ಹಾಸನ (ಡಿ.11):  ಧರಿಸಿದ ಸಮವಸ್ತ್ರದಲ್ಲೇ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಓರ್ವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಇಡೀ ಸಮಾಜವಷ್ಟೇ ಅಲ್ಲ ಸಮಸ್ತ ಪೊಲೀಸ್‌ ಇಲಾಖೆಯೇ ಬೆಚ್ಚಿಬೀಳುತ್ತದೆ. ಇಂತಹ ಪ್ರಕರಣ ಈಗ್ಗೆ ಮೂರು ತಿಂಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ನಡೆದಿತ್ತು. ಅಲ್ಲಿನ ಪಿಎಸ್‌ಐ ಕಿರಣ್‌ಕುಮಾರ್‌ ಅವರು ತಮ್ಮ ಮನೆಯಲ್ಲೇ ಉಟ್ಟಿದ್ದ ಯೂನಿಫಾರಂನಲ್ಲೇ ನೇಣು ಹಾಕಿಕೊಂಡಿದ್ದರು. 

ಸಮಾಜವನ್ನು ರಕ್ಷಿಸಬೇಕಿದ್ದ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹೀಗೆ ನೇಣು ಹಾಕಿಕೊಂಡಿದ್ದಕ್ಕೆ ಕಾರಣವೇನೆಂದು ಇಡೀ ಜಿಲ್ಲೆಯ ಜನ ಚರ್ಚೆಯಲ್ಲಿ ಮುಳುಗಿದ್ದರು. ಆದರೆ, ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು, ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿ ಕಿರಣ್‌ ಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಲಾಖೆಯ ತನಿಖಾ ವರದಿ ಹೇಳಿದೆ.

ಈ ಕುರಿತಂತೆ ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿಗಳಾದ ಶ್ರೀನಿವಾಸಗೌಡ ಹಾಗೂ ತನಿಖೆಯ ಹೊಣೆ ಹೊತ್ತಿದ್ದ ಅರಸೀಕೆರೆ ಉಪ ವಿಭಾಗದ ಡಿವೈಎಸ್ಪಿ ನಾಗೇಶ್‌ ಅವರು ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಹದ್ಯೋಗಿಯಾಗಿದ್ದ ಚನ್ನರಾಯಪಟ್ಟಣ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಕಿರಣ್‌ಕುಮಾರ್‌ ಆತ್ಮಹತ್ಯೆ ಪ್ರಕರಣದ ತನಿಖೆ ಮಾಡಿ ವರದಿ ಸಿದ್ಧಪಡಿಸಲು ನನಗೆ ವಹಿಸಲಾಗಿತ್ತು. ಈ ಬಗ್ಗೆ ತನಿಖೆ ಮಾಡಲಾಗಿದ್ದು, ಅಂತಿಮ ವರದಿಯಲ್ಲಿ ಸುಮಾರು 52 ಜನರ ಹೇಳಿಕೆಗಳನ್ನು ಪಡೆಯಲಾಗಿದೆ. ವಿಚಾರಣೆ ವೇಳೆ ರಾಜಕೀಯ ವ್ಯಕ್ತಿಗಳು, ಪೊಲೀಸ್‌ ಇಲಾಖೆಯ ಹಿರಿಯ ಅದಿಕಾರಿಗಳು, ಸಿಬ್ಬಂದಿಗಳು, ಸಹದ್ಯೋಗಿಗಳದ್ದು, ಸಾರ್ವಜನಿಕರದು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿ​ಗಳ ವಿಚಾರಣೆ ಮಾಡಲಾಗಿದೆ. ಕಿರಣ್‌ ಕುಮಾರ್‌ ಅವರ ಮೊಬೈಲ್‌ಗೆ ಬಂದಿದ್ದ ಕರೆಗಳ ಆಧಾರದಲ್ಲಿ ಮತ್ತು ಕಿರಣ್‌ ಅವರ ತಂದೆ ತಾಯಿ ಪತ್ನಿ ಸೇರಿದಂತೆ ಅವರ ಕೌಟುಂಬಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನೆಲ್ಲಾ ವಿಚಾರಣೆ ನಡೆಸಿ ಅಂತಿಮ ವರದಿ ಸಿದ್ಧಪಡಿಸಿ ಮೇಲದಿಕಾರಿಗಳಿಗೆ ಸಲ್ಲಿಸಲಾಗಿದೆ.

ಸರಣಿ ಕೊಲೆಗಳಿಂದ ತೀವ್ರ ಒತ್ತಡ:

ಹಲವರ ವಿಚಾರಣೆ ನಂತರ ಹಾಗೂ ಕಿರಣ್‌ ಅವರ ಮೊಬೈಲ್‌ ಕರೆಗಳನ್ನು ಆಧರಿಸಿ ವಿಚಾರಣೆ ಮಾಡಿದಾಗ ಕಿರಣ್‌ ಅವರು ಚನ್ನರಾಯಪಟ್ಟಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಕೊಲೆಗಳಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಈ ಕೊಲೆಗಳ ವಿಚಾರವಾಗಿ ರಾಜಕಾರಣಿಗಳು, ಮೇಲದಿಕಾರಿಗಳಿಂದ ತೀವ್ರ ಒತ್ತಡ ಇತ್ತು. ಹಾಗೆಯೇ ಚನ್ನರಾಯಪಟ್ಟಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಣಿ ಅಪರಾಧಗಳಿಂದ ವಿವಿಧ ಸಂಘಟನೆಗಳ ಮುಖಂಡರು ಕೂಡ ಕರೆ ಮಾಡಿ ಕೊಲೆ, ದೊಂಬಿ, ಹೊಡೆದಾಟಗಳನ್ನು ತಡೆಯದಿದ್ದರೆ ಪ್ರತಿಭಟನೆ ಮಾಡುವುದಾಗಿಯೂ ಒತ್ತಡ ಬಂದಿದೆ. ಹಾಗೆಯೇ ಕಿರಣ್‌ ಕುಮಾರ್‌ ಅವರಿಗೆ ಕೆಲ ಮಾಧ್ಯಮದವರು ಕೂಡ ಆಗಾಗ್ಗೆ ಕರೆ ಮಾಡಿದ್ದು, ಅವರ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಗಳ ಕುರಿತು ಮಾಹಿತಿ ಕೇಳಿದ್ದಾರೆ. ಇದೆಲ್ಲದರಿಂದ ಕಿರಣ್‌ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎಂಬುದಾಗಿ ಹೇಳಿದರು.

ಹಾಸನದ ಪೊಲೀಸ್ ಅಧಿಕಾರಿ ಆತ್ಮಹತ್ಯೆ : ಆತ್ಮಹತ್ಯೆ ಹಿಂದಿನ ಕಾರಣ ಯಾರು..?

ಆತ್ಮಹತ್ಯೆ ಮಾಡಿಕೊಂಡ ದಿನ ಕಿರಣ್‌ ಅವರು ಅವರಿಗೆ ಆಗಿಂದಾಗ್ಗೆ ಮಾಲದಿಕಾರಿಗಳಿಂದ ಕರೆಗಳು ಬಂದಿವೆ. ಸರಣಿ ಕೊಲೆಗಳು ಹಾಗೂ ಇನ್ನಿತರೆ ಅಪರಾಧಗಳ ಬಗ್ಗೆ ಸ್ಥಿತಿಗತಿ ವಿಚಾರಿಸಿದ್ದಾರೆ. ಒಂದು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪರಾಧಗಳು ನಡೆದಾಗ ಮೇಲದಿಕಾರಿಗಳು ಠಾಣೆಗೆ ಭೇಟಿ ನೀಡುವುದು ಹಾಗೂ ಒತ್ತಡ ಹೇರುವುದು ಸಾಮಾನ್ಯ. ಪೊಲೀಸ್‌ ಇಲಾಖೆಯಲ್ಲಿ ಇದು ಇದ್ದೇ ಇರುತ್ತದೆ. ಸರಣಿ ಕೊಲೆಗಳ ವಿಚಾರವಾಗಿ ಮೇಲಿಂದಮೇಲೆ ಅದಿಕಾರಿಗಳು, ಜನಪ್ರತಿನಿದಿಗಳ ಫೋನ್‌ ಕಾಲ್‌ಗಳು ಬಂದಿವೆ. ರಾತ್ರಿಪೂರ್ತಿ ಕೆಲಸ ಮಾಡಿ ಬೆಳಗ್ಗೆ ಮನೆಗೆ ಬಂದಾಗಲೂ ಒಂದರ ಹಿಂದೆ ಒಂದರಂತೆ ಫೋನ್‌ಗಳು ಬಂದಿವೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಕಿರಣ್‌ ಅವರು ವಾಪಸ್‌ ಬರುವುದಾಗಿ ತಮ್ಮ ಜೀಪು ಚಾಲಕನಿಗೆ ಹೇಳಿ ಮನೆಯೊಳಗೆ ಹೋದವರು ಸಮವಸ್ತ್ರದಲ್ಲೇ ನೇಣು ಹಾಕಿಕೊಂಡಿದ್ದಾರೆ. ಹಾಗಾಗಿ ಇದಕ್ಕೆ ಅವರ ಮಾನಸಿಕ ಒತ್ತಡವೇ ಕಾರಣ ಎನ್ನುವುದು ಹಲವು ವಿಚಾರಣೆಗಳ ನಂತರ ಸ್ಪಷ್ಟವಾಗಿದೆ ಎಂಬುದಾಗಿ ತಿಳಿಸಿದರು.

ಇಲಾಖೆಯಲ್ಲಿ ಒತ್ತಡ ಸಹಜ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ ಗೌಡ ಮಾತನಾಡಿ, ಸಾವನ್ನಪ್ಪಿದ ಕಿರಣ್‌ ಅವರು ಎಷ್ಟುಕಾಲ್‌ ರಿಸಿವ್‌ ಮಾಡಿದ್ದಾರೆ ಎಂಬುದರ ಬಗ್ಗೆ ಮಾತ್ರ ತನಿಖೆ ನಡೆಸಿದ್ದೆವು. ನಾನು ಅಧಿಕಾರಿಯಾಗಿ ಒಂದೆರಡು ಬಾರಿ ಮಾಹಿತಿ ಕೇಳಲು ಮಾತ್ರ ಕಾಲ್‌ ಮಾಡಿದ್ದೆನು. ಪೊಲೀಸ್‌ ಅಧಿಕಾರಿಗಳು ಕೆಲಸದ ವೇಳೆ ಒತ್ತಡದಲ್ಲಿ ಇರುತ್ತಾರೆ ಎಂಬುದು ನಮಗೂ ಗೊತ್ತು. ಹಾಗಗಿ ನಾವು ಕೂಡ ಅವರಿಗೆ ಹೆಚ್ಚು ಕಾಲ್‌ ಮಾಡಿ ತೊಂದರೆ ಕೊಡುವುದಿಲ್ಲ. ಒಂದು ಮರ್ಡರ್‌ ಪ್ರಕರಣ ಇದ್ದರೆ ಅಲ್ಲಿನ ಪೊಲೀಸ್‌ ಅಧಿಕಾರಿಗಳಿಗೆ ಎಷ್ಟುಒತ್ತಡ ಇರುತ್ತದೆ ಎಂಬುದು ಗೊತ್ತಿದೆ. ಯಾವುದೇ ಒಂದು ಪ್ರಕರಣವನ್ನು ಆದಷ್ಟುಬೇಗ ತನಿಖೆ ಮಾಡಿ ಎಂದು ಹಿರಿಯ ಅಧಿಕಾರಿಗಳು ಹೇಳುವುದು ಸಾಮಾನ್ಯ. ಇದೆ ವಿಷಯವಾಗಿ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಸಂಘಟನೆಗಳು ಒತ್ತಡ ಹೇರುತ್ತವೆ. ಪದೆ ಪದೆ ಕಾಲ್‌ಗಳು ಬರುತ್ತಿದ್ದರೆ ಯಾರಿಗೆ ಆಗಲಿ ಮನಸ್ಸಿಗೆ ಕಿರಿಕಿರಿ ಆಗುವುದನ್ನೆ ಒತ್ತಡ ಎಂದು ಹೇಳಬಹುದು. ಹಾಗಾಗಿ ಯಾವುದೇ ಪಕ್ಷದ ರಾಜಕೀಯ ವ್ಯಕ್ತಿಗಳಾಗಲಿ, ಸಂಘಟನೆಯವರಾಗಲಿ ಒಬ್ಬ ಅಧಿಕಾರಿಗೆ ಹೆಚ್ಚು ಬಾರಿ ಕರೆ ಮಾಡುವುದು ಒಳ್ಳೆಯದಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.