Chamarajanagar: ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಕೊರತೆಯಿಂದ ಸೂರ್ಯಕಾಂತಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಒಣಗ್ತಿವೆ.

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಜು.04): ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಕೊರತೆಯಿಂದ ಸೂರ್ಯಕಾಂತಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಒಣಗ್ತಿವೆ. ಬರ ಜಿಲ್ಲೆ ಅಂತಾ ಘೋಷಿಸುವಂತೆ ರೈತರು ಒತ್ತಾಯ ಮಾಡ್ತಿದ್ದಾರೆ. ಈ ನಡುವೆ ರೈತರು ಹಾಗೂ ಭಕ್ತರು ಮಲೆ ಮಾದಪ್ಪನ ಮೊರೆ ಹೋಗ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲಿ ವ್ಯಾಪಕ ಮಳೆ ಕೊರತೆಯಾಗಿದೆ. ಈಗಾಗಲೇ ಜಲಾಶಯಗಳು ಕೂಡ ಖಾಲಿಯಾಗ್ತಿವೆ. ಗಡಿ ಜಿಲ್ಲೆ ಚಾಮರಾಜಗರದಲ್ಲೂ ಕೂಡ ಮಳೆ ಕೊರತೆಯಿಂದ ಶೇಕಡಾ 60 ಕ್ಕಿಂತ ಹೆಚ್ಚು ಪ್ರದೇಶದ ಭೂಮಿಯನ್ನು ವ್ಯವಸಾಯ ಮಾಡದೆ ಖಾಲಿ ಬಿಟ್ಟಿದ್ದಾರೆ. ಅಲ್ಲದೇ 70 ರಷ್ಟು ಮಳೆಯ ಕೊರತೆಯಾಗಿದೆ. ಜಿಲ್ಲೆಯ ಮಳೆ ಪ್ರಮಾಣವನ್ನು ಗಮನಿಸಿದರೆ ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 63.8 ಮಿಲಿ ಮೀಟರ್ ಮಳೆಯಾಗಬೇಕಿದ್ದರೆ ಕೇವಲ 16 ಮಿಲಿ ಮೀಟರ್ ಮಾತ್ರ ದಾಖಲಾಗಿದೆ. ಮೇ ತಿಂಗಳಲ್ಲಿ 127 ಮಿಲಿ ಮೀಟರ್ ಮಳೆಯಾಗಿ ರೈತರಲ್ಲಿ ಭರವಸೆ ಮೂಡಿಸಿತ್ತು.

ಆದರೆ ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ಮಳೆ ನಿರೀಕ್ಷಿತ ಮಟ್ಟ ತಲುಪದೇ ಕೊರತೆ ಉಂಟಾಗಿದೆ. ಪರಿಣಾಮ ಮುಂಗಾರು ಕೃಷಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿದೆ. ರೈತರಿಂದಲೂ ಕೂಡ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ರೈತರು ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳು ಒಣಗುತ್ತಿವೆ. ಗುಂಡ್ಲುಪೇಟೆ, ಹನೂರು ಸೇರಿದಂತೆ ಇನ್ನಿತರ ಭಾಗದಲ್ಲಿ ಕುಡಿಯುವ ನೀರಿಗೂ ಕೂಡ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನಲೆ ಬರ ಜಿಲ್ಲೆ ಅಂತಾ ಘೋಷಿಸುವಂತೆ ಸರ್ಕಾರಕ್ಕೆ ರೈತರಿಂದ ಒತ್ತಾಯ ಕೇಳಿಬಂದಿದೆ.

ಇನ್ನೂ ಗಡಿ ಜಿಲ್ಲೆಯ ರೈತರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಚಾಮರಾಜನಗರದಿಂದ ಬಸ್ಸಿನ ಮೂಲಕ ನೂರಾರು ರೈತರು ಮಲೆ ಮಹದೇಶ್ವರನ ದರ್ಶನಕ್ಕೆ ಹೋಗಿದ್ದಾರೆ. ಅಲ್ಲದೇ ಮಲೆ ಮಾದಪ್ಪನ ಸನ್ನಿಧಿಯಲ್ಲಿ ಉರುಳು ಸೇವೆ ಮಾಡುವುದಲ್ಲದೇ ವಿಶೇಷ ಪೂಜೆ, ಅರ್ಚನೆ ಸಲ್ಲಿಸಲಿದ್ದಾರೆ. ಇಷ್ಟಾರ್ಥ ಈಡೇರಿಸುವ ಮಾದಪ್ಪ ರೈತರ ಕಷ್ಟ ಆಲಿಸಿ ಮಳೆ ಸುರಿಸುತ್ತಾನೆಂಬುದು ರೈತರ ನಂಬಿಕೆ.

ಒಟ್ನಲ್ಲಿ ಎಪ್ಪತ್ತೇಳು ಮಲೆಗಳ ಒಡೆಯ ಮುದ್ದು ಮಾಯ್ಕಾರ ಮಾದಪ್ಪನ ಸನ್ನಿಧಿಗೆ ರೈತರು ಹೊರಟಿದ್ದು, ಮಾದಪ್ಪನ ಬೆಟ್ಟದಲ್ಲಿ ಉಘೇ ಉಘೇ ಝೇಂಕಾರ ಕೇಳಿ ಬರಲಿದೆ. ಕೇಳಿದ್ದನ್ನು ಈಡೇರಿಸುವ ಮಾದಪ್ಪ ಭಕ್ತರ ಸಂಕಷ್ಟಕ್ಕೆ ಸ್ಪಂದಿಸಿ ಮಳೆ ಸುರಿಸುತ್ತಾನಾ ಅನ್ನೋದ್ನ ಕಾದುನೋಡಬೇಕಾಗಿದೆ.