ಬೆಂಗಳೂರು(ಅ.24): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ತಾರಕ್ಕೇರುತ್ತಿದ್ದಂತೆ ಭದ್ರತೆಗೆ ಕೇಂದ್ರೀಯ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದ್ದು, ಈ ಮೂಲಕ ಕ್ಷೇತ್ರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಪಶ್ಟಿಮ ವಿಭಾಗದ 5 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎರಡು ಕೇಂದ್ರೀಯ ಅರೆ ಸೇನಾ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರು ಸೇರಿದಂತೆ ಬೆಂಗಳೂರು, ತಮಿಳುನಾಡು, ತೆಲಂಗಾಣ, ಮೈಸೂರಿನ ಐದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ. ಪ್ರತಿ ಪಡೆಯಲ್ಲಿ 40-50 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ನಂದಿನಿ ಲೇಔಟ್‌ನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪ್ರಚಾರದ ವೇಳೆ ಜಟಾಪಟಿ ನಡೆದು ಕೈ ಮೀಲಾಯಿಸುವ ಹಂತಕ್ಕೆ ಹೋಗಿತ್ತು. ಪ್ರತಿಭಟನೆಗಳು ನಡೆದು ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಇದೀಗ ಭದ್ರತೆಗೆ ಸ್ಥಳೀಯ ಪೊಲೀಸರು ಸೇರಿದಂತೆ ಕೇಂದ್ರೀಯ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.

ಅಕ್ರಮದಲ್ಲಿ ಪಾಲ್ಗೊಂಡ ಮುನಿರತ್ನ: ಕೋರ್ಟ್‌ ಸೂಚಿಸಿದ್ರು FIR ಹಾಕ್ತಿಲ್ಲ, ಕಾಂಗ್ರೆಸ್‌

ಉತ್ತರ ವಿಭಾಗದ 8 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 10 ಇನ್‌ಸ್ಪೆಕ್ಟರ್‌, 36 ಸಬ್‌ ಇನ್‌ಸ್ಪೆಕ್ಟರ್‌ಗಳು, 200 ಕಾನ್‌ಸ್ಟೇಬಲ್‌ ಮತ್ತು ಹೆಡ್‌ ಕಾನ್‌ಸ್ಟೇಬಲ್‌, 4 ಕೆಎಸ್‌ಆರ್‌ಪಿ ತುಕಡಿ, 3 ನಗರ ಸಶಸ್ತ್ರ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ರಾಜರಾಜೇಶ್ವರಿನ ನಗರ ವಿಧಾನಸಭಾ ಕ್ಷೇತ್ರವು ಪಶ್ಟಿಮ ವಿಭಾಗದ 5 ಹಾಗೂ ಉತ್ತರ ವಿಭಾಗದ 8 ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಇಲ್ಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿನ ಮತದಾರರು, ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು, ಪಕ್ಷಗಳ ಕಾರ್ಯಕರ್ತರ ರಕ್ಷಣೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಶಾಂತಿಯುತ ಮತದಾನ ನಡೆಸಲು ಸೂಕ್ತ ಕ್ರಮ ವಹಿಸಲಾಗಿದೆ.