Asianet Suvarna News Asianet Suvarna News

ಕೊಪ್ಪಳ: ನಿಷೇಧದ ಮಧ್ಯೆಯೂ ನಡೆದ ಕೋಳಿ ಜೂಜಾಟ

ಕಾರಟಗಿ ಪೊಲೀಸ್‌ ಠಾಣೆಯಿಂದ ಕೆಲವೇ ಕಿಮೀ ದೂರದಲ್ಲಿ ಕೋಳಿ ಜೂಜಾಟ| ಸ್ಥಳಕ್ಕೆ ತೆರಳಿದ ಪತ್ರಕರ್ತರ ನೋಡಿ ಕಾಲ್ಕಿತ್ತ ಜೂಜುಕೋರರು| ಗುಡ್ಡದ ಹೊರವಲಯದಲ್ಲಿ ನಡೆಯುವ ಜೂಜಾಟಕ್ಕೆ ನೂರಾರು ಜನ ಸಾಕ್ಷಿ| ಪತ್ರಕರ್ತರನ್ನ ನೋಡಿ ಎದ್ದೋ ಬಿದ್ದೋ ಎಂದು ಓಡಿದ ಜೂಜುಕೋರರು|

Chicken Gambling in Karatagi in Koppal District
Author
Bengaluru, First Published Jan 3, 2020, 8:34 AM IST

ಕಾರಟಗಿ[ಜ.03]: ಹೊಸ ವರ್ಷದ ಪ್ರಯುಕ್ತ ಕಾರಟಗಿ ತಾಲೂಕಿನ ಬೂದುಗುಂಪಾ, ಮೈಲಾಪುರ ಸೀಮೆಗಳಲ್ಲಿ ಮೂರು ದಿನಗಳಿಂದ ನಿಷೇಧಿತ ಕೋಳಿ ಪಂದ್ಯಾವಳಿ ಭಾರಿ ಪ್ರಮಾಣದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.

ಮೈಲಾಪುರ ಸೀಮೆಯಲ್ಲಿ ಮಾವಿನ ತೋಪಿನ ನಡುವೆ ಮತ್ತು ಬೂದುಗುಂಪಾ ಸೀಮೆಯಲ್ಲಿನ ಮಲ್ಲಯ್ಯನ ಗುಡ್ಡದ ದಟ್ಟಕಾನನ ನಡುವೆ ಈ ಜೂಜೂಕೋರರು ಕೋಳಿ ಪಂದ್ಯವನ್ನು ರಾಜಾರೋಷವಾಗಿ ನಡೆಸಿದ್ದು ಸ್ಥಳಕ್ಕೆ ತೆರಳಿದ ಪತ್ರಕರ್ತರು ವಿಡಿಯೋ ಮಾಡುತ್ತಿದ್ದುನ್ನು ನೋಡಿ ಅನುಮಾನಗೊಂಡು ಅಲ್ಲಿಂದ ಎದ್ದೋ ಬಿದ್ದೋ ಎಂದು ಕಾಲ್ಕಿತ್ತಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೊಸ ವರ್ಷದ ಹಿಂದಿನ ಎರಡು ದಿನ ಮೈಲಾಪುರ ಸೀಮೆಯ ಬೇವಿನಾಳ ಬಸವಣ್ಣಕ್ಯಾಂಪ್‌ನ 32ನೇ ವಿತರಣಾ ಕಾಲುವೆ ಬಳಿಯ ಮಾವಿನ ತೋಪಿನಲ್ಲಿ ಎರಡು ದಿನ ಕೋಳಿ ಪಂದ್ಯಾವಳಿ ನಡೆದಿದೆ. ಸುದ್ದಿ ತಿಳಿದು ಗಂಗಾವತಿಯ ಕೆಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಅರಿತ ಜೂಜುಕೋರರ ಸಂಘಟಕರು ಸ್ಥಳ ಬದಲಾವಣೆ ಮಾಡಿದ್ದಾರೆ.

ಹೊಸ ವರ್ಷಕ್ಕೆ ಬುಧವಾರ ಮತ್ತು ಗುರುವಾರ ಕಾರಟಗಿ ತಾಲೂಕಿನ ಬೂದುಗುಂಪಾ ಗ್ರಾಮದ ಮಲ್ಲಯ್ಯನ ಗುಡ್ಡದ ಹತ್ತಿರ ರಾಜಾರೋಷವಾಗಿ ಕೋಳಿ ಪಂದ್ಯ ನಡೆಸಲಾಗುತ್ತಿದೆ. ಒಂದು ಪಂದ್ಯಕ್ಕೆ ಲಕ್ಷಾಂತರ ರುಪಾಯಿ ಜೂಜಾಟ, ಬೆಟ್ಟಿಂಗ್‌ ಕಟ್ಟಲಾಗುತ್ತಿತ್ತು ಎಂದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕೆಲವು ಯುವಕರು ಮಾಹಿತಿ ನೀಡಿದ್ದಾರೆ.

ಹುಂಜಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಪಂದ್ಯವನ್ನು ನಡೆಸಲಾಗುತ್ತದೆ. ಹುಂಜಗಳ ಮೇಲೆ ಜನ ಸಾವಿರಾರು ರುಪಾಯಿ ಜೂಜು ಕಟ್ಟಿ ಆಡುತ್ತಿದ್ದಾರೆ. ಪಂದ್ಯಾವಳಿಗಾಗಿಯೇ ಹುಂಜಗಳನ್ನು ಬಲಿಷ್ಠವಾಗಿ ಬೆಳೆಸಿ ತರಲಾಗುತ್ತದೆ. ಕೋಳಿ ಪಂದ್ಯ ನಿಷೇಧವಿದ್ದರೂ ಗ್ರಾಮದ ಹೊರವಲಯದ ಗುಡ್ಡದ ಬಳಿ ರಾಜಾರೋಷವಾಗಿ ಪಂದ್ಯ ನಡೆಸುತ್ತಿದ್ದಾರೆ.

ಕಾರಟಗಿ ಸುತ್ತಮುತ್ತಲ ಗ್ರಾಮದ ಜನ ಮಾತ್ರವಲ್ಲದೆ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಿಂದಲೂ ನೂರಾರು ಜನರು ಆಗಮಿಸುತ್ತಾರೆ. ವಿಶೇಷವಾಗಿ ಆಂಧ್ರ ಕ್ಯಾಂಪಿನವರೇ ಹೆಚ್ಚು ಈ ಕೋಳಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

ಇನ್ನೂ ಕೋಳಿ ಪಂದ್ಯಕ್ಕೆ ಬರುವವರು ಹುಂಜದ ಜತೆಗೆ ಹಣದ ಕಂತೆಯನ್ನೇ ಹೊತ್ತು ತರುತ್ತಾರೆ. ನಾನಾ ತಳಿಯ ಹುಂಜಗಳು, ವಿಶೇಷವಾಗಿ ಜವಾರಿ ಹುಂಜಕ್ಕೆ ಬೆಟ್ಟಿಂಗ್‌ನಲ್ಲಿ ಭಾರಿ ಬೇಡಿಕೆ. ಇದರಲ್ಲಿ ಅಬ್ರಾಸ್‌ ಹುಂಜಕ್ಕೆ ಜನರು ಮುಗಿಬಿದ್ದು ಬೆಟ್ಟಿಂಗ್‌ ಕಟ್ಟುತ್ತಿದ್ದರು. ಬೆಟ್ಟಿಂಗ್‌ನಿಂದಾಗಿ ಈ ಭಾಗದಲ್ಲಿ ಹುಂಜದ ದರವೂ ಹೆಚ್ಚಾಗಿದೆ. ಎತ್ತರ, ಶೈಲಿ, ತೂಕವನ್ನು ಗಮನಿಸಿ 600-1000 ದರದಲ್ಲಿ ಹುಂಜಗಳನ್ನು ಖರೀದಿ ಮಾಡಲಾಗುತ್ತದೆ. ಜೂಜಾಟಕ್ಕೆ ಸುತ್ತಲಿನ ಹಳ್ಳಿಗಳ ನೂರಾರು ಯುವಕರು ಸಾವಿರಾರು ರು. ಬೆಟ್ಟಿಂಗ್‌ನಲ್ಲಿ ಹಾಳು ಮಾಡುತ್ತಿದ್ದಾರೆ. ಆರಂಭದಲ್ಲಿ 500-1000 ಇದ್ದ ಬೆಟ್ಟಿಂಗ್‌ ದರ ಮೂರನೇ ದಿನಕ್ಕೆ 5000ರಿಂದ ಲಕ್ಷದ ವರೆಗೆ ಗಡಿ ದಾಟಿದೆ ಎಂದು ಅಂದಾಜು ಮಾಡಲಾಗಿದೆ.

ಪ್ರತಿ ವರ್ಷವೂ ಸಂಕ್ರಾಂತಿ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕೋಳಿ ಪಂದ್ಯ ಇಲ್ಲಿ ಸಾಮಾನ್ಯವಾಗಿ ನಡೆಯುತ್ತದೆ ಎಂದೂ ಗೊತ್ತಿದ್ದರೂ ಪೊಲೀಸರು ಮಾತ್ರ ಕ್ರಮಕ್ಕೆ ಇದುವರೆಗೂ ಮುಂದಾಗದಿರುವುದು ಅನುಮಾನಕ್ಕೆ ಎಡೆಮಾಡಿದೆ.

Follow Us:
Download App:
  • android
  • ios