ಚಿಕ್ಕಬಳ್ಳಾಪುರ(ಜ.15): ಕಳೆದ ಒಂದು ವರ್ಷದಿಂದ ಚುನಾಯಿತ ಜನಪ್ರತಿನಿಧಿಗಳಿಲ್ಲದೆ, ಚುನಾವಣೆಯೂ ನಡೆಯದೆ ಅಧಿಕಾರಿಗಳ ಹಿಡಿತದಲ್ಲಿ ನಡೆಯುತ್ತಿದ್ದ ಇಲ್ಲಿನ ನಗರಸಭೆಗೆ ಕೊನೆಗೂ ಚುನಾವಣೆ ಘೋಷಣೆಯಾಗಿದ್ದು, ನೂತನ ಜನಪ್ರತಿನಿಧಿಗಳ ಆಯ್ಕೆಗೆ ಮುಹೂರ್ತ ನಿಗದಿಯಾಗಿದೆ.

ಚಿಕ್ಕಬಳ್ಳಾಪುರ ನಗರಸಭೆಗೆ 2018ರ ಮಾಚ್‌ರ್‍ 18ಕ್ಕೆ ಅವಧಿ ಮುಕ್ತಾಯವಾಗಿದ್ದು, ಇದೇ ವೇಳೆಗೆ ನೂತನ ಜನಪ್ರತಿನಿಧಿಗಳ ಆಯ್ಕೆ ನಡೆಯಬೇಕಿತ್ತು. ಆದರೆ ಸರ್ಕಾರ ಘೋಷಣೆ ಮಾಡಿದ ಮೀಸತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದ ಪರಿಣಾಮ ಚುನಾವಣೆಗೆ ತಡೆ ಬಿದ್ದಿತ್ತು. ಅಲ್ಲದೆ ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ತಿರಸ್ಕೃತವಾಗಿ ಚುನಾವಣೆ ನಡೆಸುವ ಸಿದ್ಧತೆಗೆ ಆಯೋಗ ಮುಂದಾಗುತ್ತಿದ್ದಂತೆ ಉಪ ಚುನಾವಣೆಗಳು ಘೋಷಣೆಯಾದ ಪರಿಣಾಮ ಮತ್ತೆ ಮುಂದೂಡಲಾಗಿತ್ತು.

ಪ್ರೀತಿಸಿದ ಅಪ್ರಾಪ್ತೆಗೆ ವಿಷ ಕುಡಿಸಿ ಕೊಂದ ಯುವಕ..!

ಪ್ರಸ್ತುತ ಚಿಕ್ಕಬಳ್ಳಾಪುರ ನಗರಸಭೆಗೆ ಚುನವಣಾ ದಿನಾಂಕ ನಿಗದಿಪಡಿಸಿ ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ಜ. 21ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಜ.28 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜ. 29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜ. 31 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದು, ಫೆ. 9ರಂದು ಭಾನುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಮರು ಮತದಾನ ಅಗತ್ಯವಿದ್ದಲ್ಲಿ ಫೆ. 1ರಂದು 10ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ನಡೆಯಲಿದೆ. ಫೆ.11ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ಇಂದಿನಿಂದಲೇ ನೀತಿಸಂಹಿತೆ ಜಾರಿ:

ಫೆ. 9ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜ. 14ರಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ನೀತಿ ಸಂಹಿತೆ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿತ್ತದೆ. ಹಾಗಾಗಿ ನೀತಿಸಂಹಿತೆ ಉಲ್ಲಂಘನೆ ಮಾಡುವ ಯಾವುದೇ ಪ್ರಕರಣಗಳು ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

31 ವಾರ್ಡುಗಳಿಗೆ ಚುನಾವಣೆ

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡುಗಳಿದ್ದು, ಎಲ್ಲ ವಾರ್ಡುಗಳಿಗೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಪಕ್ಷೇತರರಾಗಿಯೂ ಹಲವು ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಇತ್ತೀಚಿಗಷ್ಟೇ ವಿಧಾನಸಭೆ ಉಪ ಚುನಾವಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರಸಭಾ ಚುನಾವಣೆ ಹೆಚ್ಚಿನ ಕುತೂಹಲ ಕೆರಳಿಸಿದೆ.

ಶಾಸಕ ಡಾ.ಕೆ. ಸುಧಾಕರ್‌ ಅವರು ನಗರಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ನಗರಸಭೆಯಲ್ಲಿ ಶತಾಯಗತಾಯ ಕಮಲ ಅರಳಿಸುವ ಪಣ ತೊಟ್ಟಿದ್ದಾರೆ. ಈ ಹಿಂದೆ ಅಧಿಕಾರ ಹೊಂದಿದ್ದ ಕಾಂಗ್ರೆಸ್‌ ಮತ್ತೆ ಧಿಕಾರ ಪಡೆಯಲು ಹವಣಿಸುತ್ತಿದ್ದರೆ, ಜೆಡಿಎಸ್‌ ಕೂಡಾ ಕಣದಲ್ಲಿ ಇರಲಿದೆ.

ಎಲ್ಲೆಲ್ಲಿ ಚುನಾವಣೆ?

ರಾಜ್ಯದ ಒಟ್ಟು 5 ಸ್ಥಳೀಯ ಸಂಸ್ಥೆಗಳಿಗೆ ಫೆ. 9ರಂದು ಚುನಾವಣೆ ನಡೆಯಲಿದ್ದು, ಇದರಲ್ಲಿ ಮೂರು ನಗರಸಭೆಗಳು, 1 ಪುರಸಭೆ ಮತ್ತು 1 ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯಲಿದೆ. ಹೊಸಕೋಟೆ, ಹುಣಸೂರು, ಚಿಕ್ಕಬಳ್ಳಾಪುರ ನಗರಸಭೆಗಳು, ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮತ್ತು ಸಿಂಧಗಿ ಪುರಸಭೆಗೆ ಚುನಾವಣೆ ನಡೆಯಲಿದೆ.