Asianet Suvarna News Asianet Suvarna News

ಗದಗ: 2 ವರ್ಷದ ಹಿಂದೆ ಖರೀದಿಸಿದ ಕಡಲೆ ಇನ್ನೂ ಗೋದಾಮಲ್ಲಿ..!

ರಾಜ್ಯದ ಗೋದಾಮುಗಳಲ್ಲಿ 73,816 ಮೆಟ್ರಿಕ್‌ ಟನ್‌ ಕಡಲೆ ಸಂಗ್ರಹ, ವಿಲೇವಾರಿಗೆ ಆಗಬೇಕಿದೆ ಸೂಕ್ತ ಕ್ರಮ

Chickpeas Bought 2 Years Ago Still in the Warehouse in Gadag grg
Author
First Published Sep 23, 2022, 8:00 AM IST

ಶಿವಕುಮಾರ ಕುಷ್ಟಗಿ

ಗದಗ(ಸೆ.23):  ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ನೆಫೆಡ್‌ (ನ್ಯಾಶನಲ್‌ ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಫೆಡರೇಶನ್‌ ಲಿಮಿಟೆಡ್‌) ಮೂಲಕ 2020-21, 2021-22ರಲ್ಲಿ ಖರೀದಿಸಿದ ಕಡಲೆ ಕಾಳು ಇಂದಿಗೂ ಗೋದಾಮುಗಳಲ್ಲಿಯೇ ದಾಸ್ತಾನು ಆಗಿದೆ!. ಅದನ್ನು ಬೇಗನೆ ಟೆಂಡರ್‌ ಪ್ರಕ್ರಿಯೆ ನಡೆಸಿ ಮಾರಾಟ ಮಾಡದೇ ಇದ್ದಲ್ಲಿ ಗುಣಮಟ್ಟ ಕಳೆದುಕೊಳ್ಳಲಿದೆ. ಜತೆಗೆ ಪ್ರಸಕ್ತ ಸಾಲಿನಲ್ಲಿ ರೈತರಿಂದ ಹೆಸರು ಸೇರಿದಂತೆ ಅಗತ್ಯ ಧಾನ್ಯಗಳನ್ನು ಖರೀದಿಸಿದಲ್ಲಿ ದಾಸ್ತಾನು ಮಾಡಲು ಗೋದಾಮುಗಳ ಕೊರತೆ ಎದುರಾಗಲಿದೆ.

ಉತ್ತರ ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳ ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯೆಂದರೆ ಕಡಲೆ (ಕೆಲ ಭಾಗದಲ್ಲಿ ಹುಳಿ ಕಡಲೆ ಎಂದು ಕರೆಯುತ್ತಾರೆ). ಈ ಕಡಲೆಯನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ನೆಫೆಡ್‌ ಖರೀದಿಸಿ, ರಾಜ್ಯದ ವಿವಿಧ ಗೋದಾಮುಗಳಲ್ಲಿ ಸಂಗ್ರಹಿಸಿದೆ. ಆದರೆ 2 ವರ್ಷ ಕಳೆದರೂ ಅದರ ವಿಲೇವಾರಿ ಮಾಡದೇ ಇರುವುದು ಹಲವಾರು ಸಂಶಯಕ್ಕೆ ಕಾರಣವಾಗಿದೆ. 2019-20ರಲ್ಲಿ ಖರೀದಿಸಿದ ಕಡಲೆಯನ್ನು ಈಗಷ್ಟೇ ಟೆಂಡರ್‌ ಮೂಲಕ ಹರಾಜು ಮಾಡಿದ್ದಾರೆ. ನಂತರ ಖರೀದಿಸಿದ ಕಡಲೆ ಗೋದಾಮುಗಳಲ್ಲಿ ಉಳಿದಿದೆ.

Gadag: ಡೋಣಿ ಭಾಗದಲ್ಲಿ ಆತಂಕ ಮೂಡಿಸಿದ ಕೀಟ: ಇದನ್ನ ಸ್ಪರ್ಶಿಸಿದರೆ ವಾಂತಿ, ದೇಹದಲ್ಲಿ ತುರಿಕೆ

2 ವರ್ಷದಿಂದ ಗೋದಾಮುಗಳಲ್ಲಿ:

ಕೇಂದ್ರ ಸರ್ಕಾರ ನೆಫೆಡ್‌ ಮೂಲಕ ರಾಜ್ಯದ ಗೋದಾಮುಗಳಲ್ಲಿ 2020-21, 2021-22ರಲ್ಲಿ ಒಟ್ಟು 73,816 ಮೆಟ್ರಿಕ್‌ ಟನ್‌ಗೂ ಅಧಿಕ ಕಡಲೆಯನ್ನು ಖರೀದಿಸಿ ಸಂಗ್ರಹಿಸಿದ್ದಾರೆ. ಆದರೆ ಇದುವರೆಗೂ ಅವುಗಳನ್ನು ಹರಾಜು ಪ್ರಕ್ರಿಯೆ ನಡೆಸಿಲ್ಲ. ಎರಡು ವರ್ಷಗಳ ಕಾಲ ಕಡಲೆ ಸಂಗ್ರಹಿಸಿಟ್ಟಲ್ಲಿ ಅದರ ಗುಣಮಟ್ಟದ ಕಡಿಮೆಯಾಗಲಿದೆ. ಪರಿಣಾಮ ಕಡಲೆ ಬೆಲೆಯೂ ಕುಸಿಯುತ್ತದೆ. 2 ವರ್ಷಗಳ ಹಿಂದಿನ ಕಡಲೆ ಎಂದರೆ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಗುತ್ತದೆ. ಅಧಿಕಾರಿಗಳು ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮರಳಿ ಸರ್ಕಾರವೇ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತಾಂತ್ರಿಕ ಸಮಸ್ಯೆಗಳು:

ಪ್ರಸಕ್ತ ಸಾಲಿನಲ್ಲಿ ಉತ್ತರ ಕರ್ನಾಟಕದ 15 ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ಹೆಸರು ಬೆಳೆ ಸಾಕಷ್ಟುಉತ್ತಮವಾಗಿಯೇ ಬಂದಿದೆ. ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸೂಚನೆಯಂತೆ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಿದೆ. ಅಲ್ಲಿ ಖರೀದಿಸುವ ಹೆಸರು ಸಂಗ್ರಹಕ್ಕೂ ಸಮಸ್ಯೆ ಉಂಟಾಗಲಿದೆ. ಇನ್ನು ನೆಫೆಡ್‌ ಖರೀದಿ ಮಾಡಿ ಗೋದಾಮುಗಳಲ್ಲಿ ಸಂಗ್ರಹಿಸಲು ಸೂಚಿಸುತ್ತದೆ. ಅದನ್ನಷ್ಟೇ ರಾಜ್ಯ ಮರಾಟ ಮಂಡಳದವರು ಮಾಡಬೇಕಾಗಿದೆ. ಸಂಗ್ರಹವಾಗಿರುವ ವಸ್ತುಗಳ ಮಾರಾಟ ಮತ್ತೆ ಕೇಂದ್ರ ಕಚೇರಿಯ ಸೂಚನೆಯ ಮೇರೆಗೆ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ವಿಳಂಬವಾಗುತ್ತಿದೆ ಎನ್ನುವ ಮಾತು ಅಧಿಕಾರಿ ವಲಯದಿಂದ ಕೇಳಿ ಬರುತ್ತಿವೆ.

Gadag: ವ್ಯವಸ್ಥೆ ಸರಿ ಹೋಗ್ತಿಲ್ಲ, ರಾಜೀನಾಮೆ ಕೊಡುತ್ತೇನೆ: ಕನ್ನಡ ಪ್ರಭಗೆ ಪತ್ರ ಬರೆದ ಗ್ರಾಮ ಪಂಚಾಯ್ತಿ ಸದಸ್ಯ

ಖರೀದಿಗೆ ಬರುತ್ತಿಲ್ಲವಂತೆ

ನೆಫೆಡ್‌ 2019-20ರಲ್ಲಿ ಖರೀದಿಸಿದ ಕಡಲೆಯನ್ನು ಪೂರ್ಣ ವಿಲೇವಾರಿ ಮಾಡಿದೆ. ಆದರೆ 2020-21ನೇ ಸಾಲಿನಲ್ಲಿ ಕಡಲೆಗೂ ಪ್ರತಿ ಕ್ವಿಂಟಲ್‌ಗೆ .4700 ದರ ನಿಗದಿ ಮಾಡಲಾಗಿತ್ತು. 2021-22ರ ಕಡಲೆಗೂ ಅಷ್ಟೇ ದರ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಖರೀದಿದಾರರು 2021-22ನೇ ಸಾಲಿನ (ಹೊಸ ಕಡಲೆ ಮಾತ್ರ) ಖರೀದಿಸುತ್ತಿದ್ದು, ಹಳೆಯ ಕಡಲೆ ಹಾಗೆಯೇ ಉಳಿಯುತ್ತಿದೆ ಎನ್ನುವ ಮಾತು ಅಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ವಲಯದಿಂದ ಕೇಳಿ ಬರುತ್ತಿದೆ. ಈ ಕುರಿತು ಸರ್ಕಾರ ಕೂಡಲೇ ಗಮನ ಹರಿಸಬೇಕು. ಅಂದಾಗ ಮಾತ್ರ ಸಮಸ್ಯೆ ಇತ್ಯರ್ಥವಾಗಲು ಸಾಧ್ಯವಿದೆ ಎಂಬುದು ರೈತರ ಅಭಿಪ್ರಾಯ.

ನೆಫೆಡ್‌ನಲ್ಲಿಯೇ ಸಾಕಷ್ಟು ವಿಭಾಗಗಳಿವೆ. ಈಗಾಗಲೇ ನಾವು ಸಂಗ್ರಹಿಸಿದ್ದ ಎಲ್ಲ ಜಿಲ್ಲೆಗಳಲ್ಲಿಯೂ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಬೇರೆ ವಿಭಾಗದ್ದು ಉಳಿದಿದೆಯೇ ಎನ್ನುವ ಕುರಿತು ಪರಿಶೀಲಿಸಿ ಮಾಹಿತಿ ಪಡೆಯುತ್ತೇನೆ ಅಂತ ನೆಪೆಢ್‌ನ ಹಿರಿಯ ಅಧಿಕಾರಿ ಜ್ಯೋತಿ ಪಾಟೀಲ ತಿಳಿಸಿದ್ದಾರೆ. 
 

Follow Us:
Download App:
  • android
  • ios