ಹಾಸನ(ಸೆ.08): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷಗಳನ್ನು ಬೆದರಿಸುವ ತಂತ್ರ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಆರೋಪಿಸಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಈ ಹಿಂದೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಜಿಲ್ಲೆಗೆ ಹೆಚ್ಚಿನ ಅನುದಾನ ತೆಗೆದುಕೊಂಡು ಹೋಗಿದ್ದಾರೆ ಎಂದು ಬಿಜೆಪಿ ಪಕ್ಷ ದೂರುತ್ತಿತ್ತು. ಈಗ ಸಿಎಂ ತಮ್ಮ ಸ್ವಂತ ಊರಿಗೆ ಹೆಚ್ಚಿನ ಅನುದಾನ ತೆಗೆದುಕೊಂಡು ಹೋಗಿ ಲೂಟಿ ಮಾಡುತ್ತಿರುವುದು ಬಿಜೆಪಿಗರಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.

ಚಾಪೆ ಕೆಳಗೆ ಪ್ರಜ್ವಲ್ ತೂರಿದ್ರೆ, ಕೋರ್ಟ್ ರಂಗೋಲಿ ಕೆಳಗೆ! ಸಂಸದನಿಗೆ ಹೊಸ ಸಂಕಟ!

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಪಕ್ಷಗಳನ್ನು ಕಟ್ಟಿಹಾಕುವ ಕನಸು ಕಂಡಿದ್ದರೆ ಅದು ಅವರ ಭ್ರಮೆ. ದೇವೇಗೌಡರ ಕುಟುಂಬ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಎತ್ತಿ ಹಿಡಿದು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ಇತ್ತೀಚೆಗೆ ನೆರೆಹಾವಳಿಯಿಂದ ತುತ್ತಾದ ಪ್ರದೇಶಕ್ಕೆ ಬಿಜೆಪಿ ಪಕ್ಷದವರು ತೋರಿಕೆಗೆ ಮಾತ್ರ ಭೇಟಿ ನೀಡಿ ಹೋಗಿದ್ದಾರೆ. ಅವರ ಕಷ್ಟಕ್ಕೆ ಒಂದು ರುಪಾಯಿ ಹಣ ಬಿಡುಗಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಹೋರಾಟ ಮಾಡುತ್ತದೆ ಎಂದರು.

ಕಾಲಕಾಲಕ್ಕೆ ಬದಲಾವಣೆ ಅನಿವಾರ್ಯ : HD ರೇವಣ್ಣ

ಜೆಡಿಎಸ್‌ ರಾಜ್ಯಾಧ್ಯಕ್ಷ, ಶಾಸಕ ಎಚ್‌. ಕೆ. ಕುಮಾರಸ್ವಾಮಿ ಮಾತನಾಡಿ, ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಜನಸಾಮಾನ್ಯರ ಉಳಿವಿಗಾಗಿ ಸಾವಿರಾರು ಕೋಟಿ ಸಾಲಮನ್ನಾ ಮಾಡಿದೆ. ನಾವು ಮಾಡಿದ ಕೆಲಸಕ್ಕೆ ಸರಿಯಾದ ಪ್ರಚಾರ ಸಿಗಲಿಲ್ಲ. ಸರ್ಕಾರದ ಆವಧಿಯಲ್ಲಿ ಆಗಿರುವ ಜನಕಲ್ಯಾಣ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಪಕ್ಷವನ್ನು ಸಂಘಟಿಸಬೇಕು ಎಂದರು.

ಸಭೆಯಲ್ಲಿ ಶಾಸಕ ಲಿಂಗೇಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ. ಎಸ್‌. ಮಂಜೇಗೌಡ, ಜಿಪಂ ಸದಸ್ಯೆ ಚಂಚಲ ಕುಮಾರಸ್ವಾಮಿ, ತಾಪಂ ಸದಸ್ಯರಾದ ಸಿ.ವಿ. ಲಿಂಗರಾಜು, ನಟರಾಜ್‌ ನಾಕಲಗೂಡು, ಮುಖಂಡರಾದ ರಾಜಪ್ಪಗೌಡ ಇತರರು ಇದ್ದರು.