ಬಿಪಿಎಲ್‌ ಕಾರ್ಡುದಾರರಿಗೆ ನೋಟಿಸ್‌, ದಂಡ ಸಲ್ಲ​ದು. ಬಿಜೆಪಿ ಸರ್ಕಾರದಿಂದ ಬಡವರ ಮೇಲೆ ನಿರಂತರವಾಗಿ ಗದಾಪ್ರಹಾರ ಶಾಸಕ ಟಿ.ಡಿ.ರಾಜೇಗೌಡ ಆರೋಪ.

ನರಸಿಂಹರಾಜಪುರ (ಆ.8) : ಬಿಜೆಪಿ ಸರ್ಕಾರ ಬಂದ ಮೇಲೆ ಬಡವರು, ರೈತರು, ಆರ್ಥಿಕವಾಗಿ ಹಿಂದುಳಿದ ವರ್ಗದವರ ಮೇಲೆ ನಿರಂತರವಾಗಿ ಗದಾಪ್ರಹಾರ ನಡೆಸುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು. ಭಾನುವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ​ರು, ನಾಲ್ಕು ಚಕ್ರ ವಾಹನ ಇರುವವರ ಬಿಪಿಎಲ್‌ ಕಾರ್ಡು(BPL Card)ಗಳನ್ನು ರದ್ದುಮಾಡಲು ಸರ್ಕಾರ ಆದೇಶ ಮಾಡಿದೆ. ಇದ​ರ ಬೆನ್ನಲ್ಲೇ ಅಧಿ​ಕಾರಿಗಳು ನಾಲ್ಕು ಚಕ್ರ ವಾಹನ ಇರುವವರಿಗೆ ನೋಟಿಸ್‌ ಜಾರಿ ಮಾಡಿದ್ದಲ್ಲದೆ ಸಾವಿರಾರು ರು. ದಂಡ ಸಹ ವಿ​ಧಿಸಿದೆ ಎಂದು ದೂರಿ​ದರು.

ಪಿಂಚಣಿ ಇಲ್ಲ, ತುತ್ತು ಅನ್ನಕ್ಕಾಗಿ ಬಿಪಿಎಲ್ ಕಾರ್ಡನ್ನು ಆಶ್ರಯಿಸಿದ ಮಾಜಿ ಶಾಸಕ!

ಬಡವರು ತಮ್ಮ ಜೀವನೋಪಾಯಕ್ಕಾಗಿ, ಮೀನು ಮಾರಾಟಕ್ಕಾಗಿ, ಮೊಬೈಲ್‌ ಕ್ಯಾಂಟೀನ್‌ಗಳಿಗೆ ನಾಲ್ಕು ಚಕ್ರಗಳ ವಾಹನಗಳನ್ನು ಸಾಲ ಮಾಡಿ ಖರೀದಿಸಿರು​ತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾಲ್ಕು ಚಕ್ರಗಳ ವಾಹನ ಇದ್ದವರ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿ ನೋಟಿಸ್‌ ನೀಡಿ ಸಾವಿರಾರು ರು. ದಂಡ ವಿ​ಧಿಸುತ್ತಿರುವುದು ನಿಜಕ್ಕೂ ಹೇಯಕೃತ್ಯ ಎಂದು ಟೀಕಿ​ಸಿ​ದರು.

ಕೊಪ್ಪದಲ್ಲಿ 79, ಎನ್‌.ಆರ್‌.ಪುರದಲ್ಲಿ 109 ಹಾಗೂ ಶೃಂಗೇರಿಯಲ್ಲಿ 31 ಜನ ಬಿಪಿಎಲ್‌ ಕಾರ್ಡುದಾರರಿಗೆ ನೋಟಿಸ್‌ ನೀಡಲಾಗಿದೆ. ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದರೆ ಆ ಕುಟುಂಬಗಳು ಸರ್ಕಾರದ ಆರೋಗ್ಯ ಸೌಲಭ್ಯ, ಸಾಲ ಸೌಲಭ್ಯ, ಇನ್ನಿತರೆ ಉಪಯುಕ್ತ ಯೋಜನೆಗಳಿಂದ ವಂಚಿತರಾಗುತ್ತವೆ. ಬಿಜೆಪಿ ಸರ್ಕಾರ ತನ್ನ ಕೈಯಲ್ಲಿ ಬಡವರ ಪರ ಕಾರ್ಯಕ್ರಮ ರೂಪಿಸಲು ಸಾಧ್ಯವಾಗದೇ ಇದ್ದರೆ ಕಾಂಗ್ರೆಸ್‌ ಸರ್ಕಾರದಲ್ಲಿ ಇದ್ದ ‘ಅನ್ನಭಾಗ್ಯ’ ಸೇರಿದಂತೆ ಬಡವರ ಪರವಾದ ಕಾರ್ಯಕ್ರಮ ಮುಂದುವರಿಸಲಿ ಎಂದು ಸಲಹೆ ನೀಡಿದರು.

ರೈತರು, ಬಡವರಿಗೆ ಅಗತ್ಯವಾಗಿರುವ ರಸಗೊಬ್ಬರ, ಡೀಸೆಲ್‌, ಗ್ಯಾಸ್‌, ಕೃಷಿ ಚಟುವಟಿಕೆಗಳ ಸಾಮಗ್ರಿಗಳ ಬೆಲೆ ಗಗನಕ್ಕೆ ಏರಿಸುವುದರ ಮೂಲಕ ರೈತರು, ಬಡವರಿಗೆ ಹೊರೆ ಹೊರಿಸಿದೆ. ಇದರಿಂದ ರೈತರು ಕೃಷಿ ಚಟುವಟಿಕೆ ಮಾಡುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ಸರ್ಕಾರ ರೈತರು, ಬಡವರ ವಿರೋಧಿ ಸರ್ಕಾರವಾಗಿದೆ. ಹಾಲು, ಮೊಸರು, ಮಜ್ಜಿಗೆ, ಮಂಡಕ್ಕಿ ಮೇಲೂ ಜಿಎಸ್‌ಟಿ ವಿಧಿಸಿದೆ. ಇದು ಬಿಜೆಪಿ ಸರ್ಕಾರದ ದುರಾಡಳಿತದ ಪರಮಾವಧಿ ಎಂದು ಟೀಕಿಸಿದರು.

ಅತಿವೃಷ್ಟಿಗೆ ಬಾರದ ಪರಿಹಾರ:

ಕಳೆದ ಬಾರಿ ಅತಿವೃಷ್ಟಿಸಂಭವಿಸಿ ಕೋಟ್ಯಂತರ ರು. ನಷ್ಟವಾಗಿದೆ. ಕಳೆದ ಬಾರಿ ಸಂಭ​ವಿ​ಸಿದ ಹಾನಿಗೆ ಇನ್ನೂ ಸರ್ಕಾರ ನಯಾ ಪೈಸೆ ಪರಿಹಾರಧನ ಬಿಡುಗಡೆ ಮಾಡಿಲ್ಲ. ಕಳೆದ ಬಾರಿ ಅತಿವೃಷ್ಟಿಸಂಭವಿಸಿ, ಹಾನಿಯಾದ ಸ್ಥಳಗಳಿಗೆ ಆರಗ ಜ್ಞಾನೇಂದ್ರ, ಸಿಎಂ ರಾಜಕೀಯ ಕಾರ್ಯದರ್ಶಿಗಳು ಭೇಟಿ ನೀಡಿದ್ದರು. ಈ ಬಾರಿಯೂ ಒಂದು ರುಪಾಯಿ ಪರಿಹಾರಧನ ಬಿಡುಗಡೆ ಮಾಡಿಲ್ಲ. ನರಸಿಂಹರಾಜಪುರ ತಾಲೂಕನ್ನು ಅತಿವೃಷ್ಟಿಪೀಡಿತ ತಾಲೂಕು ಎಂದು ಘೋಷಿಸಿಲ್ಲ. ಅನೇಕ ಅಪಾಯಕಾರಿ ಸೇತುವೆಗಳಿಗೆ ಕೈಪಿಡಿಗಳೇ ಇಲ್ಲ. ರಸ್ತೆಗಳು ಹಾಳಾಗಿ, ಜನರು, ಶಾಲಾ ಮಕ್ಕಳು ಕೆಸರುಗದ್ದೆಯಂತಹ ರಸ್ತೆಯಲ್ಲಿ ದುಸ್ಸಾಹಸದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಪಡಿತರ ಚೀಟಿಗಾಗಿ 3.39 ಲಕ್ಷ ಜನರ ಪರದಾಟ!

ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಪ.ಪಂ. ಸದಸ್ಯರಾದ ಪ್ರಶಾಂತ್‌ ಶೆಟ್ಟಿ, ಕಾಂಗ್ರೆಸ್‌ ನಗರ ಅಧ್ಯಕ್ಷ ಬಿ.ವಿ.ಉಪೇಂದ್ರ, ತಾಲೂಕು ಮುಖಂಡರಾದ ಅಂಜುಂ, ವಸೀಂ, ಗಫಾರ್‌, ಅನೀದ್‌, ಗಂಗಾಧರ ಇದ್ದರು.