ಕುತೂಹಲ ಕೆರಳಿಸಿದ ಚುನಾವಣೆ : ಕಣದಿಂದ ಮೂವರು ವಾಪಸ್
ಚುನಾವಣೆ ತಯಾರಿ ಚುರುಕಿನಿಂದ ನಡೆಯುತ್ತಿದೆ. ನಾಯಕರ ನಡುವೆ ಪಟ್ಟಕ್ಕಾಗಿ ಬಿರುಸಿನ ಪೈಪೋಟಿಯೂ ಇದೆ. ಇಬ್ಬರ ನಡುವೆ ಪೈಪೋಟಿ ಇದ್ದು ಮೂವರು ಚುನಾವಣಾ ಕಣದಿಂದಲೇ ಹಿಂದೆ ಸರಿದಿದ್ದಾರೆ.
ಚಿಕ್ಕಬಳ್ಳಾಪುರ (ಏ.17): ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ ಜಿಲ್ಲೆಯಲ್ಲಿ ರಂಗೇರಿದ್ದು ಇದೇ ಮೊದಲ ಬಾರಿಗೆ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿರುವ ಡಾ.ಕೋಡಿರಂಗಪ್ಪ ಹಾಗೂ ಮರು ಆಯ್ಕೆ ಬಯಸಿರುವ ಕಸಾಪ ಹಾಲಿ ಜಿಲ್ಲಾಧ್ಯಕ್ಷ ಡಾ.ಕೈವಾರ ಶ್ರೀನಿವಾಸ್ ನಡುವೆ ಕಸಾಪ ಗದ್ದುಗೆಗೆ ಪ್ರಬಲ ಪೈಪೋಟಿ ಶುರುವಾಗಿದೆ.
ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಳೆದ ಒಂದೂವರೆ ತಿಂಗಳಿಂದ ಪ್ರಚಾರ ನಡೆಸಿ ತಮ್ಮ ಸಮಾನ ಮನಸ್ಕರ ಬಳಗದೊಂದಿಗೆ ತಾಲೂಕುವಾರು ಸಭೆಗಳನ್ನು ಆಯೋಜಿಸಿ ಬೆಂಬಲ ಕೋರುತ್ತಿರುವ ತೊಡಗಿರುವ ಡಾ.ಕೋಡಿರಂಗಪ, ಪ್ರಚಾರದ ಭರಾಟೆಯಲ್ಲಿ ಮುಂದಿದ್ದರೆ ನಾಮಪತ್ರ ಸಲ್ಲಿಕೆಯ ಕೊನೆ ದಿನದಂದು ಅಖಾಡಕ್ಕೆ ಸ್ಪರ್ಧಿಸಿರುವ ಕಸಾಪ ಹಾಲಿ ಜಿಲ್ಲಾಧ್ಯಕ್ಷ ಡಾ.ಕೈವಾರ ಶ್ರೀನಿವಾಸ್ ಕೂಡ ತೆರೆಮೆರೆಯಲ್ಲಿ ಪ್ರಚಾರ ನಡೆಸುವ ಮೂಲಕ ಎರಡನೇ ಬಾರಿಗೆ ಆಯ್ಕೆಗೊಳ್ಳಲು ತೀವ್ರ ಕರಸತ್ತು ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ ಮುನ್ನಾಲೆಗೆ ಬಂದಾಗ ಆಕಾಂಕ್ಷಿಗಳ ಸಂಖ್ಯೆ ಡಜನ್‌ಗಟ್ಟಲೇ ಇದ್ದರು. ಆದರೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅವಿರೋಧವಾಗಿ ಕಸಾಪ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು ಡಾ.ಕೋಡಿರಂಗಪ್ಪ ಅಧ್ಯಕ್ಷತೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಸಮಾನ ಮನಸ್ಕರು ಸಮಿತಿ ರಚಿಸಿದ್ದರು. ಆದರೆ ಆಕಾಂಕ್ಷಿಗಳಲ್ಲಿ ಒಮ್ಮತ ಮೂಡದ ಕಾರಣ ಕೊನೆಗೆ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಕೋಡಿರಂಗಪ್ಪರನ್ನೆ ಚುನಾವಣೆಗೆ ಅಭ್ಯರ್ಥಿ ಮಾಡಿ ಅವಿರೋಧವಾಗಿ ಆಯ್ಕೆ ಮಾಡಲು ಸಾಕಷ್ಟುಕಸರತ್ತು ನಡೆಸಲಾಯಿತು. ಆದರೆ ಕೊನೆಗಳಿಗೆಯಲ್ಲಿ ಕಸಾಪ ಹಾಲಿ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮತ್ತೆ ಮರು ಆಯ್ಕೆ ಬಯಸಿ ಅಖಾಡಕ್ಕೆ ಇಳಿದಿರುವುದರಿಂದ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ ಜಿಲ್ಲೆಯ ಕಸಾಪ ವಲಯದಲ್ಲಿ ಸಾಕಷ್ಟುರಂಗೇರಿದ್ದು ಇಬ್ಬರ ನಡುವೆ ಪ್ರಚಾರದ ಭರಾಟೆ ಸಾಕಷ್ಟುಬಿರುಸು ಪಡೆದುಕೊಂಡಿದೆ.
ಅವಿರೋಧ ಆಯ್ಕೆಗೆ ಕಸರತ್ತು : ಕುತೂಹಲ ಕೆರಳಿಸಿದ ಚುನಾವಣೆ ...
ಚಿಂತಕರ ವಲಯದಲ್ಲಿ ಗುರುತಿಸಿಕೊಂಡಿರುವ ಡಾ.ಕೋಡಿರಂಗಪ್ಪ ಇದೇ ಮೊದಲ ಬಾರಿಗೆ ಚುನಾವಣೆಗೆ ಮುಖ ಮಾಡಿದ್ದಾರೆ, ಅವರ ಶಿಷ್ಯರು ಚುನಾವಣೆಯ ಉಸ್ತುವಾರಿ ನೋಡಿಕೊಂಡು ಅವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಡಾ.ಕೈವಾರ ಶ್ರೀನಿವಾಸ್ ಸಹ ತಮ್ಮದೇ ಬಳಗವನ್ನು ಕಟ್ಟಿಕೊಂಡು ಕಸಾಪ ಚುನಾವಣೆಗೆ ಎರಡನೇ ಬಾರಿಗೆ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದು ಸಹಜವಾಗಿಯೆ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ ಸಾಕಷ್ಟುಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದ್ದು ಮೇ 9 ರಂದು ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದ್ದು ಇಬ್ಬರ ಹಣೆಬರಹವನ್ನು ಬರೋಬ್ಬರಿ 6300 ಕ್ಕೂ ಹೆಚ್ಚು ಇರುವ ಕಸಾಪ ಸದಸ್ಯರು ನಿರ್ಧರಿಸಲಿದ್ದಾರೆ.
ಕೈವಾರ ಮಠಕ್ಕೆ ಕೋಡಿರಂಗಪ್ಪ ಭೇಟಿ:
ಕಸಾಪ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಚಿಂತಕ ಡಾ.ಕೋಡಿರಂಗಪ್ಪ ಇತ್ತೀಚೆಗೆ ಜಿಲ್ಲೆಯ ಚಿಂತಾಮಣಿ ಕ್ಷೇತ್ರ ಕೈವಾರ ಯೋಗಿ ನಾರೇಯಣ ಮಠಕ್ಕೆ ಭೇಟಿ ನೀಡಿ ಕೈವಾರ ತಾತಯ್ಯನವರ ದರ್ಶನ ಪಡೆದರು. ಅಲ್ಲದೇ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್‌ರನ್ನು ಭೇಟಿ ಮಾಡಿ ಅಶೀರ್ವಾದ ಪಡೆದಿದ್ದು ಕಸಾಪ ವಲಯದಲ್ಲಿ ಸಾಕಷ್ಟುಕುತೂಹಲ ಕೆರಳಿಸಿದೆ.
ಕಣದಿಂದ ಹಿಂದೆ ಸರಿದ ಮೂವರು!
ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುನ ಯಲುವಹಳ್ಳಿ ಸೊಣ್ಣೇಗೌಡ, ದಲಿತ ಮುಖಂಡ ಸು.ಧಾ.ವೆಂಕಟೇಶ್, ಹಾಗೂ ಜಿ.ಸಿ.ಚಂದ್ರ ಎಂಬುವರು ತಮ್ಮ ಉಮೇದುವಾರಿಕೆಯನ್ನು ಕೊನೆ ಗಳಿಗೆಯಲ್ಲಿ ವಾಪಸ್ಸು ಪಡೆದರೆ, ಅಖಾಡಕ್ಕೆ ನಾಮಪತ್ರ ಸಲ್ಲಿಸಿದ್ದ ಮಾನವ ಹಕ್ಕುಗಳ ಹೋರಾಟಗಾರ ಎನ್.ಎನ್.ಮಂಜುನಾಥ ಎಂಬುವರ ನಾಮಪತ್ರ ತಾಂತ್ರಿಕ ಕಾರಣಗಳಿಗೆ ಚುನಾವಣಾ ಅಧಿಕಾರಿಗಳು ಕ್ರಮಬದ್ಧವಾಗಿರದ ಕಾರಣ ತಿರಸ್ಕೃತಗೊಳಿಸಿದ್ದರು.