Mysuru: ಚಾಮುಂಡಿ ಬೆಟ್ಟಕ್ಕೆ 110 ಕೋಟಿ ರು. ವೆಚ್ಚದಲ್ಲಿ ಹೈಟೆಕ್‌ ಸ್ಪರ್ಶ!

*ಹಂಪಿ ಮಾದರಿಯಲ್ಲಿ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ
*ಬೆಟ್ಟದ ಆವರಣ ಅಭಿವೃದ್ಧಿಗೆ ಸಚಿವ ಆನಂದ್‌ ಸಿಂಗ್‌ ಆಸಕ್ತಿ
*ಮಹಿಷಾಸುರ ಪ್ರತಿಮೆ ಎದುರು ವಿಜಯನಗರ ಶೈಲಿಯ ರಾಜಗೋಪುರ

Chamundi Hill in Mysuru to be developed at cost of 110 crore  mnj

ಬೆಂಗಳೂರು(ನ.15): ಮೈಸೂರಿನ ಚಾಮುಂಡಿಬೆಟ್ಟದ (Chamundi Hill) ಆವರಣವನ್ನು ಹಂಪಿ (Hampi) ಶೈಲಿಯಲ್ಲಿ ಹೈಟೆಕ್‌ ಸ್ಪರ್ಶ ನೀಡಿ ಆಕರ್ಷಣೀಯವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಅಗತ್ಯ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ (Anand Singh) ಆಸಕ್ತಿ ತೋರಿದ್ದು, ಇಲ್ಲಿನ ಮಹಿಷಾಸುರ ಪ್ರತಿಮೆ ಎದುರು ವಿಜಯನಗರ ಶೈಲಿಯ ರಾಜಗೋಪುರ ನಿರ್ಮಾಣ, ದೇವಸ್ಥಾನದ ಎದುರಿನ ಭಜನೆ ಮಂಟಪ, ನಂದಿ ವಿಗ್ರಹದ (Nandi Statue) ಸ್ಥಳ ಸೇರಿದಂತೆ ಬೆಟ್ಟದ ಇಡಿ ಆವರಣವನ್ನು ಹೈಟೆಕ್‌ (Hi-Tech) ಆಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ (Tourism Department) ಮೂಲಕ ಕೇಂದ್ರ ಸರ್ಕಾರದ ತೀರ್ಥಯಾತ್ರೆಗಳ ಪುನಶ್ಚೇತನ ಮತ್ತು ಆಧ್ಯಾತ್ಮ, ಪಾರಂಪರಿಕ ವರ್ಧನೆಯ ಯೋಜನೆಯಡಿ (ಪ್ರಸಾದ್‌) 110 ಕೋಟಿ ರು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ನಡೆದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ (G Kishan Reddy) ಅವರಿಗೆ ಖುದ್ದು ರಾಜ್ಯ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ್‌ ಸಿಂಗ್‌ ಅವರೇ ಚಾಮುಂಡಿ ಬೆಟ್ಟಅಭಿವೃದ್ಧಿ ಯೋಜನೆಯ ಪ್ರಸ್ತಾವನೆ ಸಲ್ಲಿಸಿ ಅನುದಾನ ಬಿಡುಗಡೆಗೆ ಬೇಡಿಕೆ ಇಟ್ಟಿದ್ದಾರೆ. ಇಲಾಖೆ ಮೂಲಗಳ ಪ್ರಕಾರ ಕೇಂದ್ರದಿಂದ ಅಗತ್ಯ ಅನುದಾನದ ( Grants from Centre) ಭರವಸೆಯೂ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾರ್ಯ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ.

ಹೇಗಿರುತ್ತೆ ಹೊಸರೂಪ?

ದೇಗುಲದ ಬಳಿಯ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಅವರಿಗಾಗಿ ಹೈಟೆಕ್‌ ಮಾದರಿಯ ಮಳಿಗೆಗಳು (Shops) ತಲೆ ಎತ್ತಲಿದೆ. ವಿಜಯನಗರ ಮಾದರಿಯಲ್ಲಿ ರಾಜಗೋಪುರ ನಿರ್ಮಾಣ, ಭಜನೆ ಮಂಟಪ, ಮಹಾಬಲೇಶ್ವರ ದೇವಸ್ಥಾನ ಪುನರುತ್ಥಾನ, ನಾರಾಯಣ ದೇವಸ್ಥಾನಕ್ಕೆ ಹೊಸ ರೂಪ ಸಿಗಲಿದೆ. ಚಾಮುಂಡೇಶ್ವರಿ ದೇಗುಲದ ವಾಹನಗಳ ಸಂಚಾರ (Vehicle movement) ಮಾರ್ಗಕ್ಕೆ ವಿಶೇಷ ವಿನ್ಯಾಸ, ಪಾದಚಾರಿ ಪಥದ (Foot Path) ಅಭಿವೃದ್ಧಿ, ನಂದಿ ವಿಗ್ರಹದ ವೀಕ್ಷಣೆಗೆ ಸುತ್ತಲೂ ಜಾಗ ನಿರ್ಮಾಣ, ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ತೆರಳುವ ಮಾರ್ಗ ವಿನ್ಯಾಸ, ದ್ವಾರದ ಹಳೆಯ ಗೋಪುರಕ್ಕೆ ನಾವೀನ್ಯತೆ ಎರಡೂ ಬದಿ ದಿಬ್ಬಣ ನಿರ್ಮಾಣ ಮಾಡಲಾಗುತ್ತದೆ.

ಬೆಟ್ಟಕ್ಕೆ ಎಲೆಕ್ಟ್ರಿಕ್‌ ಬಸ್‌ ವ್ಯವಸ್ಥೆ

ಬೆಟ್ಟಕ್ಕೆ ಸಾರ್ವಜನಿಕರನ್ನು ಕರೆದೊಯ್ಯಲು ಎಲೆಕಟ್ರಿಕ್‌ ಬಸ್ಸುಗಳ (Electric Bus) ವ್ಯವಸ್ಥೆ ಮಾಡಲಾಗುತ್ತದೆ. ಇಡೀ ಶೂನ್ಯ ತ್ಯಾಜ್ಯ (Zero Waste) ವಾತಾವರಣ ಹಾಗೂ ಜೀರೋ ಕಾರ್ಬನ್‌ ಎಮಿಷನ್‌  (Zero Carbon emission) ವಾತಾವರಣದ ಕ್ಯಾಂಪಸ್‌ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ. ದೇವಾಲಯದ ಹೂವಿನ ರಾಶಿ ಸಂಸ್ಕರಣೆ, ಸೌರಶಕ್ತಿಯಿಂದ (Solar Energy) ದೀಪ ಬೆಳಗುವಿಕೆ, ಜೈವಿಕ ಅನಿಲ (Bio Gas) ಉತ್ಪಾದನೆ ಹಾಗೂ ಅಂತರ್ಜಲ ಮರುಪೂರ್ಣ ಇಂಗುಗುಡಿಗಳ (Water Harvesting) ನಿರ್ಮಾಣವಾಗಲಿದೆ. ಇದರಿಂದ ಚಾಮುಂಡಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಜತಗೆ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಇದು ಕೊಡುಗೆ ನೀಡಲಿದೆ. ಈ ಮೂಲಕ ಮೈಸೂರು ನಗರಕ್ಕೆ ಬರುವ ಪ್ರವಾಸಿಗರಿಗೆ ಇನ್ನೊಂದು ಫೇವರೆಟ್‌ ಸ್ಪಾಟ್‌ (Favourite Spot) ಆಗಿ ಮಾರ್ಪಡಲಿದೆ ಚಾಮುಂಡಿ ಬೆಟ್ಟ.

Latest Videos
Follow Us:
Download App:
  • android
  • ios