ಅನೇಕ ಸಮಸ್ಯೆ ಸವಾಲುಗಳ ಮಧ್ಯೆಯೂ ಬ್ಯಾಂಕಿನ ಸಿಬ್ಬಂ​ದಿ ಸೇವೆ ನಿರಂತರವಾಗಿದೆ. ಪ್ರಧಾನಮಂತ್ರಿಗಳು ಜನಸಾಮಾನ್ಯರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸುವ ಸದುದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನ ಮಾಡಿ, ಅನಾವಶ್ಯಕ ಖರ್ಚು-ವೆಚ್ಚ ಕಡಿಮೆ ಮಾಡಿದ್ದಾರೆ ಎಂದು ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಶಿವಮೊಗ್ಗ(ಜು.22): ಕೇಂದ್ರ ಪುರಸ್ಕೃತ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜಿಲ್ಲೆಯ ಬ್ಯಾಂಕ್‌ ಅ​ಧಿಕಾರಿಗಳು-ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದು ಅಭಿನಂದನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬುಧವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಹಾಗೂ ಸಹಾಯಧನ ಚೆಕ್‌ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನೇಕ ಸಮಸ್ಯೆ ಸವಾಲುಗಳ ಮಧ್ಯೆಯೂ ಬ್ಯಾಂಕಿನ ಸಿಬ್ಬಂ​ದಿ ಸೇವೆ ನಿರಂತರವಾಗಿದೆ. ಪ್ರಧಾನಮಂತ್ರಿಗಳು ಜನಸಾಮಾನ್ಯರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸುವ ಸದುದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನ ಮಾಡಿ, ಅನಾವಶ್ಯಕ ಖರ್ಚು-ವೆಚ್ಚ ಕಡಿಮೆ ಮಾಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಜನ್‌ಧನ್‌ ಯೋಜನೆಯಡಿ 1.80 ಲಕ್ಷ ಖಾತೆ ಆರಂಭವಾಗಿವೆ. ಈ ಖಾತೆದಾರರಿಗೆ ಓವರ್‌ ಡ್ರಾಫ್ಟ್‌ ಸೌಲಭ್ಯ ಅಂದರೆ 5,10 ಅಥವಾ 20ಸಾವಿರ ರು. ಸಾಲದ ಮೊತ್ತ ದೊರೆಯಲಿದೆ. ಕೃಷಿ ಸಮ್ಮಾನ್‌ ಯೋಜನೆಯಡಿ ರೈತರ ಖಾತೆಗೆ ಸಹಾಯಧನ ಸೌಲಭ್ಯ ವಿತರಿಸಲಾಗಿದೆ. ಖಾತೆ ಆರಂಭಿಸಿದ ಫಲಾನುಭವಿಗಳು ಕಾಲಕಾಲಕ್ಕೆ ಖಾತೆ ನವೀಕರಿಸಿಕೊಳ್ಳಬೇಕು. ಸಾಲ ಸಕಾಲದಲ್ಲಿ ಮರುಪಾವತಿ ಮಾಡಿ, ಸರ್ಕಾರದ ಯೋಜನೆ ಸಫಲಗೊಳ್ಳುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.

ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದ್ದು, ಸರ್ಕಾರ ಯೋಜನೆಯನ್ನು ಘೋಷಿಸಿದ ಅತ್ಯಲ್ಪ ಅವ​ಧಿಯಲ್ಲಿ ಶೇ.70ರಷ್ಟುಜನರಿಗೆ ಯೋಜನೆ ಲಾಭ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲೆಯ 5000 ಜನರಿಗೆ 107 ಕೋಟಿ ರು.ಗಳ ಸಾಲಸೌಲಭ್ಯ ವಿತರಿಸಲಾಗಿದೆ ಎಂದರು.

ಆತ್ಮನಿರ್ಭರ ಭಾರತ, ಯುವಾ ಬ್ರಿಗೇಡ್ Glocal India ನಂಬರ್ ಒನ್!

ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ ವಿಮಾದಾರನ ಮರಣದ ನಂತರ ಅವರ ಕುಟುಂಬದ ಅವಲಂಬಿತರಿಗೆ 2ಲಕ್ಷ ರು. ಪಾವತಿಸಲಾಗುತ್ತದೆ. ತಲಾ 2 ಲಕ್ಷ ರು.ಗಳಂತೆ ಜಿಲ್ಲೆಯ 11 ಜನರಿಗೆ 22ಲಕ್ಷ ರು.ಗಳ ಸೌಲಭ್ಯ ವಿತರಿಸಲಾಗಿದೆ ಎಂದ ಅವರು, ರು.12 ಸದಸ್ಯತ್ವ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದವರಿಗೆ ಈ ಯೋಜನೆಯಿಂದ ಆಪತ್ಕಾಲದಲ್ಲಿ ನೆರವು ದೊರೆಯಲಿದೆ ಎಂದರು.

ಅಲ್ಲದೇ ಬೀದಿಬದಿ ವ್ಯಾಪಾರಗಳಿಗೆ ಶೇ.4ರ ಬಡ್ಡಿದರದಲ್ಲಿ ರು.10,000ಗಳ ಬಂಡವಾಳ ಸಾಲ ನೀಡಲಾಗುತ್ತಿದೆ. ಕಿಸಾನ್‌ ಕೃಷಿ ಕ್ರೆಡಿಟ್‌ ಕಾರ್ಡ್‌ ಯೋಜನೆಯಡಿ ಯಾವುದೇ ಅಡಮಾನವಿಲ್ಲದೆ 1.5ಲಕ್ಷ ರು. ಗಳವರೆಗೆ ಸಾಲಸೌಲಭ್ಯ ದೊರೆಯಲಿದೆ. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 1.50 ಲಕ್ಷ ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿವೆ. ಇದರಿಂದಾಗಿ ರಾಜ್ಯದಲ್ಲಿ 18ನೇ ಸ್ಥಾನದಲ್ಲಿದ್ದ ಜಿಲ್ಲೆ 2ನೇ ಸ್ಥಾನ ಪಡೆದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ​ಧಿಕಾರಿ ಕೆ.ಬಿ. ಶಿವಕುಮಾರ್‌, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಸುಧಾಕರ್‌ ಕೊಟಾರಿ, ಪೂರ್ಣಿಮ ಎನ್‌.ರಾವ್‌, ಡಿ.ಎಸ್‌. ಅರುಣ್‌ ಮುಂತಾದವರು ಉಪಸ್ಥಿತರಿದ್ದರು.