ನವದೆಹಲಿ [ಅ.15]:  ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡೀಪಾರು ಮಾಡಬೇಕು ಎಂಬ ಕೂಗು ಎದ್ದಿರುವಾಗಲೇ, ಬಾಂಗ್ಲಾ ವಲಸಿಗರ ಸೋಗಿನಲ್ಲಿ ‘ಜಮಾತ್‌ ಉಲ್‌ ಮುಜಾಹಿದಿನ್‌ ಬಾಂಗ್ಲಾದೇಶ’ (ಜೆಎಂಬಿ) ಸಂಘಟನೆಯ ಭಯೋತ್ಪಾದಕರು ಕರ್ನಾಟಕದಲ್ಲಿ ಸಕ್ರಿಯರಾಗಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಅಧಿಕೃತವಾಗಿ ಹೊರಬಿದ್ದಿದೆ.

2014ರಿಂದ 2018ರವರೆಗೆ ಬೆಂಗಳೂರಿನಲ್ಲಿ 20ರಿಂದ 22 ಅಡಗುತಾಣಗಳನ್ನು ನಿರ್ಮಿಸಿದ್ದ ಈ ಜೆಎಂಬಿ ಉಗ್ರರು, ದಕ್ಷಿಣ ಭಾರತದಲ್ಲಿ ತಮ್ಮ ನೆಲೆ ವಿಸ್ತರಿಸಲು ಯತ್ನಿಸಿದ್ದರು. ಕರ್ನಾಟಕ ಗಡಿಯ, ತಮಿಳು ನಾಡಿನ ಕೃಷ್ಣಗಿರಿಯಲ್ಲಿ ರಾಕೆಟ್‌ ಲಾಂಚರ್‌ಗಳ ಪ್ರಯೋಗವನ್ನೂ ನಡೆಸಿದ್ದರು. ಬುದ್ಧ ದೇಗುಲಗಳೇ ಈ ಉಗ್ರರ ಟಾರ್ಗೆಟ್‌ ಆಗಿವೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಸ್ವತಃ ರಾಷ್ಟ್ರೀಯ ತನಿಖಾ ದಳವೇ (ಎನ್‌ಐಎ) ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ದೇಶದಲ್ಲಿ ಸಕ್ರಿಯರಾಗಿರುವ 130 ಜೆಎಂಬಿ ಉಗ್ರರ ಪಟ್ಟಿಯನ್ನು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜತೆ ಹಂಚಿಕೊಂಡಿದೆ.

ರಾಜ್ಯಗಳ ಭಯೋತ್ಪಾದನಾ ನಿಗ್ರಹ ದಳಗಳ ಮುಖ್ಯಸ್ಥರ ಸಭೆಯಲ್ಲಿ ಸೋಮವಾರ ಮಾತನಾಡಿದ ಎನ್‌ಐಎ ಮುಖ್ಯಸ್ಥ ವೈ.ಸಿ.ಮೋದಿ ಅವರು, ಜೆಎಂಬಿ ಸಂಘಟನೆ ಭಾರತದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಲು ಪ್ರಯತ್ನಿಸುತ್ತಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಈ ಸಂಘಟನೆ ಸಕ್ರಿಯವಾಗಿದೆ. ಜೆಎಂಬಿ ನಾಯಕತ್ವದ ಜತೆ ನಿಕಟ ಸಂಪರ್ಕ ಹೊಂದಿರುವ 130 ಶಂಕಿತ ಉಗ್ರರ ಪಟ್ಟಿಯನ್ನು ಈ ರಾಜ್ಯಗಳಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದ ಎನ್‌ಐಎ ಮಹಾನಿರೀಕ್ಷಕ ಅಲೋಕ್‌ ಮಿತ್ತಲ್‌ ಅವರು, ರಾಜ್ಯಗಳ ಜತೆ ಹಂಚಿಕೊಂಡಿರುವ ಶಂಕಿತ ಉಗ್ರರ ಪಟ್ಟಿಯಲ್ಲಿ 130 ಹೆಸರುಗಳಿವೆ ಎಂದು ಸ್ಪಷ್ಟನೆ ನೀಡಿದರು.

2014ರಿಂದ 2018ರವರೆಗೆ ಜೆಎಂಬಿ ಸಂಘಟನೆ ಬೆಂಗಳೂರಿನಲ್ಲಿ 20ರಿಂದ 22 ಅಡಗುತಾಣಗಳನ್ನು ಹೊಂದಿತ್ತು. ದಕ್ಷಿಣ ಭಾರತದಲ್ಲಿ ತನ್ನ ನೆಲೆ ವಿಸ್ತರಿಸಲು ಪ್ರಯತ್ನಿಸಿತ್ತು. ಅಲ್ಲದೆ ಕರ್ನಾಟಕ ಗಡಿಯಲ್ಲಿರುವ ಕೃಷ್ಣಗಿರಿಯ ಬೆಟ್ಟದಲ್ಲಿ ರಾಕೆಟ್‌ ಲಾಂಚರ್‌ಗಳ ಪರೀಕ್ಷೆಯನ್ನೂ ನಡೆಸಿತ್ತು. ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯ ಮುಸ್ಲಿಮರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬೌದ್ಧ ದೇಗುಲಗಳ ಮೇಲೆ ದಾಳಿ ನಡೆಸಲು ಈ ಸಂಘಟನೆ ಉತ್ಸುಕವಾಗಿದೆ ಎಂದು ವಿವರಿಸಿದರು.

2007ರಲ್ಲಿ ಜೆಎಂಬಿ ಸಂಘಟನೆಯ ಚಟುವಟಿಕೆಗಳು ಪ್ರಾರಂಭವಾದವು. ಆರಂಭದಲ್ಲಿ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂಗೆ ಸೀಮಿತವಾಗಿದ್ದ ಸಂಘಟನೆ ನಂತರ ದೇಶದ ಇತರೆ ಭಾಗಗಳಿಗೂ ವಿಸ್ತರಣೆ ಯಾಯಿತು. ಜೆಎಂಬಿ ನಾಯಕತ್ವದ ಜತೆ 130 ಕಾರ್ಯಕರ್ತರು ನಿಕಟ ಸಂಪರ್ಕದಲ್ಲಿರುವುದು ತನಿಖಾ ಹಂತದಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಐಸಿಸ್‌ ನಂಟು: 127 ಬಂಧನ

ದೇಶದಲ್ಲಿ ನಡೆಯುತ್ತಿರುವ ಜಿಹಾದಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಎನ್‌ಐಎ ಮಹಾನಿರೀಕ್ಷಕ ಅಲೋಕ್‌ ಮಿತ್ತಲ್‌ ಅವರು, ಮಧ್ಯಪ್ರಾಚ್ಯದ ಐಸಿಸ್‌ ಉಗ್ರ ಸಂಘಟನೆ ಜತೆ ನಂಟು ಹೊಂದಿದ ಸಂಬಂಧ ಈವರೆಗೆ ದೇಶದಲ್ಲಿ 127 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ವಿವಾದಾತ್ಮಕ ಇಸ್ಲಾಮಿಕ್‌ ಬೋಧಕ ಹಾಗೂ ಭಯೋತ್ಪಾದನೆ ಆರೋಪಿ ಝಾಕಿರ್‌ ನಾಯ್‌್ಕ ಮತ್ತು ಶ್ರೀಲಂಕಾ ಸರಣಿ ಬಾಂಬ್‌ ಸ್ಫೋಟದ ರೂವಾರಿ ಮೌಲ್ವಿ ಜಹ್ರಾನ್‌ ಹಶ್ಮಿ ವಿಡಿಯೋ ಭಾಷಣಗಳಿಂದ ಪ್ರೇರಿತರಾಗಿದ್ದಾಗಿ ಬಂಧಿತರೆಲ್ಲಾ ತಿಳಿಸಿದ್ದಾರೆ ಎಂದು ಹೇಳಿದರು.