ಬೆಂಗಳೂರು(ಫೆ.19): ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶಿ (ಜೆಎಂಬಿ) ಉಗ್ರ ಸಂಘಟನೆಯ ಶಂಕಿತ 11 ಉಗ್ರರ ವಿರುದ್ಧ ವಿಶೇಷ ತನಿಖಾ ತಂಡ (ಎನ್‌ಐಎ) ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಸೋಲದೇವನಹಳ್ಳಿಯ ಚಿಕ್ಕಬಾಣಾವರದ ಬಾಡಿಗೆ ಮನೆಯಲ್ಲಿ ಶಂಕಿತರ ಬಂಧನ ಪ್ರಕರಣ ಸಂಬಂಧ ಪ್ರತ್ಯೇಕ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು, ಎನ್‌ಐಎ ವಿಶೇಷ ಕೋರ್ಟ್‌ಗೆ ಮಂಗಳವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದ ನಜೀರ್‌ ಶೇಖ್‌, ಅರಿಫ್‌ ಹುಸೈನ್‌, ಅಸೀಫ್‌ ಇಕ್ಬಾಲ್, ಜೈದುಲ್‌ ಇಸ್ಲಾಂ, ಕಡೋರ್‌ ಕಾಜಿ, ಹಬೀಬುರ್‌ ರಹ್ಮಾನ್‌, ಮಹಮದ್‌ ದಿಲ್ವರ್‌ ಹೊಸೈನ್‌, ಮುಸ್ಫಿಜುರ್‌ ರಹ್ಮಾನ್‌, ಆದಿಲ… ಶೇಖ್‌, ಅಬ್ದುಲ್ ಕರೀಂ, ಹುಸೇನ್‌ ಅವರ ಕೈವಾಡ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

ಕರ್ನಾಟಕದಲ್ಲಿ ಬಾಂಗ್ಲಾ ಉಗ್ರರ ಅಡಗುತಾಣ

ಜಗತ್ತಿನ ಎಲ್ಲೆಡೆ ಜಿಹಾದ್‌ ಮತ್ತು ಷರಿಯಾ ಜಾರಿ ಉದ್ದೇಶದಿಂದ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದರು. ಮೂಲತಃ ಬಾಂಗ್ಲಾದ ಜೆಎಂಬಿ ಉಗ್ರ ಸಂಘಟನೆ ಭಾರತದಲ್ಲಿ ಸಹ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಪ್ರಮುಖ ಆರೋಪಿ ಜೈದುಲ್‌ ಇಸ್ಲಾಂ ಅಲಿಯಾಸ್‌ ಕೌಸರ್‌ ಅಕ್ರಮವಾಗಿ ದೇಶಕ್ಕೆ ಬಂದಿದ್ದ. 2014ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಬದ್ರ್ವಾನ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಲ್ಲಿಂದ ತಲೆಮರೆಸಿಕೊಂಡು ಬಂದಿದ್ದ ಆರೋಪಿ ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿದ್ದ. ರಾಮನಗರ, ದೊಡ್ಡಬಳ್ಳಾಪುರ, ಬೆಂಗಳೂರಿನ ಸೋಲದೇವನಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ಕೆ.ಆರ್‌.ಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆರೋಪಿಗಳು ನೆಲೆಸಿದ್ದರು. ಬಳಿಕ ಪೊಲೀಸರು ಬಂಧಿಸಿದ್ದರು.