ಚಿಕ್ಕಬಳ್ಳಾಪುರ(ನ.06):  ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಜಿಪಂ ಉಪಾಧ್ಯಕ್ಷೆ ಪಿ.ನಿರ್ಮಲ ವಿರುದ್ಧ ಸ್ವಪಕ್ಷೀಯರು ಸೇರಿದಂತೆ ಜಿಪಂನ ಎಲ್ಲ ಪಕ್ಷಗಳ ಸದಸ್ಯರು ಪಕ್ಷಾತೀತವಾಗಿ ಸತತ ನಾಲ್ಕನೇ ಬಾರಿ ಮಂಡಿಸಿದ ಅವಿಶ್ವಾಸ ಮಂಡನೆ ಯಶಸ್ಸು ಕಂಡು ಜಿಪಂ ಉಪಾಧ್ಯಕ್ಷೆ ಸ್ಥಾನದಿಂದ ಕೊನೆಗೂ ಪದಚ್ಯುತಿಗೊಂಡರು.

ನಗರದ ಹಿಪಂ ಸಭಾಂಗಣದಲ್ಲಿ  ನಡೆದ ಅವಿಶ್ವಾಸ ಮಂಡನಾ ಸಭೆ ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಾದ ನವೀನ್‌ರಾಜ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದು ಒಟ್ಟು 28 ಸದಸ್ಯ ಬಲ ಇರುವ ಜಿಪಂ ಸದಸ್ಯರ ಪೈಕಿ ಒಟ್ಟು 25 ಮಂದಿ ಸದಸ್ಯರು ಉಪಾಧ್ಯಕ್ಷೆ ಪಿ.ನಿರ್ಮಲ ವಿರುದ್ಧದ ಅವಿಶ್ವಾಸ ಮಂಡನೆಗೆ ಕೈ ಎತ್ತುವ ಮೂಲಕ ಬಹುಮತದ ಆಧಾರದ ಮೇಲೆ ಜಿಪಂ ಉಪಾಧ್ಯಕ್ಷೆ ಸ್ಥಾನದಿಂದ ಪದಚ್ಯುತಿಗೊಳಿಸಲಾಯಿತು.

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ .

25 ಮಂದಿ ಸದಸ್ಯರು ಹಾಜರ್‌:  ಉಪಾಧ್ಯಕ್ಷೆ ಸ್ಥಾನದಿಂದ ಪದಚ್ಯುತಿಗೊಂಡ ನಿರ್ಮಲ ಹೊರತುಪಡಿಸಿ ಉಳಿದ 27 ಮಂದಿ ಸದಸ್ಯರು ಅವಿಶ್ವಾಸ ಮಂಡನೆ ಪರ ಸಹಿ ಮಾಡಿದ್ದರು. ಆದರೆ ಸಭೆಗೆ 25 ಮಂದಿ ಸದಸ್ಯರು ಹಾಜರಾಗಿದ್ದು ಉಳಿದಂತೆ ಕಾಂಗ್ರೆಸ್‌ ಸದಸ್ಯೆ ಸೋಮೇನಹಳ್ಳಿ ಕ್ಷೇತ್ರದ ಜಿ.ಆರ್‌.ಗಾಯತ್ರಿ ನಂಜುಂಡಪ್ಪ ಹಾಗೂ ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರದ ಸದಸ್ಯ ಪವಿತ್ರ ಚಂದ್ರಶೇಖರ್‌ ಗೈರು ಹಾಜರಿ ಆಗಿದ್ದರು. ಜಿಪಂನಲ್ಲಿ ಕಾಂಗ್ರೆಸ್‌ 21, ಜೆಡಿಎಸ್‌ 6 ಹಾಗೂ ಸಿಪಿಎಂ ಹಾಗೂ ಬಿಜೆಪಿ ತಲಾ 1 ಸ್ಥಾನ ಹೊಂದಿವೆ.

2016 ರ ಮೇ. 7 ರಂದು ಜಿಪಂ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ನಿರ್ಮಲ ಅವರು, ಒಳ ಒಪ್ಪದಂತೆ ಎರಡೂವರೆ ವರ್ಷದ ಅಧಿಕಾರ ಅವಧಿ ಮುಗಿದ ಬಳಿಕ ಜಿಪಂ ಉಪಾಧ್ಯಕ್ಷೆ ರಾಜೀನಾಮೆ ನೀಡಬೇಕಿತ್ತು. ಈ ಕುರಿತು ಪಕ್ಷದ ವರಿಷ್ಠರು ಹಲವು ಬಾರಿ ಸೂಚಿಸಿದರೂ ನಿರ್ಮಲ ರಾಜೀನಾಮೆ ಕೊಡದೇ ಹುದ್ದೆಯಲ್ಲಿ ಮುಂದುವರೆದಿದ್ದರು.
 
4ನೇ ಬಾರಿಗೆ ಪಿ.ನಿರ್ಮಲ ಪದಚ್ಯುತಿ: ಕಾಂಗ್ರೆಸ್‌ ಪಕ್ಷದಲ್ಲಿ ನಡೆದಿದ್ದ ಮಾತುಕತೆಯಂತೆ ಮತ್ತೊಬ್ಬರಿಗೆ ಜಿಪಂ ಉಪಾಧ್ಯಕ್ಷ ಸ್ಥಾನ ಕಲ್ಪಿಸುವ ಉದ್ದೇಶದಿಂದ ಜಿಪಂ ಉಪಾಧ್ಯಕ್ಷೆ ಪಿ.ನಿರ್ಮಲ ವಿರುದ್ದ ಸ್ವಪಕ್ಷೀಯ ಕಾಂಗ್ರೆಸ್‌ ಸದಸ್ಯರೇ ಹಲವು ಬಾರಿ ಅವಿಶ್ವಾಸ ಮಂಡನೆಗೆ ಮುಂದಾಗಿದ್ದರೂ ಆದರೆ ಕೆಲ ತಾಂತ್ರಿಕ ಕಾರಣಗಳ ಜೊತೆಗೆ ಒಮ್ಮೆ ಹೈಕೋರ್ಟ್‌ ಅವಿಶ್ವಾಸಕ್ಕೆ ತಡೆ ನೀಡಿದ್ದರಿಂದ ಕಳೆದ 8 ತಿಂಗಳಿಂದ ಜಿಪಂ ಉಪಾಧ್ಯಕ್ಷೆಯಾಗಿದ್ದ ಪಿ.ನಿರ್ಮಲ ಅವಿಶ್ವಾಸ ಮಂಡನೆಯಿಂದ ಮೂರು ಬಾರಿ ಬಚಾಚ್‌ ಆಗಿದ್ದರು.
 
ಜಿಪಂನ ಮತ್ತೊಬ್ಬ ಸದಸ್ಯರಿಗೆ ಈ ಹಿಂದೆ ಮಾತು ಕೊಟ್ಟಿದ್ದವು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಅವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನಿರ್ಮಲ ವಿರುದ್ದ ಅವಿಶ್ವಾಸ ಮಂಡಿಸಲಾಗಿದೆ. ಇದು ಜಿಪಂನ ಎಲ್ಲಾ ಪಕ್ಷಗಳ ಸದಸ್ಯರ ಒಮ್ಮತದ ನಿರ್ಧಾರ, ಇಲ್ಲಿ ಯಾವುದೇ ಪಕ್ಷಭೇದ ಇಲ್ಲದೇ ಅವಿಶ್ವಾಸ ಮಂಡನೆ ಮಾಡಿ ಅವರನ್ನು ಪದಚ್ಯುತಿಗೊಳಿಸಲಾಗಿದೆ.

ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಅಧ್ಯಕ್ಷರು.
 
ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಾದ ನವೀನ್‌ರಾಜ್‌ಸಿಂಗ್‌ ಅವಿಶ್ವಾಸ ಮಂಡನೆ ಪ್ರಕ್ರಿಯೆ ನಡೆಸಿಕೊಟ್ಟರು. ಅಪರ ಜಿಲ್ಲಾಧಿಕಾರಿ ಅಮರೇಶ್‌, ಸಿಇಒ ಶಿವಶಂಕರ್‌ ಇದ್ದರು.
 
ಮುಂದಿನ ಜಿಪಂ ಉಪಾಧ್ಯಕ್ಷೆ ತೋಂಡೇಬಾವಿ ಸರಸ್ವತಮ್ಮ ಖಚಿತ

ಚಿಕ್ಕಬಳ್ಳಾಪುರ, ಜಿಪಂ ಉಪಾಧ್ಯಕ್ಷೆ ಪಿ.ನಿರ್ಮಲ ವಿರುದ್ದ ಜಿಪಂನ ಸದಸ್ಯರು ಪಕ್ಷಾತೀತವಾಗಿ ಮಂಡಿಸಿದ ಅವಿಶ್ವಾಸ ಮಂಡನೆ ಯಶಸ್ವಿಯಾಗಿದ್ದು 15 ದಿನಗಳ ಒಳಗೆ ಜಿಪಂಗೆ ನೂತನ ಉಪಾಧ್ಯಕ್ಷೆಗೆ ಚುನಾವಣೆ ನಡೆಯಲಿದ್ದು, ಮೊದಲೇ ಮಾತುಕತೆ ಪ್ರಕಾರ ಜಿಲ್ಲೆಯ ಗೌರಿಬಿದನೂರು ತೊಂಡೇಬಾವಿ ಜಿಪಂ ಕ್ಷೇತ್ರದ ಸದಸ್ಯೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ಆಯ್ಕೆಗೊಳ್ಳುವುದು ಬಹುತೇಕ ಖಚಿತವಾಗಿದೆ.

ಈ ಹಿಂದೆಯೆ ಎರಡೂವರೆ ವರ್ಷದ ಅವಧಿಗೆ ಮಾತ್ರ ಉಪಾಧ್ಯಕ್ಷೆಯಾಗಿ ಪಿ.ನಿರ್ಮಲರನ್ನು ಆಯ್ಕೆ ಮಾಡಲಾಗಿತ್ತು. ಆದರೆ ತಮ್ಮ ಅವಧಿ ಮುಗಿದ ನಂತರ ರಾಜೀನಾಮೆ ಕೊಡದೇ ಮುಂದುವರೆದಿದ್ದರು. ಈಗಾಗಿ ಉಳಿದ 8 ತಿಂಗಳ ಅವಧಿಗೆ ಕಾಂಗ್ರೆಸ್‌ ಸದಸ್ಯರಾಗಿರುವ ಸರಸ್ವತಮ್ಮ ಉಪಾಧ್ಯಕ್ಷರಾಗಿ ಆಯ್ಕೆಗೊಳ್ಳಲಿದ್ದು ಶೀಘ್ರದಲ್ಲಿಯೆ ಚುನಾವಣಾ ದಿನಾಂಕವನ್ನು ಬೆಂಗಳೂರು ವಿಭಾಗೀತ ಪ್ರಾದೇಶಿಕ ಆಯುಕ್ತರು ಪ್ರಕಟಿಸಲಿದ್ದಾರೆ.