Asianet Suvarna News Asianet Suvarna News

Chikkamagaluru: ಶ್ರೀರಾಮಸೇನೆ ವತಿಯಿಂದ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ

ಶ್ರೀರಾಮಸೇನೆ ವತಿಯಿಂದ ನವೆಂಬರ್ 7ರಿಂದ 13ರವರೆಗೆ ಚಿಕ್ಕಮಗಳೂರು ತಾಲ್ಲೂಕಿನ  ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, 4 ಸಾವಿರದಿಂದ 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

Sri Rama Sena To Hold Datta Mala Abhiyan From November 7th To 13th In Chikkamagaluru Datta Peeta gvd
Author
First Published Nov 4, 2022, 7:43 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.04): ಶ್ರೀರಾಮಸೇನೆ ವತಿಯಿಂದ ನವೆಂಬರ್ 7ರಿಂದ 13ರವರೆಗೆ ಚಿಕ್ಕಮಗಳೂರು ತಾಲ್ಲೂಕಿನ  ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, 4 ಸಾವಿರದಿಂದ 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದು, 5 ಸಾವಿರ ಮಂದಿ ದತ್ತಮಾಲಾಧಿಕಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.  

ನವೆಂಬರ್ 7ರಿಂದ 13 ರವರೆಗೆ ದತ್ತಪೀಠದಲ್ಲಿ ನಡೆಯುವ ಅಭಿಯಾನ: ನವೆಂಬರ್ 7ರಂದು ನಗರದ ಶಂಕರಮಠ ಹಾಗೂ ಇತರೆ ಸ್ಥಳಗಳಲ್ಲಿ ದತ್ತಮಾಲಾಧಾರಣೆ ನಡೆಯಲಿದ್ದು, ನವೆಂಬರ್ 12ರಂದು ಭಿಕ್ಷಾಟನೆ ನಡೆಸಿ, ನವೆಂಬರ್ 13ರಂದು ನಗರದ ಶಂಕರಮಠ ಬಳಿಯಿಂದ ಸ್ವಂತ ವಾಹನಗಳಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ಪಾದುಕೆ ದರ್ಶನ, ಹೋಮ, ಪೂಜೆ, ಧಾರ್ಮಿಕ ಸಭೆ ನಡೆಸಲಿದ್ದಾರೆ. ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಪೂಜಾ ವಿಧಿವಿಧಾನ ಹಾಗೂ ಇತರೆ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ವಿವಾದವಿದ್ದು, ಈ ವಿಷಯವು ನ್ಯಾಯಾಲಯದಲ್ಲಿ ವಿಚಾರಣೆಯಿದೆ.

Chikkamagaluru: ಬಾಸೂರು ಹುಲ್ಲುಗಾವಲು ಪ್ರದೇಶದಲ್ಲಿ ಕುರಿಗಳು: ಭವಿಷ್ಯದಲ್ಲಿ ಮೇವು ಸಿಗದ ಪರಿಸ್ಥಿತಿ

ಚಿಕ್ಕಮಗಳೂರು ನಗರ ಮತ್ತು ಇತರೆ ಪ್ರದೇಶಗಳು ಮತೀಯ ಸೂಕ್ಷ್ಮವಾಗಿರುವುದರಿಂದ ಅಭಿಯಾನದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ನ್ಯಾಯಾಲಯದ ಆದೇಶವನ್ನು ಕಾಪಾಡುವ ದೃಷ್ಟಿಯಿಂದ ನಿಬಂಧನೆ ವಿಧಿಸಿ ಜಿಲ್ಲಾಧಿಕಾರಿಕೆ.ಎನ್.ರಮೆಶ್ ಅಧಿಸೂಚನೆ ಹೊರಡಿಸಿದ್ದಾರೆ. ದತ್ತಮಾಲಾಧಾರಣೆ ಮತ್ತು ಇತರೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಳಸುವ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳದಲ್ಲಿ ಸದರಿ ಸಂಸ್ಥೆ, ಸ್ಥಳ ಯಾರ ಯಾವ ಅಧೀನದಲ್ಲಿದೆ ಎಂಬುದನ್ನು ತಿಳಿದು ಅವರಿಗೆ ಕಾರ್ಯಕ್ರಮದ ಮಾಹಿತಿಯನ್ನು ಪೂರ್ವಯೋಜಿತವಾಗಿ ನೀಡಿ, ಸೂಕ್ತಾನುಸಾರ ಅನುಮತಿ ಪಡೆದುಕೊಳ್ಳಬೇಕು, ಅವುಗಳ ಕಟ್ಟುಪಾಡು, ಪದ್ಧತಿ, ನೀತಿನಿಯಮಗಳಿಗೆ ಮತ್ತು ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ ಎಂದಿದ್ದಾರೆ.

ಮಾರಕಾಸ್ತ್ರ, ಶಸಾಸ್ತ್ರ ಆಯುಧ ನಿಷೇಧ: ಕಾರ್ಯಕ್ರಮದ ಅವಧಿಯಲ್ಲಿ ಯಾವುದೇ ಮಾರಕಾಸ್ತ್ರ,  ಶಸಾಸ್ತ್ರ, ಆಯುಧಗಳನ್ನು ಹಾಗೂ ದೈಹಿಕವಾಗಿ ಹಿಂಸೆಯನ್ನುಂಟು ಮಾಡುವ ಯಾವುದೇ ಸಲಕರಣೆಗಳನ್ನು ಹಿಡಿದು ಓಡಾಡುವುದು ಹಾಗೂ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯಾವುದೇ ರೀತಿಯ ಸ್ಫೋಟಕ, ಸಿಡಿಮದ್ದುಗಳ ಸಾಗಾಣಿಕೆ-ದಾಸ್ತಾನು ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾವುದೇ ಖಾಸಗಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸುವ ಮತ್ತು ವಿರೂಪಗೊಳಿಸುವ, ಯಾವುದೇ ರೀತಿಯ ಬಂದ್, ಮುಷ್ಕರ, ಪ್ರತಿಕೃತಿದಹನ, ಪ್ರದರ್ಶನ ಹಾಗೂ ಪೂರಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಯಾವುದೇ ವ್ಯಕ್ತಿ, ಧರ್ಮ, ಕೋಮು, ಜಾತಿ, ಪಂಥ, ಸರ್ಕಾರಿ ಸಂಸ್ಥೆಗಳು, ಸಂಘಟನೆಗಳು, ಸ್ಥಳಗಳು, ಹಾಗೂ ಕಾರ್ಯನಿರತ, ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಅಥವಾ ನಿಂದಿಸುವ ಅವಾಚ್ಯ ಶಬ್ದಗಳ ಬಳಕೆ, ಆವೇಶಕಾರಿ, ಪ್ರಚೋದನಾಕಾರಿ ಭಾಷಣ, ಹಾಡು, ಗಾಯನ, ಪ್ರದರ್ಶನ, ಪ್ರಕಟಣೆಗಳ ಬಳಕೆ, ಭಿತ್ತಿಪತ್ರ, ಧ್ವಜ, ಬ್ಯಾನರ್‌ ಇತ್ಯಾದಿ ರೂಪಗಳಲ್ಲಿ ಪ್ರಚುರಪಡಿಸುವ, ಕೂಗುವ ಅಥವಾ ಬಿತ್ತರಗೊಳಿಸುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

ಬ್ಯಾನರ್ ಬಂಟಿಂಗ್ಸ್‌ಗೂ ನಿಷೇಧ?: ಸರ್ಕಾರಿ, ಅರೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಮತ್ತು ಆಸ್ತಿಗಳ ಮೇಲೆ ಹಾಗೂ ಅನುಮತಿ ಇಲ್ಲದೇ ಧಾರ್ಮಿಕ ಸ್ಥಳಗಳ ಮೇಲೆ ಯಾವುದೇ ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬರಹಗಳು ಹಾಗೂ ಆಕೃತಿಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಇತರೆ ಸಾರ್ವಜನಿಕರಿಗೆ, ಜನಸಾಮಾನ್ಯರಿಗೆ ಅವರ ದೈನಂದಿನ ಚಟುವಟಿಕೆ ಹಾಗೂ ವ್ಯವಹಾರಗಳಿಗೆ, ಸಂಚಾರ ಮತ್ತು ಸಂಪರ್ಕಗಳಿಗೆ ಧಕ್ಕೆಯಾಗದಂತೆ ಕ್ರಮವಹಿಸುವುದು ಆಯಾ ಸಂಘಟಕರ ಜವಾಬ್ದಾರಿಯಾಗಿರುತ್ತದೆ. 

ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿದರ್ಗಾ, ಐ.ಡಿ ಪೀಠ ಹಾಗೂ ಸಂಚಾರ ಮಾರ್ಗಗಳಲ್ಲಿ ಪಾಲಿಸಬೇಕಾದ ನಿಬಂಧನೆಗಳು. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಘಟನಾಕಾರರು, ದತ್ತಮಾಲಾ ಧಾರಿಗಳು, ಭಕ್ತಾದಿಗಳು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಮಾರ್ಗದಿಂದ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾನಿ ದರ್ಗಾ, ಐ.ಡಿ ಪೀಠಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಮಾರ್ಗಗಳಲ್ಲಿ ಯಾವುದೇ ಘೋಷಣೆ, ಅವಾಚ್ಯ ಶಬ್ದಗಳ ಬಳಕೆ, ನಿಂದನೆ, ವೇದಿಕೆ ನಿರ್ಮಾಣ, ಭಾಷಣ, ಸ್ಫೋಟಕ ಬಳಕೆ, ಮದ್ಯಪಾನ, ಬ್ಯಾನರ್ ಭಿತ್ತಿಪತ್ರಗಳ ಪ್ರದರ್ಶನ, ಪ್ರತಿಕೃತಿ ದಹನ, ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ, ವಿರೂಪಗೊಳಿಸುವ ಮತ್ತು ನಿಂದನಾರ್ಹ ಚಟುವಟಿಕೆಗಳನ್ನು ಮತ್ತು ಸಂಚಾರ ಹಾಗೂ ಸಂಪರ್ಕಕ್ಕೆ ಯಾವುದೇ ಅಡೆತಡೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. 

Chikkamagaluru: ಹಿರೇಮಗಳೂರಿನ ಶ್ರೀ ಕೋದಂಡರಾಮ ದೇವಾಲಯದಲ್ಲಿ ಕನ್ನಡದಲ್ಲಿ ಪೂಜೆ

ಪಾದುಕೆ ಇರುವ ಗುಹೆ ಪ್ರವೇಶದಿಂದ ನಿರ್ಗಮದವರೆಗಿನ ಸ್ಥಳದಲ್ಲಿ ನ್ಯಾಯಾಲಯದ ವಿವಿಧ ಆದೇಶಗಳನ್ನು ಉಲ್ಲಂಘನೆಯಾಗದಂತೆ ಕಡ್ಡಾಯವಾಗಿ ಪಾಲಿಸಬೇಕು. ಆ ಸ್ಥಳದಲ್ಲಿ ಭಜನೆ, ಕರ್ಪೂರ ಬಳಕೆ, ಪ್ರಸಾದ ವಿನಿಯೋಗ, ಧ್ಯಾನ, ಪ್ರತಿಮೆಗಳ ಬಳಕೆ ಹಾಗೂ ಇತ್ಯಾದಿ ಪೂಜಾ ವಿಧಾನಗಳನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಪಾದುಕೆ ದರ್ಶನ ಹೊರತುಪಡಿಸಿ ಪಾದುಕೆ ಸ್ಪರ್ಶಿಸುವ ಅಥವಾ ಮುಟ್ಟುವ ಯಾವುದೇ ಕ್ರಮಗಳಿಗೆ ಅವಕಾಶವಿಲ್ಲ. ಕಾರ್ಯಕ್ರಮದ ಸಂಘಟಕರು ಸಂಯೋಜಕರು ಹಾಗೂ ಸಾರ್ವಜನಿಕರು ಮೇಲಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಉಲ್ಲಂಘನೆಗಳು ಶಿಕ್ಷಾರ್ಹವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios