Asianet Suvarna News Asianet Suvarna News

ಪಡಿತರ ಚೀಟಿಗಾಗಿ 3.39 ಲಕ್ಷ ಜನರ ಪರದಾಟ!

* ಅರ್ಜಿ ಸಲ್ಲಿಸಿ 3 ವರ್ಷಗಳಾದರೂ ಕಾರ್ಡ್‌ ಸಿಕ್ಕಿಲ್ಲ

* ಪಡಿತರ ಚೀಟಿಗಾಗಿ 3.39 ಲಕ್ಷ ಜನರ ಪರದಾಟ

* ಸರ್ಕಾರದಿಂದ ವಿಲೇವಾರಿ ಬಾಕಿ

* ಸರ್ಕಾರಿ ಸೌಲಭ್ಯದಿಂದ ಜನ ವಂಚಿತ

 

3 39 people are struggling to get ration card pod
Author
Bangalore, First Published Apr 18, 2022, 5:24 AM IST

ಸಂಪತ್‌ ತರೀಕೆರೆ

ಬೆಂಗಳೂರು(ಏ.18): ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಮಂದಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ. ಆಹಾರ ಇಲಾಖೆ ಮಾಹಿತಿ ಪ್ರಕಾರ, 2,97,772 ಬಿಪಿಎಲ್‌ ಮತ್ತು 42,201 ಎಪಿಎಲ್‌ ಸೇರಿದಂತೆ ಒಟ್ಟು 3.39 ಲಕ್ಷ ಪಡಿತರ ಚೀಟಿಗಳು ವಿಲೇವಾರಿಗೆ ಬಾಕಿಯಿದ್ದು, ಬಡ ಜನರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ 2019ರಿಂದ 2021ರ ಅಂತ್ಯದವರೆಗೂ ಹೊಸ ಪಡಿತರ ಚೀಟಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. 2022ರ ಜನವರಿಯಲ್ಲಿ ಪುನಃ ಅರ್ಜಿದಾರರಿಗೆ ನೂತನ ಪಡಿತರ ಚೀಟಿಗಳನ್ನು ವಿತರಿಸುವ ಕಾರ್ಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚಾಲನೆ ಕೊಟ್ಟಿದೆ. ಆದರೆ, ಇನ್ನೂ 3,39,973 ಅರ್ಜಿದಾರರಿಗೆ ಪಡಿತರ ಚೀಟಿ ವಿತರಣೆಯಾಗಿಲ್ಲ. ಹೀಗಾಗಿ ಹಲವರು ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳಿಂದ ವಂಚಿತರಾಗಿದ್ದು ಆಹಾರ ಇಲಾಖೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಆಹಾರ ಮತ್ತು ನಾಗರಿಕ ಇಲಾಖೆ ಮಾಹಿತಿ ಪ್ರಕಾರ, ಈವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಿಪಿಎಲ್‌ ಪಡಿತರ ಚೀಟಿ ಕೋರಿ 5,56,158 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 33010 ಅರ್ಜಿಗಳನ್ನು ಹಿಂಪಡೆಯಲಾಗಿದೆ. 4,52,508 ಅರ್ಜಿಗಳು ಸ್ವೀಕೃತಗೊಂಡಿದ್ದು 1,51,132 ಅನುಮೋದನೆಗೊಂಡಿವೆ. 1,07,196 ಅರ್ಜಿಗಳು ತಿರಸ್ಕೃತಗೊಂಡಿದ್ದು 2,58,328 ಅರ್ಜಿಗಳು ವಿಲೇವಾರಿಯಾಗಿವೆ. 2,97,830 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.

ಎಪಿಎಲ್‌ ಪಡಿತರ ಚೀಟಿ ಕೋರಿ ಸಲ್ಲಿಕೆಯಾದ 1,14,307 ಅರ್ಜಿಗಳ ಪೈಕಿ 3337 ಅರ್ಜಿಗಳನ್ನು ಹಿಂಪಡೆಯಲಾಗಿದೆ. 80211 ಅರ್ಜಿಗಳು ಸ್ವೀಕೃತಗೊಂಡಿದ್ದು 65,776 ಅರ್ಜಿಗಳು ಅನುಮೋದನೆಗೊಂಡಿವೆ. 6335 ತಿರಸ್ಕೃತಗೊಂಡಿದ್ದು, 72,101 ವಿಲೇವಾರಿಯಾಗಿವೆ. 42,201 ಅರ್ಜಿಗಳು ವಿಲೇವಾರಿಯಾಗಬೇಕಿದೆ.

ಅರ್ಹತೆ ಇಲ್ಲದವರು ಬಿಪಿಎಲ್‌ ಕಾರ್ಡ್‌ಗಳನ್ನು ಪಡೆದು ಇಲಾಖೆಗೆ ವಂಚಿಸಿದ್ದರು. ಕೆಲವರು ಅನಧಿಕೃತವಾಗಿ ಪಡಿತರ ಚೀಟಿಗಳನ್ನು ಹೊಂದಿದ್ದು, ಪಡಿತರ ಆಹಾರ ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಇಲಾಖೆಯು ಹೊಸದಾಗಿ ಸಲ್ಲಿಸಿದ ಅರ್ಜಿಗಳ ವಿಲೇವಾರಿಯನ್ನು 2017ರಲ್ಲಿ ತಡೆ ಹಿಡಿದಿತ್ತು. ಜೊತೆಗೆ ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿತ್ತು. ಈ ನಡುವೆ 2019-20ರ ಸಾಲಿನಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಮತ್ತಷ್ಟುವಿಳಂಬವಾಯಿತು. ಈ ನಡುವೆ ತೀರಾ ಅಗತ್ಯವುಳ್ಳ ಅರ್ಜಿಗಳ ವಿಲೇವಾರಿಗೆ ಮಾತ್ರ ಅವಕಾಶ ನೀಡಲಾಗಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಗದ ಸರ್ಕಾರಿ ಸೌಲಭ್ಯ:

ಪ್ರಸ್ತುತ ಬಿಪಿಎಲ್‌ ಕಾರ್ಡುದಾರರಲ್ಲಿ ಬಹುತೇಕರು ಪಡಿತರ ಆಹಾರ ಧಾನ್ಯ ಪಡೆಯುವುದಕ್ಕಿಂತ ಹೆಚ್ಚಾಗಿ ಇದನ್ನು ಆರೋಗ್ಯ ಸೌಲಭ್ಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಪಿಎಲ್‌ ಕಾರ್ಡು ಇದ್ದಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ರಿಯಾಯಿತಿ ಕೂಡ ಲಭ್ಯವಿದೆ. ಅರ್ಜಿ ಸಲ್ಲಿಸಿ ಮೂರ್ನಾಲ್ಕು ವರ್ಷವಾದರೂ ಪಡಿತರ ಚೀಟಿ ಸಿಗದಿದ್ದರಿಂದ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಬಿಪಿಎಲ್‌ ಕಾರ್ಡು ಇಲ್ಲದಕ್ಕೆ ಕೋವಿಡ್‌ನಿಂದ ಯಜಮಾನನನ್ನು ಕಳೆದುಕೊಂಡ ಕುಟುಂಬದ ಸದಸ್ಯರು ಪರಿಹಾರ ಪಡೆಯಲಾಗದೆ ಬೀದಿಗೆ ಬೀಳುವಂತಹ ದುಸ್ಥಿತಿಯಿದ್ದು ಹಲವು ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ.

ಇಂದಿಗೂ ಪಡಿತರ ಚೀಟಿ ಇಲ್ಲದೆ ಆಹಾರ ಧಾನ್ಯಕ್ಕೂ ಪರದಾಡುವಂತಹ ಅನೇಕ ಕುಟುಂಬಗಳಿವೆ. ಆದಷ್ಟುಶೀಘ್ರವೇ ಹೊಸ ಪಡಿತರ ಚೀಟಿಗಳನ್ನು ವಿತರಿಸಬೇಕಿದೆ. ಸಿಬ್ಬಂದಿ ಕೊರತೆಯೇ ಅರ್ಜಿ ವಿಲೇವಾರಿ ತಡವಾಗಲು ಕಾರಣ. ಮೊದಲು ಇಲಾಖೆಗೆ ಅಗತ್ಯ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಿಕೊಳ್ಳಬೇಕು.

- ವಿಜಯಕುಮಾರ್‌, ಅಧ್ಯಕ್ಷ, ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ

2019ರಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೆ. ಕೋವಿಡ್‌ ಲಾಕ್‌ಡೌನ್‌ನಿಂದ ಹೊಸ ಪಡಿತರ ಚೀಟಿ ವಿತರಣೆ ಮಾಡಲಿಲ್ಲ. ಕುಟುಂಬಕ್ಕೆ ಆಧಾರವಾಗಿದ್ದ ನನ್ನ ಪತಿ ಕೋವಿಡ್‌ 2ನೇ ಅಲೆಯಲ್ಲಿ ಸೋಂಕಿಗೆ ಬಲಿಯಾದರು. ಬಿಪಿಎಲ್‌ ಇದ್ದವರಿಗೆ 1.50 ಲಕ್ಷ ರು. ಪರಿಹಾರ ಕೊಡುವುದಾಗಿ ಸರ್ಕಾರ ಘೋಷಿಸಿತು. ಆದರೆ, ಬಿಪಿಎಲ್‌ ಕಾರ್ಡನ್ನು ಮಾತ್ರ ಕೊಡಲಿಲ್ಲ. ಬಿಪಿಎಲ್‌ ಇಲ್ಲದೆ ಪರಿಹಾರವೂ ಸಿಗಲಿಲ್ಲ.

- ಸರೋಜಮ್ಮ, ಅರ್ಜಿದಾರರು, ಬೆಂಗಳೂರು

Follow Us:
Download App:
  • android
  • ios