಲಾಖೆ

ಮೂಡಿಗೆರೆಯಲ್ಲಿ ಕಾಡಾನೆ ಕಾಟ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾಡಾನೆಗಳ ಪ್ರತ್ಯಕ್ಷ. ಕಾಡಾನೆ ಓಡಿಸಲು ಹರಸಾಹಸ  ಪಡುತ್ತಿರುವ ಚಿಕ್ಕಮಗಳೂರು ಅರಣ್ಯ ಇಲಾಖೆ.

Chikkamagaluru Forest department is struggling for driving away wild elephants gow
Author
First Published Oct 10, 2022, 7:27 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಅ.10): ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದ್ದು, ಜನರು ಪ್ರತಿನಿತ್ಯ ಪ್ರಾಣ ಭಯದಲ್ಲಿ ಜೀವನ ಸಾಗಿಸುವಂತಾಗಿದೆ.ಮೂಡಿಗೆರೆ ತಾಲೂಕಿನಲ್ಲಿ ಭೈರವನ ಅಟ್ಟಹಾಸಕ್ಕೆ ಜನರು ತತ್ತರಿಸಿಹೋಗಿದ್ದಾರೆ.ಮಲೆನಾಡು ಎಂದಾಕ್ಷಣ ಕಣ್ಣೆದುರಿಗೆ ಬರುವುದು ಕಾಫಿ, ಅಡಿಕೆ ತೋಟ, ಬೆಟ್ಟಗುಡ್ಡಗಳು ನದಿತೊರೆಗಳು ದೂರಕ್ಕೊಂದು ಒಂಟಿ ಮನೆಗಳು ಆದರೆ ಜನರಿಗೆ ಕಾಡಾನೆಗಳ ಕಾಟ ಶುರುವಾಗಿದ್ದು, ಯಾವ ಜಾಗದಲ್ಲಿ ಆನೆ ನಿಂತಿದೆಯೋ ಎಂಬ ಭಯದಲ್ಲಿಯೇ ಕೂಲಿಕಾರ್ಮಿಕರು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕು ಬಿದರಹಳ್ಳಿ, ಬಂಕೇನಹಳ್ಳಿ, ಜೇನುಬೈಲು, ಲೋಕವಳ್ಳಿ ಗ್ರಾಮಗಳ ಸುತ್ತಮುತ್ತ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಜಮಿ ನು, ತೋಟಗಳಿಗೆ ದಾಳಿ ಇಟ್ಟು ಬೆಳೆನಾಶ ಮಾಡುತ್ತಿವೆ. ಇನ್ನೂ ಗುತ್ತಿ, ಕಂದೂರು ಗ್ರಾಮಗಳ ಸುತ್ತಮುತ್ತ ಭೈರವ  ಒಂಟಿ ಸಲಗ ದಾಂಧನೆ ಮಿತಿಮೀರಿದೆ.ಸಕಲೇಶಪುರದಿಂದ 5 ಆನೆಗಳು ಕಾಫಿನಾಡಿಗೆ ಕಾಲಿಟ್ಟಿದ್ದು,  ಅದರಲ್ಲಿ 2 ಕಾಡಾನೆಗಳನ್ನು ಅರಣ್ಯ ಇಲಾಖೆಯವರು ಕಾಡಿಗೆ ಅಟ್ಟಿದ್ದರೆ, ಉಳಿದ ಮೂರು ಆನೆಗಳಿಗೆ ದಾರಿಕಾಣದಾಗಿದೆ. ಹಾಡುಹಗಲಿನಲ್ಲಿಯೇ ಯಾರ ಭಯವಿಲ್ಲದೆ ರಾಜಾರೋಷವಾಗಿ  ರಾಷ್ಟ್ರೀಯ ಹೆದ್ದಾರಿಯನ್ನು ಹಾದುಹೋಗುತ್ತಿವೆ. ಆನೆಗಳು ಬಂದಿವೆ ಎಂದು ಅರಣ್ಯ ಇಲಾಖೆಗೆ ಸಾರ್ವಜನಿಕರು ವಿಷಯ ಮುಟ್ಟಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸುವ ಅರಣ್ಯ ಇಲಾಖೆ ಸಿಬ್ಬಂದಿಗಳು ಪಟಾಕಿಸಿಡಿಸುತ್ತಾರೆ. ಯಾರೂ ಮನೆಯಿಂದ ಹೊರಗೆ ಬಾರದಂತೆ ಮೈಕಿನಲ್ಲಿ ತಿಳಿಸಿ ಕಚೇರಿಗೆ ಮರಳುತ್ತಾರೆ.  

ಒಂಟಿ ಸಲಗ ಭೈರವನ ಅಟ್ಟಹಾಸ ಮೇರೆಮೀರಿದೆ.ಇತ್ತೀಚೆಗೆ ವ್ಯಕ್ತಿಯೊಬ್ಬರ ಜೀವವನ್ನು ಬಲಿ ಪಡೆದುಕೊಂಡಿರುವ ಈ ಆನೆಯನ್ನುಹಿಡಿಯಲು ಬಂದ ಸಕ್ರೆಬೈಲಿನ ಆನೆಗಳ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿವೆ. ಕಾರಣ ಬಲಿಷ್ಟವಾಗಿರುವ ಭೈರವನ ಸೆರೆಗೆ ನಾಗರಹೊಳೆ  ಆನೆಗಳ ಬರಬೇಕೆಂದು ಬಹಿರಂಗವಾಗಿಯೇ ಉಪ ಅರಣ್ಯ  ಸಂರಕ್ಷಣಾಧಿಕಾರಿ ಕ್ರಾಂತಿ ಹೇಳಿದ್ದಾರೆ.

ಚಿಕ್ಕಮಗಳೂರು: ತೋಟದಲ್ಲಿ ತೋಡಿದ್ದ ಹೊಂಡಕ್ಕೆ ಬಿದ್ದು ಕಾಡಾನೆ ಸಾವು

ಬಂಡಿಪುರ ಆನೆ ಬರಲಿವೆಯೇ ?
ನಾಗರಹೊಳೆ ಆನೆಗಳ ಮೈಸೂರು ದಸರಾದಲ್ಲಿ ಪಾಲ್ಗೊಂಡು ಅಂಬಾರಿಯನ್ನು ಹೊತ್ತು ಯಶಸ್ವಿಯಾಗಿ ದಸರಾ ಮುಗಿಸಿ ಕಾಡಿಗೆ ಹಿಂದಿರುಗಿವೆ. ಮಲೆನಾಡಿನ ಜನರಗೆ ಶಾಪವಾಗಿ ಪರಿಣಮಿಸಿರುವ ಆನೆಗಳನ್ನು ಹಿಡಿಯಲು ಮುಖ್ಯಮಂತ್ರಿಗಳು ಯಾವಾಗ ಪತ್ರ ನೀಡುತ್ತಾರೆ ನೋಡಬೇಕಿದೆ. ಮಾಹಿತಿಯ ಪ್ರಕಾರ ಮುಂದಿನ ವಾರ ನಾಗರಹೊಳೆಯ ಆನೆಗಳು ಕಾಫಿನಾಡಿಗೆ ಕಾಲಿಟ್ಟು ಪುಂಡಾನೆ ಸೆರೆಗೆ ಮುಂದಾಗಲಿವೆ.

ಮಲೆನಾಡಿನಲ್ಲಿ ಐದು ಕಾಡಾನೆಗಳಿಂದ ಭೀತಿ, ಆನೆ ಹಾವಳಿಗೆ ಹೈರಾಣದ ಜನ!

ಪತ್ರದಲ್ಲೂ ರಾಜಕೀಯ: ಕಾಡಾನೆ ಹಿಡಿಯಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪತ್ರತಂದಿರುವುದಾಗಿ ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಹೇಳಿಕೆ ನೀಡಿದರೆ, ನಾನೇ ಮೊದಲು ಮುಖ್ಯಮಂತ್ರಿಗಳಿಂದ ಪತ್ರ ತಂದಿದ್ದು, ಸದ್ಯದಲ್ಲೆ ಆನೆ ಹಿಡಿಯಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳುತ್ತಾರೆ. ಪತ್ರತರುವಲ್ಲಿನ ರಾಜಕಾರಣವನ್ನು ಕೈಬಿಟ್ಟು ಆನೆಹಾವಳಿಯಿಂದ ಮಲೆನಾಡು ಭಾಗದ ಜನರ ರಕ್ಷಿಸಲು ಕೆಲಸ ಮೊದಲು ಆಗಬೇಕಾಗಿದೆ.
 

Follow Us:
Download App:
  • android
  • ios