Asianet Suvarna News Asianet Suvarna News

ಮೈಸೂರು ದಸರಾ: ಮೆರವಣಿಗೆ ತೆರಳಲು ಅಡೆತಡೆ

ಜಂಬೂಸವಾರಿ ವೀಕ್ಷಣೆಗೆ ಅರಮನೆ ಒಳಗೆ ಪ್ರವೇಶಲು ವಿವಿಧ ಪಾಸ್‌ಗಳನ್ನು ಹಿಡಿದು ಬಂದಿದ್ದ ಸಾರ್ವಜನಿಕರು, ಯಾವ ಗೇಟ್‌ಗಳನ್ನು ಪ್ರವೇಶಿಸಬೇಕೆಂದು ಗೊತ್ತಾಗದೆ ಪರದಾಡಿದರು.

Chaos on the way to the Dasara Ambari procession snr
Author
First Published Oct 6, 2022, 5:08 AM IST

ಎಲ್‌.ಎಸ್‌. ಶ್ರೀಕಾಂತ್‌

 ಮೈಸೂರು (ಅ.06):  ಜಂಬೂಸವಾರಿ ವೀಕ್ಷಣೆಗೆ ಅರಮನೆ ಒಳಗೆ ಪ್ರವೇಶಲು ವಿವಿಧ ಪಾಸ್‌ಗಳನ್ನು ಹಿಡಿದು ಬಂದಿದ್ದ ಸಾರ್ವಜನಿಕರು, ಯಾವ ಗೇಟ್‌ಗಳನ್ನು ಪ್ರವೇಶಿಸಬೇಕೆಂದು ಗೊತ್ತಾಗದೆ ಪರದಾಡಿದರು.

ಅರಮನೆಯ ಕರಿಕಲ್ಲು ತೊಟ್ಟಿಹಾಗೂ ಜಯ ಮಾರ್ತಾಂಡ ಗೇಟ್‌ಗಳಲ್ಲಿ ಪಾಸ್‌ಗಳನ್ನು ತಂದ ಸಾರ್ವಜನಿಕರಿಗೆ ಬಿಡಲಾಗುತ್ತಿತ್ತು. ಇದಲ್ಲದೆ ಕರಿಕಲ್ಲು ತೊಟ್ಟಿಗೇಟ್‌ನಲ್ಲಿ ವಿಐಪಿ, ಅಧಿಕಾರಿಗಳು ಹಾಗೂ ಪೊಲೀಸ್‌ ವಾಹನಗಳನ್ನು ಸಹ ಬಿಡಲಾಗುತ್ತಿತ್ತು.

ಪಾಸ್‌ ಪಡೆದವರು ಯಾವ ಗೇಟ್‌ನಲ್ಲಿ ಒಳ ಪ್ರವೇಶ ಮಾಡಲು ಗೊತ್ತಾಗದೆ ಇದೇ ಗೇಟ್‌ನಲ್ಲಿ ಬಿಡುವಂತೆ ಕೆಲವು ಮಂದಿ ಜಗಳಕ್ಕೆ ನಿಂತರು. ಸ್ಥಳದಲ್ಲೆ ಇದ್ದ ಪೊಲೀಸರು (Police)  ಮೈಕ್‌ನಲ್ಲಿ ಹೇಳುತ್ತಿದ್ದರೂ ಸಹ ಸಾರ್ವಜನಿಕರು ಅರಮನೆ ನುಗ್ಗಲು ಯತ್ನಿಸಿದರು. ಇದನ್ನು ತಡೆಯು ಪೊಲೀಸರು ಹರಸಾಹಸ ಪಟ್ಟರು.

ಅರಮನೆ ಪ್ರವೇಶಿಸಿದ ನಂತರ ಪಾಸ್‌ನಲ್ಲಿ ನಮೂದಿಸಿದ್ದ ವಿಭಾಗಗಳಲ್ಲೆ ಆಸೀನರಾಗಬೇಕೆಂದು ಎಷ್ಟುಹೇಳಿದರೂ ಸಹ ಕೇಳದೆ ತಮಗೆ ಇಷ್ಟಬಂದ ಕಡೆ ನುಗ್ಗಲು ಯತ್ನಿಸಿದಾಗ ತಡೆಯಲು ಯತ್ನಿಸಿದಾಗ ಸ್ವಲ್ಪ ಸಮಯ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.

ಇದಲ್ಲದೆ ಕೆಲವು ಪೊಲೀಸರು, ಅಧಿಕಾರಿಗಳು, ರಾಜಕಾರಣಿಗಳು (Politicians)  ತಮ್ಮ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಕರೆ ತಂದು ಬಿಡುತ್ತಿದ್ದದ್ದು ಸರ್ವೆ ಸಾಮಾನ್ಯವಾಗಿತ್ತು. ಇದರಿಂದ ಪಾಸ್‌ನಲ್ಲಿ ಒಳ ಬಂದವರಿಗೆ ಕಡೆಯಲ್ಲಿ ಕುರ್ಚಿ ಇಲ್ಲದೆ ನಿಂತೆ ಜಂಬೂಸವಾರಿ ವೀಕ್ಷಿಸಿದರು.

ಪತ್ರಿಕಾ ಗ್ಯಾಲರಿಯಲ್ಲಿ ಬೇರೆಯವರಿಗೆ ಅವಕಾಶ

ಅರಮನೆಯಲ್ಲಿ ಜಂಬೂಸವಾರಿ ವರದಿ ಮಾಡಲು ಬರುವ ಪತ್ರಕರ್ತರಿಗಾಗಿ ಅವಕಾಶ ಕಲ್ಪಿಸಿದ್ದ ಪತ್ರಿಕಾ ಗ್ಯಾಲರಿಯಲ್ಲಿ ಪತ್ರಕರ್ತರು ತೆರಳುವ ಮುನ್ನಾ ಇತರರು ಮೊದಲೆ ಬಂದು ಆಸೀನರಾಗಿದ್ದರು.

ಮೆರವಣಿಗೆ ತೆರಳಲು ಅಡೆತಡೆ

ಮೆರವಣಿಗೆ ತೆರಳುವ ಮಾರ್ಗದಲ್ಲಿ ಪತ್ರಿಕಾ ಛಾಯಾಗ್ರಾಹಕರು ಹೊರತುಪಡಿಸಿ ಇತರೆ ಛಾಯಾಗ್ರಾಹಕರು, ಮತ್ತಿತರರು ವಿವಿಧ ಐಡಿ ಕಾರ್ಡುಗಳನ್ನು ಹಾಕಿಕೊಂಡು ಮೆರವಣಿಗೆಯ ಚಿತ್ರಗಳನ್ನು ಕ್ಲಿಕಿಸುತ್ತಿದ್ದು, ಅಲ್ಲೆಲ್ಲ ನಿಂತಿದ್ದರಿಂದ ಮೆರವಣಿಗೆ ಸರಾಗವಾಗಿ ಸಾಗಲು ಅಡೆತಡೆ ಉಂಟಾಯಿತು. ಅವ್ಯವಸ್ಥೆ ಎದ್ದು ಕಾಣುತ್ತಿತ್ತು, ಎರಡು ಕಡೆಗಳಲ್ಲು ನಿಂತಿದ್ದರಿಂದ ವೀಕ್ಷಕರಿಗೂ ಮೆರವಣಿಗೆ ವೀಕ್ಷಿಸಲು ಕಿರಿಕಿರಿ ಉಂಟಾಯಿತು.

ಜಂಬೂಸವಾರಿ ಅಂತಿಮ ಹಂತದಲ್ಲಂತೂ ನೂರಾರು ಮಂದಿ ಸಾರ್ವಜನಿಕರು, ಛಾಯಾಗ್ರಾಹಕರು ಪುಷ್ಪಾರ್ಚನೆ ಮಾಡುವ ಸ್ಥಳಕ್ಕೆ ನುಗ್ಗಿದ್ದರಿಂದ ಅವರನ್ನು ವಾಪಸ್‌ ಕಳುಹಿಸಲು ಪೊಲೀಸರು ಪರದಾಡಿದರು.

ಜನಜಂಗುಳಿ : 

ಜಂಬೂಸವಾರಿ ತೆರಳುವ ಮಾರ್ಗದಲ್ಲಿ ಅನಗತ್ಯವಾಗಿ ಓಡಾಡುವರಿಗೆ ಸಾಮಾನ್ಯವಾಗಿ ನಿಯಂತ್ರಣವಿರುತ್ತದೆ.

ಆದರೆ ಈ ಬಾರಿಯ ಅರಮನೆ ಅಂಗಳದಲ್ಲಿ ಜಂಬೂಸವಾರಿ ಸಾಗುವಾಗ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಮರಿ ಪುಡಾರಿಗಳದ್ದೇ ಕಾರುಬಾರು.

ಕಳೆದ ಎರಡು ವರ್ಷಗಳಿಂದ ಸರಳ ದಸರಾ ಆಚರಣೆಯಿಂದಾಗಿ ಕಳೆಗುಂದಿದ್ದ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಈ ಬಾರಿ ಲಕ್ಷಾಂತರ ಮಂದಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ನಿಯಂತ್ರಿಸುವುದು ಪೊಲೀಸರಿಗೆ ಸಾಕುಬೇಕಾಗಿ ಹೋಯಿತು.

ಜನಸಂದಣಿ ಎಷ್ಟಿತ್ತೆಂದರೆ ಮೆರವಣಿಗೆ ಹಾದಿಯಲ್ಲಿಯೇ ಕುಳಿತು ಸಾರ್ವಜನಿಕರು ಮೆರವಣಿಗೆ ವೀಕ್ಷಿಸುವಂತಾಯಿತು. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮೆರವಣಿಗೆ ಸಾಗುವ ಹಾದಿಯಲ್ಲಿ ಛಾಯಾಗ್ರಹಕರು, ಪತ್ರಕರ್ತರು ಮತ್ತು ಪೊಲೀಸರ ಹೊರತಾಗಿ ಬೇರೆ ಯಾರು ಇರುತ್ತಿರಲಿಲ್ಲ. ಆದರೆ ಈ ಬಾರಿ ಸಾರ್ವಜನಿಕರನ್ನೆ ಮೆರವಣಿಗೆ ಮಾರ್ಗದಲ್ಲಿ ಕೂರಿಸಿದ್ದರಿಂದ ಅನೇಕ ಸ್ತಬ್ಧಚಿತ್ರಗಳು ಸಂಚರಿಸುವುದೇ ಕಷ್ಟವಾಯಿತು.

ಆನೆ ಬರುವ ದಾರಿಯ ಮಾರ್ಗಕ್ಕೆ ಅಡ್ಡಲಾಗಿ ಜನ ಕುಳಿತಿದ್ದರಿಂದ ತೊಂದರೆ ಉಂಟಾಯಿತು. ಅಂಬಾರಿಯನ್ನು ಹೊತ್ತ ಆನೆ ಬರುವಾಗಲಂತೂ ಪೊಲೀಸರು ಉಪ ಸಮಿತಿಗಳ ಪದಾಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸುವುದು ಅಸಾಧ್ಯವಾಯಿತು. ಒಂದು ರೀತಿಯಲ್ಲಿ ಸಂತೆಯಂತೆ ಆಗಿತ್ತು.

ದಯಮಾಡಿ ಹಿಂದೆ ಬನ್ನಿ. ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಕಾರ್ಯಕ್ರಮ ನಿರೂಪಕರು ಪದೇ ಪದೇ ಧ್ವನಿವರ್ಧಕದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದರು. ಒಂದು ಹಂತದಲ್ಲಿ ಸಹಕರಿಸದಿದ್ದರೇ ಏಟು ಬೀಳುತ್ತದೆ ಎಂದರು. ಅರಮನೆ ಆವರಣದಲ್ಲಿ ಈ ರೀತಿ ಹಿಂದೆ ಯಾವತ್ತೂ ಆಗಿರಲಿಲ್ಲ.

ಮೊಬೈಲ್‌ ಫೋಟೋದವರ ಕಾಟ

ಅರಮನೆ ಆವರಣದಲ್ಲಿ ಸ್ತಬ್ಧ ಚಿತ್ರಗಳ ಮುಂದೆ ನಿಂತು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಳ್ಳುವವರ ಕಾಟ ವಿಪರೀತವಾಗಿತ್ತು. ಕೆಲ ಪೊಲೀಸರು ಕೂಡ ಕರ್ತವ್ಯ ಮರೆತು ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತಿದ್ದರು!. ಮೆರವಣಿಗೆ ಹಾಗೂ ಸ್ತಬ್ಧ ಚಿತ್ರ ಉಪ ಸಮಿತಿಯ ಸದಸ್ಯರು ಗುರುತಿನ ಚೀಟಿ ಹಾಕಿಕೊಂಡು ಅತ್ತಇತ್ತ ಅಡ್ಡಾಡುತ್ತಾ ಭಾರಿ ಕಿರಿಕಿರಿಗೆ ಕಾರಣದಾರ.

ಕುಣಿದ ಉಸ್ತುವಾರಿ ಸಚಿವರು

ಕಾಶ್ಮೀರದ ಡೋಂಗ್ರೆ ಕುಣಿತದ ಜಾನಪದ ಕಲಾತಂಡ ಆಗಮಿಸುತ್ತಿರುವಾಗ ಎದುರಾದ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಅಲ್ಲಿನ ಕಲಾವಿದರೊಡನೆ ತಾವೂ ಹೆಜ್ಜೆ ಹಾಕಿದರು. ಈ ವೇಳೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಅವರೂ ಕೂಡ ಹೆಜ್ಜೆ ಹಾಕಿದರು. ಪತ್ರಿಕಾ ಛಾಯಾಗ್ರಾಹಕರ ಜೊತೆಗೆ ಇತರರೂ ಮೊಬೈಲ್‌ ಮೂಲಕ ಫೋಟೊ ತೆಗೆಯಲು ಮುಂದಾದ್ದರಿಂದ ಮಹಿಳಾ ಕಲಾವಿದರು ಕಿರಿಕಿರಿ ಅನುಭವಿಸಿದರು.

ನೂಕು ನುಗ್ಗಲು:

ಸಯ್ಯಾಜಿರಾವ್‌ ರಸ್ತೆಯ ಪರಾಸ್‌ ಹೊಟೇಲ್‌ ಪಕ್ಕದ ಗಲ್ಲಿಯಲ್ಲಿ ಒಂದು ಹಂತದಲ್ಲಿ ತೀವ್ರ ನೂಕು ನುಗ್ಗಲು ಉಂಟಾಯಿತು. ಈ ವೇಳೆ ತಳ್ಳಾಟ ಹೆಚ್ಚಾದ ಹಿನ್ನೆಲೆಯಲ್ಲಿ ಮುಂದೆ ಕುಳಿತಿದ್ದ ಮಹಿಳೆಯರು ಎದ್ದು ನಿಂತು ರಸ್ತೆಗೆ ಬಂದರು. ಮಕ್ಕಳ ಸುರಕ್ಷತೆಯ ಕಾರಣಕ್ಕೆ ಅವರನ್ನು ಪೊಲೀಸರು ಬ್ಯಾರಿಕೇಡ್‌ ನಿಂದ ಹೊರಕ್ಕೆ ಕರೆದುಕೊಂಡು ಸಮಾಧಾನ ಪಡಿಸಿದರು.

ನಂತರ ಮಹಿಳಾ ಪೊಲೀಸ ನೆರವಿನೊಂದಿಗೆ ಮಹಿಳೆಯರನ್ನು ಸುರಕ್ಷಿತವಾಗಿರಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು.

Follow Us:
Download App:
  • android
  • ios