Asianet Suvarna News Asianet Suvarna News

ಒಂದೇ ಅಭ್ಯರ್ಥಿಗೆ ಮಣೆ ಹಾಕಿದ ಕೈ, JDS, BJP : ಅವಿರೋಧ ಆಯ್ಕೆ

ಮೂರು ಪಕ್ಷಗಳೂ ಒಂದೇ ಅಭ್ಯರ್ಥಿ ಆಯ್ಕೆಗೆ ಇದೀಗ ಸಮ್ಮತಿ ಸೂಚಿಸಿದ್ದು ಈ ನಿಟ್ಟಿನಲ್ಲಿ ಜಿದ್ದಾ ಜಿದ್ದಿನ ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯೊಂದು ಮೊದಲ ಬಾರಿಗೆ ನಡೆಯುತ್ತಿದೆ. 

Channapatna Taluk Panchayat Election BJP Congress JDS To Select President Unanimously
Author
Bengaluru, First Published Jan 23, 2020, 9:09 AM IST

- ಸು.ನಾ. ನಂದಕುಮಾರ್‌

ಚನ್ನಪಟ್ಟಣ [ಜ.23]:  ರಾಜಕಾರಣವನ್ನೇ ಉಸಿರಾಡುವ ಬೊಂಬೆನಗರಿಯಲ್ಲಿ ಸಣ್ಣ ಚುನಾವಣೆಯೂ ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸುತ್ತದೆ. ಆದರೆ ಇದೇ ಮೊದಲ ಬಾರಿಗೆ  ಮತ್ತಿಕೆರೆ ತಾಪಂ ಉಪಚುನಾವಣೆಗೆ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆಮಾಡುವ ಪ್ರಯತ್ನಗಳಿಗೆ ಚಾಲನೆ ದೊರೆತಿದೆ.

ಮತ್ತೀಕೆರೆ ತಾಪಂ ಸದಸ್ಯರಾಗಿ ಆಯ್ಕೆಯಾಗಿದ್ದ ಯೋಗೀಶ್‌ ನಿಧನರಾದ ಹಿನ್ನೆಲೆಯಲ್ಲಿ ಈ ಸ್ಥಾನ ಖಾಲಿ ಉಳಿದಿತ್ತು. ಇದೀಗ ರಾಜ್ಯ ಚುನಾವಣಾ ಆಯೋಗ ಉಪಚುನಾವಣೆಗೆ ಆದೇಶ ಹೊರಡಿಸಿದ್ದು, ಫೆ. 9ಕ್ಕೆ ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಯಲ್ಲಿ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿದ್ದಾಜಿದ್ದಿಯನ್ನು ಬದಿಗಿರಿಸಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ಮುಂದಾಗಿವೆ.

ಸಂಧಾನ ಸೂತ್ರ ಸಿದ್ಧ:

ಮತ್ತೀಕೆರೆ ತಾಪಂ ಉಪಚುನಾವಣೆಗೆ ಮೂರು ಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಂಧಾನ ಸೂತ್ರವನ್ನು ಸಿದ್ಧಪಡಿಸಿವೆ. ಈ ಸೂತ್ರದ ಪ್ರಕಾರ ಮೂರೂ ಪಕ್ಷಗಳು ತಮ್ಮ ಅಧಿಕೃತ ಚಿಹ್ನೆಯಡಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಒಮ್ಮತದ ಅಭ್ಯರ್ಥಿಯನ್ನು ಪಕ್ಷೇತರವಾಗಿ ಕಣಕ್ಕಿಳಿಸುವ ಸಂಧಾನ ಸೂತ್ರವನ್ನು ರೂಪಿಸಿದ್ದು, ಇದಕ್ಕೆ ಮೂರು ಪಕ್ಷದ ಮುಖಂಡರು ಸಮ್ಮತಿ ಸೂಚಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

ರಾಮನಗರಕ್ಕಾಗಿ ಒಂದಾದ ಜನ : ಒಗ್ಗಟ್ಟಿನ ನಿರ್ಣಯ...

ಮೃತ ಸದಸ್ಯನ ಪತ್ನಿಗೆ ಪಟ್ಟ:

ಸಿದ್ಧಪಡಿಸಿರುವ ಸಂಧಾನ ಸೂತ್ರದ ಪ್ರಕಾರ ಮೃತ ಸದಸ್ಯ ಯೋಗೀಶ್‌ ಅವರ ಪತ್ನಿ ಲೀಲಾವತಿಯನ್ನು ಸರ್ವಸಮ್ಮತ ಅಭ್ಯರ್ಥಿಯಾಗಿ ಕಣಕ್ಕಳಿಸಲಿದ್ದು, ಎಲ್ಲಾ ಸುಸೂತ್ರವಾಗಿ ನಡೆದಿದ್ದೇ ಆದಲ್ಲಿ ಲೀಲಾವತಿ ಯೋಗೀಶ್‌ ಜ. 25 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರ ಕುಟುಂಬದ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಯಾರಿಗೂ ಬೇಡದ ಚುನಾವಣೆ:

19 ಮಂದಿ ಸದಸ್ಯ ಬಲದ ತಾಲೂಕು ಪಂಚಾಯ್ತಿಯಲ್ಲಿ ಯೋಗೀಶ್‌ ನಿಧನದಿಂದ ಒಂದು ಸ್ಥಾನ ತೆರವಾಗಿದೆ. ತಾಪಂ ಅಧಿಕಾರವಧಿ ಇನ್ನು 11 ತಿಂಗಳು ಮಾತ್ರ ಇದ್ದು, ಈ ಚುನಾವಣೆಯಲ್ಲಿ ಯಾರು ಗೆದ್ದರೂ ತಾಪಂ ಬಲಾಬಲದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಈ ಕಾರಣದಿಂದ ಚುನಾವಣೆ ಸಾಕಷ್ಟುಮಹತ್ವ ಪಡೆದು ಕೊಂಡಿಲ್ಲ.

ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಂಸದ ಡಿ.ಕೆ.ಸುರೇಶ್...

ಫೆ.9ಕ್ಕೆ ಚುನಾವಣೆ:  ಮತ್ತೀಕೆರೆ ತಾಪಂ ಸದಸ್ಯ ಯೋಗೀಶ್‌ 2018 ಡಿ. 5ರಂದು ನಿಧನರಾಗಿದ್ದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಫೆ. 9 ರಂದು ಚುನಾವಣೆ ನಡೆಯಲಿದೆ. ಜ. 25ರಂದು ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಜ. 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.

Follow Us:
Download App:
  • android
  • ios