Asianet Suvarna News Asianet Suvarna News

ಗಂಗಾ ಕಲ್ಯಾಣ ಯೋಜನೆ ಮಾನದಂಡ ಬದಲಿಸಿ : ಡಿ.ಸಿ.ತಮ್ಮಣ್ಣ

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಯಲು ಆಯ್ಕೆಗೆ 1 ಎಕರೆ 20 ಗುಂಟೆ ನಿಗದಿ ಪಡಿಸಿರುವ ಮಾನದಂಡವನ್ನು ತೆಗೆದು ಹಾಕಿ 10 ಗುಂಟೆ ಮೇಲಿರುವ ಅರ್ಜಿದಾರರಿಗೆ ಯೋಜನೆಯ ಸೌಲಭ್ಯ ಕಲ್ಪಿಸುವಂತೆ ಶಾಸಕ ಡಿ.ಸಿ.ತಮ್ಮಣ್ಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Change the criteria for Ganga Kalyan Yojana snr
Author
First Published Jan 12, 2023, 5:43 AM IST

 ಭಾರತೀನಗರ : ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಯಲು ಆಯ್ಕೆಗೆ 1 ಎಕರೆ 20 ಗುಂಟೆ ನಿಗದಿ ಪಡಿಸಿರುವ ಮಾನದಂಡವನ್ನು ತೆಗೆದು ಹಾಕಿ 10 ಗುಂಟೆ ಮೇಲಿರುವ ಅರ್ಜಿದಾರರಿಗೆ ಯೋಜನೆಯ ಸೌಲಭ್ಯ ಕಲ್ಪಿಸುವಂತೆ ಶಾಸಕ ಡಿ.ಸಿ.ತಮ್ಮಣ್ಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಯಲು ಆಯ್ಕೆ ಮಾಡಬೇಕೆಂದರೆ ಅರ್ಜಿದಾರರಿಗೆ ಕನಿಷ್ಟ1.20 ಎಕರೆ ಜಮೀನು ಇರಬೇಕೆಂದು ಮಾನದಂಡ ನಿಗದಿಪಡಿಸಲಾಗಿದೆ. ಆದರೆ, ಮದ್ದೂರು ಕ್ಷೇತ್ರದಲ್ಲಿ ಶೇ.25ರಷ್ಟುಮಂದಿ ಪರಿಶಿಷ್ಟಜಾತಿಗೆ ಸೇರಿದ ಜನಾಂಗದವರಲ್ಲಿ ಒಂದೂವರೆ ಎಕರೆ ಜಮೀನಿರುವವರಿದ್ದಾರೆ. ಉಳಿದ ಶೇ. 75 ರಷ್ಟುಮಂದಿಗೆ ಒಂದು ಎಕರೆ ಜಮೀನಿಗಿಂತಲೂ ಕಡಿಮೆ ಜಮೀನಿದೆ. ಇದರಿಂದಾಗಿ ಸರ್ಕಾರದ ನಿಯಮಾವಳಿಗಳಿಂದ ಸರ್ಕಾರದ ಜನೋಪಯೋಗಿ ಯೋಜನೆ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರದ ಜನಪರ ಯೋಜನೆಗಳು ಜನರಿಗೆ ತಲುಪದೆ ಕೇವಲ ಪತ್ರಿಕೆಗಳಲ್ಲಿ ಮಾತ್ರ ರಾರಾಜಿಸುತ್ತಿವೆ. ಪರಿಶಿಷ್ಟಜಾತಿಗೆ ಸೇರಿದವರಿಗೆ ಸರ್ಕಾರದಿಂದ ಭೂ ಒಡೆತನ ಯೋಜನೆಯಡಿಯಲ್ಲಿ ಜಮೀನನ್ನು ಖರೀದಿ ಮಾಡಿಕೊಡಲು (20 ಲಕ್ಷ) ಯೋಜನೆ ರೂಪಿಸಿದೆ. ಇಂದಿನ ದರದಲ್ಲಿ 20 ಲಕ್ಷ ರು. ಗಳ ಮೊತ್ತಕ್ಕೆ ಒಂದೂವರೆ ಎಕರೆ ಜಮೀನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಯಲು ಒಂದೂವರೆ ಎಕರೆ ಮಾನದಂಡ ನಿಗದಿಪಡಿಸಿದೆ. ಇದರಿಂದ ಇಬ್ಬಗೆಯ ನೀತಿಯನ್ನು ಅನುಸರಿಸುವಂತಾಗಿದೆ. ಹೀಗಾಗಿ ಮೇಲ್ಕಂಡ ಎಲ್ಲಾ ಕಾರಣಗಳಿಂದಾಗಿ ತಾವು ಸದರಿ ವಿಚಾರವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ ಹಾಗೂ ಬೋವಿ ಅಭಿವೃದ್ಧಿ ನಿಗಮಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಇರುವ ಮಾನದಂಡವನ್ನು ಬದಲಾವಣೆ ಮಾಡಿ, ಕನಿಷ್ಟ10 ಗುಂಟೆ ಮೇಲ್ಪಟ್ಟಅರ್ಜಿದಾರರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಯಲು ಸರ್ಕಾರದಿಂದ ಸೂಕ್ತ ತಿದ್ದುಪಡಿ ಆದೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಸಹಕಾರಿಯಾಗಲು ಕೂಡಲೇ ಅಗತ್ಯ ಕ್ರಮ ವಹಿಸುವಂತೆ ಶಾಸಕ ತಮ್ಮಣ್ಣ ಮುಖ್ಯಮಂತ್ರಿ ಮತ್ತು ಸಚಿವರನ್ನು ಕೋರಿದ್ದಾರೆ.

ಹಳಿ ತಪ್ಪಿದ ಯೋಜನೆ

 ಚಿಕ್ಕಬಳ್ಳಾಪುರ (ಅ.14):  ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಡಿ ಜಿಲ್ಲೆಯಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ರೂಪಿಸಿರುವ ಮಹತ್ವಾಕಾಂಕ್ಷಿ ಗಂಗಾ ಕಲ್ಯಾಣ ಯೋಜನೆಯನ್ನು ಹೇಳೋರು ಕೇಳೋರಿಲ್ಲದೇ ಹಳ್ಳ ಹಿಡಿದಿದೆ.

ಹೌದು, ಜಿಲ್ಲೆಗೆ (Chikkaballapura)  ಕಳೆದ 5 ವರ್ಷಗಳಲ್ಲಿ 573 ಕೊಳವೆ ಬಾವಿಗಳು ಮಂಜೂರಾಗಿದ್ದರೂ ಇಲ್ಲಿವರೆಗೂ ಬರೀ 350 ಕೊಳವೆ ಬಾವಿಗಳು (Borewell)  ಮಾತ್ರ ಕೊರೆದಿದ್ದು, ಇನ್ನೂ 223 ಕೊಳವೆಬಾವಿ ಕೊರೆಯುವುದು ಬಾಕಿ ಇದ್ದರೆ ಕಳೆದ 2019 ರಿಂದ 21ರ ವರೆಗೂ ಅಂದರೆ ಎರಡು ವರ್ಷದಲ್ಲಿ ಒಂದು ಕೊಳವೆಬಾವಿ ಕೂಡ ಕೊರೆಯದಿರುವುದು ಬೆಳಕಿಗೆ ಬಂದಿದೆ.

ಎಸ್‌ಸಿ/ಎಸ್ಟಿ ಜನಾಂಗಗಳಿಗೆ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಮೂಲಕ ಸ್ವಂತ ಜಮೀನಿರುವ ಸಣ್ಣ, ಅತಿ ಸಣ್ಣ ರೈತರಿಗೆ ಕೊಳವೆಬಾವಿ ಕೊರೆಸಿಕೊಳ್ಳಲು ಅವಕಾಶ ನೀಡಿದೆ. ಪ್ರತಿ ಕೊಳವೆಬಾವಿಗೆ ಸರ್ಕಾರ ಲಕ್ಷಾಂತರ ರು. ವೆಚ್ಚ ಮಾಡುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಈ ಯೋಜನೆ ಅನುಷ್ಟಾನ ಹಳ್ಳ ಹಿಡಿದಿದ್ದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯ ಶಾಸಕರು, ಸಂಸದರು, ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಹೇಳಿದರೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮಾತ್ರ ಯಾರಿಗೂ ಕ್ಯಾರೆ ಎನ್ನದೇ ಯೋಜನೆ ಅನುಷ್ಠಾನದಲ್ಲಿ ವಿಳಂಬ ತೋರುತ್ತಿರುವುದಂತೂ ಎದ್ದು ಕಾಣುತ್ತಿದೆ. ಕಳೆದ 5 ವರ್ಷಗಳಲ್ಲಿ ಕೊರೆಯ ಬೇಕಿದ್ದ 573 ಕೊಳವೆಬಾವಿಗಳಲ್ಲಿ ಬರೀ 350 ಕೊಳವೆಬಾವಿಗಳಷ್ಟೇ ಕೊರೆಸಿದ್ದು ಇನ್ನೂ 223 ಕೊಳವೆಬಾವಿ ಕೊರೆಸಲು ಸಾಧ್ಯವಾಗಿಲ್ಲ. 2016-17 ರಲ್ಲಿ ಒಟ್ಟು ಕೊರೆಸ ಬೇಕಾದ 172 ಬಾವಿಗಳÜಲ್ಲಿ 139 ಕೊಳವೆಬಾವಿ ಕೊರೆದಿದ್ದು ಇನ್ನೂ 33 ಬಾಕಿ ಇದೆ. 2018ರಲ್ಲಿ ಮಂಜೂರಾಗಿದ್ದು 198 ಅದರಲ್ಲಿ ಬರೀ 122 ಮಾತ್ರ ಕೊರೆದಿದ್ದು ಇನ್ನೂ 76 ಕೊಳವೆಬಾವಿಗಳು ಬಾಕಿ ಇವೆ. ಕಳೆದ ಎರಡು ವರ್ಷಗಳಿಂದ ಅಂದರೆ 2020-21ರಲ್ಲಿ ಜಿಲ್ಲೆಗೆ ಮಂಜೂರಾದ 94 ಕೊಳವೆ ಬಾವಿಗಳ ಪೈಕಿ ಇಲ್ಲಿವರೆಗೂ ಒಂದು ಕೊಳವೆಬಾವಿ ಕೂಡ ಕೊರೆದಿಲ್ಲ.

ಪಂಪ್‌ ಮೋಟಾರ್‌ ಕೊಟ್ಟಿಲ್ಲ:

ವಿಪರ್ಯಾಸದ ಸಂಗತಿಯೆಂದರೆ 2016-17ರಲ್ಲಿ ಜಿಲ್ಲೆಯಲ್ಲಿ ಕೊರೆದಿರುವ ಕೊಳವೆಬಾವಿಗಳಿಗೆ ಈವರೆಗೂ ಪಂಪ್‌ ಮೋಟಾರ್‌ ಕೊಡದೆ ನಿಗಮದ ಅಧಿಕಾರಿಗಳು ಫಲಾನುಭವಿಗಳಿಗೆ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದು, ಕೆಲವೊಂದು ಕೊಳವೆಬಾವಿಗಳಿಗೆ ವಿದ್ಯುತ್‌ ಸಂಪರ್ಕವೂ ಸಿಕ್ಕಿಲ್ಲ.

ಸಚಿವ ಸುಧಾಕರ್‌ ಆಕ್ರೋಶ:

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಯೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ

ವ್ಯಕ್ತಪಡಿಸಿದ್ದರು. ಫಲಾನುಭವಿಗಳಿಗೆ ವಿಳಂಬ ಮಾಡದೇ ಕೊಳವೆಬಾವಿ ಕೊರೆಸಿ ವಿದ್ಯುತ್‌ ಸಂಪರ್ಕ, ಪಂಪ್‌ ಮೋಟಾರ್‌ ನೀಡುವಂತೆಯೂ ಸೂಚಿಸಿದ್ದರು. ಆದರೆ ಇಲ್ಲಿವರೆಗೂ ಸಮರ್ಪಕವಾಗಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ನಿಗಮದ ಅಧಿಕಾರಿಗಳು ವಿಫಲವಾಗಿರುವುದು ಎದ್ದು ಕಾಣುತ್ತಿದ್ದು, ನಿಗಮದ ಅಧಿಕಾರಿಗಳಿಗೆ ಫಲಾನುಭವಿಗಳು ಹಿಡಿಶಾಪ ಹಾಕುತ್ತಿದ್ದಾರೆ.

Follow Us:
Download App:
  • android
  • ios