Asianet Suvarna News Asianet Suvarna News

ಕಾಫಿನಾಡಲ್ಲಿ ಮಳೆ ಕೊರತೆ, 64 ಜನ ರೈತರು ಆತ್ಮಹತ್ಯೆ!

ಚಿಕ್ಕಮಗಳೂರಲ್ಲಿ ನೀರಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಅಂದ್ರೆ ಯಾರೂ ನಂಬಲ್ಲ. ಆದ್ರೆ, ಸತ್ಯ.  ಮಳೆ-ಬೆಳೆ ಇಲ್ಲದೆ ಸಾಲದ ಸುಳಿಯಲ್ಲಿ ರೈತರು ಕೂಡ ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ. 

Chikkamagaluru farmers committed  self death for water crisis gow
Author
First Published Mar 5, 2024, 6:04 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.5): ಸಪ್ತ ನದಿಗಳ ನಾಡು ಅಂತೆಲ್ಲಾ ಕರೆಸಿಕೊಳ್ಳೋ ಕಾಫಿನಾಡು ಚಿಕ್ಕಮಗಳೂರಲ್ಲಿ ನೀರಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಅಂದ್ರೆ ಯಾರೂ ನಂಬಲ್ಲ. ಆದ್ರೆ, ಸತ್ಯ. ಎಷ್ಟೇ ಮಳೆ ಬಂದ್ರು ಹರಿದು ಹೋಗಿ ನದಿ ಸೇರೋ ಕಾಫಿನಾಡು ಅಪ್ಪಟ ಮಳೆಯಾಶ್ರಿತ ಜಿಲ್ಲೆ. ಒಂದು ವರ್ಷ ಮಳೆ ಬಾರದಿದ್ರು ಇಲ್ಲಿನ ಪರಿಸ್ಥಿತಿ ಘನಘೋರ. ಹಾಗಾಗಿ, ಮಳೆ-ಬೆಳೆ ಇಲ್ಲದೆ ಸಾಲದ ಸುಳಿಯಲ್ಲಿ ರೈತರು ಕೂಡ ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ. 

11 ತಿಂಗಳಲ್ಲಿ 64 ಜನ ರೈತರು ಆತ್ಮಹತ್ಯೆ
ವಾರ್ಷಿಕ ದಾಖಲೆ ಮಳೆ ಸುರಿದು ಅರ್ಧ ರಾಜ್ಯಕ್ಕೆ ನೀರುಣಿಸುವ ಮಳೆ ತವರು ಕಾಫಿನಾಡಲ್ಲಿ ಮಳೆ ಇಲ್ಲದೆ 11 ತಿಂಗಳಲ್ಲಿ ಬರೋಬ್ಬರಿ 64 ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಫಿನಾಡಲ್ಲಿ ಎಷ್ಟೆ ಮಳೆ ಸುರಿದ್ರು ಹರಿದು ನದಿ ಸೇರುತ್ತೆ. ಮುಂದಿನ ವರ್ಷ ಮಲೆನಾಡಿಗರು ಮತ್ತೆ ಮಳೆಯನ್ನೇ ಆಶ್ರಯಿಸಬೇಕು. ಆದ್ರೆ, 2023ರಲ್ಲಿ ತೀವ್ರ ಮಳೆಯ ಅಭಾವದಿಂದ ಕಾಫಿನಾಡಲ್ಲಿ 64 ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Rameshwaram Cafe Blast ಬೆನ್ನಲ್ಲೇ ಸಿಎಂ, ಡಿಸಿಎಂ ಸೇರಿ ರಾಜ್ಯ ಸರ್ಕಾರಕ್ಕೆ ಬಾಂಬ್‌ ಬೆದರಿಕೆ ಮೇಲ್!

ಚಿಕ್ಕಮಗಳೂರಲ್ಲಿ 14. ಮೂಡಿಗೆರೆ-ಎನ್.ಆರ್.ಪುರದಲ್ಲಿ ತಲಾ 4. ಕೊಪ್ಪ 6. ಶೃಂಗೇರಿ 7. ತರೀಕೆರೆ-ಅಜ್ಜಂಪುರದಲ್ಲಿ ತಲಾ 2. ಕಡೂರಲ್ಲಿ ಬರೋಬ್ಬರಿ 25 ಜನ ಅನ್ನದಾತರು ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾರೆ. ಕಾಫಿನಾಡು ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಮೂರು ಹವಾಗುಣ ಹೊಂದಿರೋ ವಿಶಿಷ್ಟ ಜಿಲ್ಲೆ. ಮಲೆನಾಡಲ್ಲಿ ಮಳೆ ಸುರಿಯುತ್ತಿದ್ರೆ, ಬಯಲುಸೀಮೆಯಲ್ಲಿ ಹನಿ ಮಳೆಯೂ ಇರಲ್ಲ. ಆದ್ರೆ, 2023ರಲ್ಲಿ ಇಡೀ ಜಿಲ್ಲೆಯಲ್ಲಿ ವಾಡಿಕೆ ಮಳೆಯ ಅರ್ಧದಷ್ಟು ಮಳೆ ಬಾರದ ಕಾರಣ ಅಡಿಕೆ, ಕಾಫಿ, ಮೆಣಸು, ತೆಂಗು, ಆಹಾರ ಬೆಳೆಗಳು ನಾಶವಾದ ಹಿನ್ನೆಲೆ ಅನ್ನದಾತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಸರ್ಕಾರ ಕೂಡಲೇ ಅನ್ನದಾತರ ಬೆನ್ನಿಗೆ ನಿಲ್ಲದಿದ್ರೆ ಈ ವರ್ಷ ಮತ್ತಷ್ಟು ರೈತರು ಆತ್ಮಹತ್ಯೆಗೆ ಶರಣಾಗೋದು ಗ್ಯಾರಂಟಿ ಅಂತಾರೆ ರೈತ ಮುಖಂಡರಾದ ಗುರುಶಾಂತಪ್ಪ.

17 ರೈತರ ಕುಟುಂಬಕ್ಕೆ ಪರಿಹಾರ ಬಾಕಿ: 
ಕಳೆದ 11 ತಿಂಗಳು ಅಂದ್ರೆ 2023ರ ಏಪ್ರಿಲ್ ನಿಂದ 2024ರ ಫೆಬ್ರವರಿ 23ರವರೆಗೆ ಕಾಫಿನಾಡು ಜಿಲ್ಲೆಯೊಂದರಲ್ಲೇ 64 ಜನ ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ 714 ಜನ. ಕಾಫಿನಾಡ 64 ಜನರಲ್ಲಿ ಸರ್ಕಾರ 11 ರೈತರ ಆತ್ಮಹತ್ಯೆಗೆ ಪರಿಹಾರ ನೀಡುವುದನ್ನ ತಿರಿಸ್ಕರಿಸಿದೆ. 50 ಜನರಿಗೆ ಪರಿಹಾರ ನೀಡಲು ಮುಂದಾಗಿದ್ದು, 33 ಜನರಿಗೆ ಪರಿಹಾರ ನೀಡಿದೆ. ಇನ್ನೂ 17 ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕಿದೆ.

FSL ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದಿದೆ: ಡಾ ಜಿ ಪರಮೇಶ್ವರ್

2019 ರಿಂದ 2022ರವರೆಗೆ ಕಾಫಿನಾಡ ಮಲೆನಾಡು-ಅರೆಮಲೆನಾಡು, ಬಯಲುಸೀಮೆ ಭಾಗದಲ್ಲೂ ಧಾರಾಕಾರ ಮಳೆ ಸುರಿದಿತ್ತು. ಕೆರೆಕಟ್ಟೆಗಳು ತುಂಬಿ ಕೋಡಿ ಬಿದಿದ್ದವು. ಆದ್ರೆ, 2023ರಲ್ಲೂ ಮಳೆ ನಂಬಿ ರೈತರು ಸಾಲ-ಸೋಲ ಮಾಡಿ, ಹೆಂಡತಿ-ಮಕ್ಕಳ ಒಡವೆ ಅಡವಿಟ್ಟು ಬೆಳೆ ಹಾಕಿದ್ರು. ಆದ್ರೆ, ಮಳೆ ಕೈಕೊಟ್ಟ ಹಿನ್ನೆಲೆ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ, ಸರ್ಕಾರ ರೈತರ ನೆರವಿಗೆ ಬಂದಿಲ್ಲ ಎಂದು ರೈತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ಫ್ರೀ...ಫ್ರಿ... ಅನ್ನುತ್ತೆ. ರೈತರಿಗೆ ಏನು ಕೊಟ್ಟಿದೆ. ನಮಗೆ ಯಾವ್ದು ಫ್ರೀ ಬೇಡ. ನೀರಾವರಿ ಸೌಲಭ್ಯ ನೀಡಲಿ. ಬೆಳೆ ಬೆಳೆಯುವ ಮೂಲಕ ಸರ್ಕಾರಕ್ಕೆ ನಾವೇ ಹಣ ಕೊಡ್ತೀವಿ ಅಂತಿದ್ದಾರೆ ರೈತರು.ಒಟ್ಟಾರೆ, ಜಗತ್ತು ನಿಂತಿರೋದು ಮಳೆ ಮೇಲೆ. ಮಳೆ ಇದ್ರೆ ಮನುಷ್ರು. ಮಳೆ ಇದ್ರೆ ಬೆಳೆ. ಬೆಳೆ ಇದ್ರೆ ಬದುಕು. ಆದ್ರೆ, ಮಳೆ ಇಲ್ಲದೆ ಬೆಳೆ ಹಾಳಾಯ್ತು ಎಂದು ಅನ್ನದಾತ ನೇಣಿನ ಕುಣಿಕೆಗೆ ಕೊರಳೊಡ್ತಿರೋದು ನಿಜಕ್ಕೂ ದುರಂತ.

Follow Us:
Download App:
  • android
  • ios