Asianet Suvarna News Asianet Suvarna News

ಹೊಸಪೇಟೆ: ಹಂಪಿಯಲ್ಲಿ ಮೂಲೆಗುಂಪಾದ ಬ್ಯಾಟರಿ ಚಾಲಿತ ವಾಹನ

ಮೂಲೆ ಸೇರಿದ 21 ಬ್ಯಾಟರಿ ಚಾಲಿತ ವಾಹನ| 25ರಲ್ಲಿ 4 ವಾಹನ ಮಾತ್ರ ಕಾರ್ಯನಿರ್ವಹಣೆ, ಪ್ರವಾಸಿಗರ ಪರದಾಟ| 25 ಬ್ಯಾಟರಿ ಚಾಲಿತ ವಾಹನಕ್ಕಾಗಿ 1.72 ಕೋಟಿ ವೆಚ್ಚ| ಬೆಳಗ್ಗೆ 7.30 ರಿಂದ ಸಂಜೆ 6.30ರ ವರೆಗೆ ಬ್ಯಾಟರಿ ಚಾಲಿತ ವಾಹನಗಳ ಸೇವೆ ಲಭ್ಯ|

Charging Vehicle Service Shutdown in Hampi in Ballari District
Author
Bengaluru, First Published Jan 1, 2020, 12:31 PM IST
  • Facebook
  • Twitter
  • Whatsapp

ಸಿ.ಕೆ. ನಾಗರಾಜ್‌

ಹೊಸಪೇಟೆ(ಜ.01): ಕಾಲು ಇದ್ದವರು ಹಂಪಿ ನೋಡಬೇಕು, ಕಣ್ಣು ಇದ್ದವರು ಕನಕಗಿರಿ ನೋಡಬೇಕು ಎನ್ನುವ ಗಾದೆಯ ಮಾತಿನಂತೆ ಹಂಪಿಯನ್ನು ನಡೆದುಕೊಂಡೇ ವೀಕ್ಷಿಸುವುದು ರೂಢಿ. 10 ವರ್ಷಗಳ ಹಿಂದೆ ಹಂಪಿ ಪ್ರಾಧಿಕಾರದವರು ಕೆಲವು ಸ್ಮಾರಕಗಳ ಬಳಿ ಹೊಗೆ ಹೊರಹಾಕುವ ವಾಹನಗಳು ಹೋಗದಂತೆ ತಡೆದು 25 ಪರಿಸರಸ್ನೇಹಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಿದರು. ಆದರೆ ಈಗ 25 ಬ್ಯಾಟರಿ ಚಾಲಿತ ವಾಹನಗಳಲ್ಲಿ ಕೇವಲ 4 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಪ್ರವಾಸಿಗರು ಗಂಟೆ ಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಮೊದಲು ಹಂಪಿಯ ಯಾವುದೇ ಪ್ರದೇಶಕ್ಕೂ ವಾಹನಗಳನ್ನು ತೆಗೆದುಕೊಂಡು ಹೋಗಿ ಸ್ಮಾರಕಗಳನ್ನು ವೀಕ್ಷಿಸಬಹುದಾಗಿತ್ತು. ಆದರೆ ದೊಡ್ಡ ದೊಡ್ಡ ವಾಹನಗಳಿಂದ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾ​ಧಿಕಾರ ಹಾಗೂ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು ಸ್ಮಾರಕಗಳ ಬಳಿ ವಾಹನ ನಿಷೇಧಿಸಿದರು. ವಿಜಯವಿಠಲ ದೇವಸ್ಥಾನದ ಬಳಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಂಪಿಯ ಗೆಜ್ಜಲ ಮಂಟಪದಿಂದ ವಿಜಯವಿಠಲ ದೇವಸ್ಥಾನದವರೆಗೆ 1.5 ಕಿಮೀ ಸಂಚರಿಸಲು 2010 ಡಿ. 15 ರಂದು 25 ಬ್ಯಾಟರಿ ಚಾಲಿತ ವಾಹನ ಆರಂಭಿಸಲಾಯಿತು. ಈ ಯೋಜನೆ ಆರಂಭದಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ವಾಹನ ಆಗಾಗ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿತ್ತು. ಈಗ ನಾಲ್ಕೇ ವಾಹನ ಕಾರ್ಯನಿರ್ವಹಿಸುತ್ತಿರುವುದರಿಂದ ಕಲ್ಲಿನ ತೇರು, ವಿಜಯವಿಠಲ ದೇವಸ್ಥಾನ, ಸಪ್ತಸ್ವರ ಮಂಟಪ ನೋಡಲು ಹೋಗುವವರು ಗೆಜ್ಜಲ ಮಂಟಪದ ಬಳಿ ವಾಹನ ನಿಲ್ಲಿಸಿ ಗಂಟೆ ಗಟ್ಟಲೆ ಕಾಯಬೇಕು. ಕೆಲವರು ಕಾಯುವ ತಾಳ್ಮೆಯಿಲ್ಲದೆ ನಡೆದೇ ಹೋಗುತ್ತಾರೆ. ಇನ್ನೂ ಕೆಲವರು ವಾಪಸ್‌ ತೆರಳುತ್ತಾರೆ. ಅಶಕ್ತರು ಅನಿವಾರ್ಯವಾಗಿ ಈ ವಾಹನಕ್ಕಾಗಿ ಕಾಯುತ್ತಾರೆ.

ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ. ಬ್ಯಾಟರಿ ಚಾಲಿತ ವಾಹನಕ್ಕಾಗಿ ಕಾಯುವ ಸ್ಥಳದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಶೌಚಖಾನೆ, ಮೂತ್ರಖಾನೆಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಿದೆ.

1.72 ಕೋಟಿ ವೆಚ್ಚ:

ಇಲ್ಲಿ 25 ಬ್ಯಾಟರಿ ಚಾಲಿತ ವಾಹನಕ್ಕಾಗಿ ಸುಮಾರು 1.72 ಕೋಟಿ ವೆಚ್ಚ ಮಾಡಲಾಗಿತ್ತು. ಅವುಗಳಲ್ಲಿ 11 ಆಸನಗಳಿರುವ 16 ವಾಹನಗಳು ಮತ್ತು 14 ಆಸನಗಳಿರುವ 9 ವಾಹನಗಳು ಇದ್ದವು. ಗೆಜ್ಜಲು ಮಂಟಪದಿಂದ ವಿಜಯವಿಠಲ ದೇವಸ್ಥಾನದ ವರೆಗೆ ಹೋಗಿಬರಲು ಒಬ್ಬರು ಹಿರಿಯರಿಗೆ 20, ಚಿಕ್ಕವರಿಗೆ 10 ಪಡೆಯಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿದೆ. ಬೆಳಗ್ಗೆ 7.30 ರಿಂದ ಸಂಜೆ 6.30ರ ವರೆಗೆ ಬ್ಯಾಟರಿ ಚಾಲಿತ ವಾಹನಗಳ ಸೇವೆ ಲಭ್ಯವಿದೆ.

ಹಂಪಿ ಪ್ರಾಧಿಕಾರದವರು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿಗೆ ಬರುವ ಪ್ರವಾಸಿಗರಿಗೆ ಅನನುಕೂಲ ಉಂಟಾಗುವಂತಾಗಬಾರದು ಎಂಬುದು ಪ್ರವಾಸಿಗರ ಅಭಿಪ್ರಾಯ.
ಹಂಪಿಯಲ್ಲಿ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವು ಪ್ರದೇಶದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಬಳಿಕೆ ಮಾಡುವುದು ಸರಿ. ಆದರೆ ಪ್ರವಾಸಿಗರಿಗೆ ಬೇಕಾಗುವಷ್ಟುಸಂಖ್ಯೆಯಲ್ಲಿ ವಾಹನಗಳನ್ನು ವ್ಯವಸ್ಥೆಗೊಳಿಸಬೇಕು. ಪ್ರವಾಸಿಗರಿಗೆ ತೊಂದರೆಯಾಗಬಾರದು. ದುರಸ್ತಿಗೆ ಬಂದಾಗ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರವಾಸಿಗರಾದ ಮಂಜುನಾಥ, ಕುಮಾರಸ್ವಾಮಿ, ವಿಶ್ವನಾಥ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios