ಕಾವೇರಿ ವನ್ಯಧಾಮದ ಶೂಟೌಟ್ ಪ್ರಕರಣದ ಕುರಿತು ಎಸಿಎಫ್ ಮರಿಸ್ವಾಮಿ ಹೇಳಿಕೆ ನೀಡಿದ್ದು, ಮೃತಪಟ್ಟವರು ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು ಎಂದಿದ್ದಾರೆ. ಆತ್ಮರಕ್ಷಣೆಗಾಗಿ ನಮ್ಮ ಸಿಬ್ಬಂದಿ ಗುಂಡು ಹಾರಿಸಿದ್ದು, ಘಟನಾ ಸ್ಥಳದಲ್ಲಿ 34 ಕೆಜಿ ಮಾಂಸ ಕೂಡ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಘಟನೆಯ ಕುರಿತಂತೆ ಇದೇ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಪ್ರಕರಣದ ತನಿಖೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದ್ದು, ವರದಿ ಬಂದ ಬಳಿಕ ಕಾನೂನಿ ಅನ್ವಯ ಕ್ರಮಕೈಗೊಳ್ಳುವ ಭರವಸೆಯನ್ನು ಅರಣ್ಯ ಸಚಿವರು ನೀಡಿದ್ದಾರೆ.

ಕಾವೇರಿ ಶೂಟೌಟ್ ರಹಸ್ಯ: ಎಸಿಎಫ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಎಸಿಎಫ್ ಮರಿಸ್ವಾಮಿ, ಅರಣ್ಯಕ್ಕೆ ಬಂದಿದ್ದವರು ಬೇಟೆಗಾರರು. ದನ ಮೇಯಿಸಲು ಅಥವಾ ಹುಡುಕಲು ಅವರು ಕಾಡಿಗೆ ಎಂಟ್ರಿ ಕೊಟ್ಟಿರಲಿಲ್ಲ. ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು. ಹಸುಗಳನ್ನು ಹುಡುಕಲು ಗನ್ ಯಾಕೆ ತರುತ್ತಾರೆ? ಒಂದು ವೇಳೆ ಹಸು ಹುಡುಕಲು ಹೋಗುವುದಿದ್ದರೆ ಸ್ಥಳೀಯ ಅರಣ್ಯಾಧಿಕಾರಿ ಅಥವಾ ಸಿಬ್ಬಂದಿಗೆ ಮಾಹಿತಿ ಕೊಡಬೇಕಿತ್ತು. 8 ರಿಂದ 10 ಕಿಲೋ ಮೀಟರ್ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅವರು ಸತ್ತ 75 ಮೀಟರ್ ದೂರದಲ್ಲಿ ಎರಡು ಬ್ಯಾಗ್ ನಲ್ಲಿ ಮಾಂಸ ಸಿಕ್ಕಿದೆ. 34.25 ಕೆಜಿ ಮಾಂಸ ಪತ್ತೆಯಾಗಿದೆ. ಕ್ಲೀಯರ್ ಆಗಿ ಬೇಟೆಯಾಡುವ ಸಲುವಾಗಿಯೇ ಅರಣ್ಯಕ್ಕೆ ಹೋಗಿದ್ದಾರೆ. ಸತ್ತವರ ಮೂವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ. ಆದರೆ ತಲೆಮರೆಸಿಕೊಂಡಿರುವ ಮಹಿಮಾ ದಾಸ್ ವಿರುದ್ಧ ಒಂದು ಕೇಸ್ ಇದೆ. ಕಾವೇರಿ ವನ್ಯಧಾಮದಲ್ಲಿ ಪಿಷಿಂಗ್ ಸಂಬಂಧ ಕೇಸ್ ಇದೆ ಎಂದು ಹೇಳಿದರು.

ಮೂರು ಜನರನ್ನು ಶೂಟ್ ಮಾಡಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ

ಪ್ರತಿದಿನ ಕೂಡ ಅರಣ್ಯ ಸಿಬ್ಬಂದಿ ಗಸ್ತಿಗೆ ಹೋಗುವ ವೇಳೆ ಗನ್ ತೆಗೆದುಕೊಂಡು ಹೋಗುತ್ತಾರೆ. ನಮ್ಮವರು ಫೈರ್ ಮಾಡದಿದ್ದರೆ ಅವರ ಸ್ಥಿತಿಯಲ್ಲಿ ನಮ್ಮವರು ಇರುತ್ತಿದ್ದರು. ಆತ್ಮರಕ್ಷಣೆಗಾಗಿ ಫೈರ್ ಮಾಡಿದ್ದಾರೆ. ನಮ್ಮವರಿಗೆ ಯಾವುದೇ ಗಾಯ ಆಗಿಲ್ಲ. ಸತ್ತವರು ಕೂಡ ಗುಂಡು ಹಾರಿಸಿದ್ದರು, ಅದು ಮಿಸ್ ಫೈರ್ ಆಗಿದೆ. ಮೂರು ಜನರನ್ನು ಶೂಟ್ ಮಾಡಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ, ಇನ್ನುಳಿದ ಇಬ್ಬರು ಆತನ ಜೊತೆಯಲ್ಲಿದ್ದರು. ಒಟ್ಟಾರೆ 12 ಸಿಬ್ಬಂದಿ ಈ ಕಾರ್ಯಾಚರಣೆ ವೇಳೆ ಭಾಗಿಯಾಗಿದ್ದರು. ಸಿಬ್ಬಂದಿ ಹಗಲು ರಾತ್ರಿ ಕಷ್ಟ ಪಡೊದೆ ಅರಣ್ಯ ಹಾಗೂ ದೇಶದ ಸಂಪತ್ತು ಕಾಯಲು ಎಂದು ಎಸಿಎಫ್ ವಿವರಿಸಿದ್ದಾರೆ.

ಬೇಟೆಗೆ ಬೇಕಾದ ಎಲ್ಲಾ ವಸ್ತುಗಳಿದ್ದವು!

ಇದೇ ವೇಳೆ ಹೊಸ ಚಪ್ಪಲಿ ಸಿಕ್ಕ ವಿಚಾರವಾಗಿ ಸ್ಪಷ್ಟನೆ ನೀಡಿರುವ ಎಸಿಎಫ್, ಹೊಸ ಚಪ್ಪಲಿಯಲ್ಲಿ ಯಾವ ಸಾಕ್ಷಿ ಸಿಗುತ್ತದೆ. ನಮ್ಮ ಸಿಬ್ಬಂದಿ ಅಲ್ಲಿಗೆ ತಗೊಂಡು ಹೋಗಿ ಇಟ್ಟಿಲ್ಲ. ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಜೊತೆ ಚಪ್ಪಲಿ ಸಿಕ್ಕಿದೆ. ಅದು ಕೂಡ ಪಾರಾಗನ್ ಚಪ್ಪಲಿ. ಕಿತ್ತೊದ್ರೆ ಇರಲಿ ಅಂತಾ ತಂದು ಇಟ್ಟುಕೊಂಡಿರಬಹುದು. ಬ್ಯಾಗ್ ನಲ್ಲಿ ದಿನಸಿ ಪದಾರ್ಥ, ಟಾರ್ಚ್ ಸೇರಿದಂತೆ ಬೇಟೆಯಾಡಲು ಬೇಕಾದ ಸಲಕರಣೆಗಳಿದ್ದವು. ಸ್ಥಳದಲ್ಲಿ ಸಿಕ್ಕ ಮಾಂಸ ಯಾವ ಪ್ರಾಣಿಯದು ಪತ್ತೆ ಹಚ್ಚಲೂ ಲ್ಯಾಬ್ ಗೆ ಕಳಿಸಲಾಗಿದೆ. ವರದಿ ಬಂದ ಈ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.

YouTube video player

ಅರಣ್ಯ ನಾಶ ಮಾಡುವವರ ಸದೆಬಡಿಯುವ ಕೆಲಸ ಆಗ್ಬೇಕು!

ಕಳ್ಳಬೇಟೆ ತಡೆ ಶಿಬಿರ ಧ್ವಂಸ ಬಗ್ಗೆ ದೂರು, ವಾಪಾಸ್ ಪಡೆಯುವಂತೆ ಸ್ಥಳೀಯರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸರ್ಕಾರದ ಆಸ್ತಿ ಪಾಸ್ತಿ ನಾಶ ಮಾಡಿದವರ ವಿರುದ್ಧ ಏನ್ ಕ್ರಮ ಕೈಗೊಳ್ತಾರೋ ಆ ಕೆಲಸ ಮಾಡ್ತಿದ್ದೇವೆ. ಯಾರೂ ಹಾನಿ ಮಾಡಿದ್ದಾರೆ ಅವರ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಕಾನೂನು ಪ್ರಕಾರ ಕ್ರಮ, ಯಾವುದೇ ಸಮಸ್ಯೆ ತಂದೊಡ್ಡುವ ಕೆಲಸ ಮಾಡ್ತಿಲ್ಲ. ಯಾರೂ ಅರಣ್ಯ ನಾಶ ಮಾಡ್ತಾರೆ, ಅಂತಹವರ ಸದೆಬಡಿಯುವ ಕೆಲಸ ಕೂಡ ಆಗಬೇಕು ಎಂಬ ಎಚ್ಚರಿಕೆ ನೀಡಿದರು.