ಕಾಡು ಪ್ರಾಣಿಗಳಿಗೂ ಮೋದಿ ಭಾಷಣ ಕೇಳುವ ಅವಕಾಶ!
ಕಾಡು ಪ್ರಾಣಿಗಳೂ ನಿಮ್ಮ ಮನೆಯ ಬೆಳೆ ತಿನ್ನಬಾರದೆ, ಹಾಳು ಮಾಡಬಾರದೆ? ಬೇಲಿ.. ವಿದ್ಯುತ್ ತಂತಿ ಬೇಲಿ ಎಂದು ಸಾವಿರಾರು ರೂಪಾಯಿ ಖಾಲಿ ಮಾಡಿದರೂ ಹಾವಳಿ ತಪ್ಪಿಲ್ಲವೇ? ಹಾಗಾದರೆ ಯಾಕೆ ತಡ ಕೂಡಲೇ ರಾಜಕಾರಣಿಗಳ ಕಟೌಟ್ ನಿಲ್ಲಿಸಿ..ರಕ್ಷಣೆ ಪಡೆಯಿರಿ. ಹೀಗೊಂದು ಹೊಸ ಸ್ಲೋಗನ್ ಇನ್ನು ಮುಂದೆ ಹುಟ್ಟಿಕೊಂಡರೂ ಆಶ್ಚರ್ಪಡಬೇಕಿಲ್ಲ. ಯಾಕೆ ಅಂತೀರಾ ಈ ಸುದ್ದಿ ಓದಿ..
ಚಿಕ್ಕಮಗಳೂರು [ಜು.17] ಶಿವಮೊಗ್ಗದ ರೈತರೊಬ್ಬರು ಬೆಚ್ಚಪ್ಪನ ಕೈಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿಸಿದ ಸುದ್ದಿ ಓದಿದ್ದೀರಿ. ಇದು ಶಿವಮೊಗ್ಗದ ಪಕ್ಕದ ಜಿಲ್ಲೆ ಚಿಕ್ಕಮಗಳೂರಿನ ಸುದ್ದಿ. ಇಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿ.ಎಸ್ ಯಡಿಯೂರಪ್ಪ ,ರೈತರ ಜಮೀನಿಗೆ ಕಾವಲಾಗಿ ನಿಂತಿದ್ದಾರೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಭತ್ತದ ಗದ್ದೆಗೆ ಕಾಡುಪ್ರಾಣಿಗಳ ಹಾವಳಿ ತಡೆಯಲು ಮೋದಿ ಮತ್ತು ಅಮಿತ್ ಶಾ ಕಟೌಟ್ ನಿಲ್ಲಿಸಲಾಗಿದೆ. ಹಿಂದೆ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಳಸಿಕೊಂಡಿದ್ದ ಕಟೌಟ್ ಗಳು ಇದೀಗ ಹೊಲ-ಗದ್ದೆಯಲ್ಲಿ ಮರು ಉಪಯೋಗ ನೀಡುತ್ತಿವೆ.
ಕಾಡಿನಂಚಿನ ತೋಟ , ಹೊಲ , ಗದ್ದೆಗೆ ದಾಳಿ ಇಡುವ ಹಂದಿ , ಮಂಗಗಳನ್ನ ಬೆದರಿಸಲು ಬೆದರು ಗೊಂಬೆ[ಬೆಚ್ಚು]ಗಳನ್ನು ಬಳಸುವುದನ್ನು ರೈತರು ಪಾರಂಪರಿಕವಾಗಿ ನಡೆಸಿಕೊಂಡು ಬಂದಿದ್ದಾರೆ. ಆಧುನಿಕತೆ ಎಷ್ಟೇ ಮುಂದುವರಿದಿದ್ದರೂ ಹೊಲ-ಗದ್ದೆಗಳಲ್ಲಿ ಈ ಬೆಚ್ಚಪ್ಪಗೆ ಒಂದು ಸ್ಥಾನ ಕಾಯಂ. ಇಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬೆಚ್ಚಪ್ಪಗಳಾಗಿ ನಿಂತಿದ್ದಾರೆ.