Asianet Suvarna News Asianet Suvarna News

ಬೆಳಗಾವಿ: 1,146 ಗ್ರಾಪಂಗೆ ಸ್ಮಶಾನ ಭೂಮಿ ಮಂಜೂರು..!

ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ಹಳ್ಳಿಗಳಿಗೂ ಸ್ಮಶಾನ ಭೂಮಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಅಭಿಯಾನ ಆರಂಭಿಸಿ ಜಿಲ್ಲೆಯ 1146 ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಿಕೊಡುವ ಮೂಲಕ ಗ್ರಾಮಸ್ಥರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕಾರ್ಯ ಮಾಡಿದೆ.

Cemetery Land Allotted to 1146 Grama Panchayats in Belagavi grg
Author
First Published Sep 9, 2022, 9:03 PM IST

ಜಗದೀಶ ವಿರಕ್ತಮಠ

ಬೆಳಗಾವಿ(ಸೆ.09):  ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳೇ ಕಳೆದರೂ ಇನ್ನೂ ಹಲವು ಗ್ರಾಮಗಳಲ್ಲಿ ಅಂತ್ಯಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಹಲವು ಕಡೆಗಳಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಶವ ಇಟ್ಟು ಪ್ರತಿಭಟನೆ ಮಾಡಿದ ನಿದರ್ಶಗಳಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಎಲ್ಲ ಹಳ್ಳಿಗಳಿಗೂ ಸ್ಮಶಾನ ಭೂಮಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಅಭಿಯಾನ ಆರಂಭಿಸಿ ಜಿಲ್ಲೆಯ 1146 ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಿಕೊಡುವ ಮೂಲಕ ಗ್ರಾಮಸ್ಥರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕಾರ್ಯ ಮಾಡಿದೆ.

ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಇದುವರೆಗೂ ನೂರಾರು ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಇಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ನೇತೃತ್ವದ ತಂಡ ಕೇವಲ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಒಟ್ಟು 1146 ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಿಕೊಡುವ ಮೂಲಕ ಗ್ರಾಮಸ್ಥರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕಾರ್ಯ ಮಾಡಿದ್ದಾರೆ.

Belagavi Rain: ಮನೆಯಲ್ಲಿ ಸಿಲುಕಿದ್ದ 12 ದಿನದ ಹಸುಗೂಸು, ಬಾಣಂತಿ ರಕ್ಷಿಸಿದ ಯುವಕರು!

ಜಿಲ್ಲೆಯಲ್ಲಿ 1229 ಗ್ರಾಮಗಳ ಪೈಕಿ ಜೂನ್‌ ತಿಂಗಳ ಅವಧಿವರೆಗೆ 920 ಹಾಗೂ ಜುಲೈನಿಂದ ಇಲ್ಲಿವರೆಗೆ 226 ಗ್ರಾಮಗಳಿಗೆ ಸೇರಿದಂತೆ ಒಟ್ಟು 1146 ಗ್ರಾಮಗಳಿಗೆ ಸ್ಮಶಾನ ಭೂಮಿ ಕಲ್ಪಿಸುವ ಮಹತ್ತರ ಕಾರ್ಯವನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಶಿರಸ್ತೆದಾರರು ಸೇರಿದಂತೆ ಇನ್ನೀತರ ಸಿಬ್ಬಂದಿ ಶ್ರಮಿಸಿದ್ದಾರೆ. ಜಿಲ್ಲಾಡಳಿತದ ಈ ದಿಟ್ಟಕಾರ್ಯದಿಂದಾಗಿ ಜಿಲ್ಲೆಯ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ ತಾಲೂಕಿನ 138, ಚನ್ನಮ್ಮನ ಕಿತ್ತೂರ - 45, ಅಥಣಿ - 69, ಕಾಗವಾಡ-20 ಗ್ರಾಮಗಳಿದ್ದು, ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಿದ್ದಾರೆ. ಖಾನಾಪುರ - 221 ಗ್ರಾಮಗಳ ಪೈಕಿ 209, ಹುಕ್ಕೇರಿ -118 ಗ್ರಾಮಗಳ ಪೈಕಿ 104, ಬೈಲಹೊಂಗಲ-87 ಗ್ರಾಮಗಳ ಪೈಕಿ 74, ಸವದತ್ತಿ -84 ಗ್ರಾಮಗಳ ಪೈಕಿ 79, ಯರಗಟ್ಟಿ- 34 ಗ್ರಾಮಗಳ ಪೈಕಿ 27, ಗೋಕಾಕ - 101 ಗ್ರಾಮಗಳ ಪೈಕಿ 87, ಮೂಡಲಗಿ -48 ಗ್ರಾಮಗಳ ಪೈಕಿ 39, ರಾಮದುರ್ಗ-103 ಗ್ರಾಮಗಳ ಪೈಕಿ 101, ಚಿಕ್ಕೋಡಿ 60 ಗ್ರಾಮಗಳ ಪೈಕಿ 57, ನಿಪ್ಪಾಣಿ -43 ಗ್ರಾಮಗಳ ಪೈಕಿ 41, ರಾಯಬಾಗ 58 ಗ್ರಾಮಗಳ ಪೈಕಿ 55 ಗ್ರಾಮಗಳಿಗೆ ಸ್ಮಶಾನಭೂಮಿ ಕಲ್ಪಿಸುವಲ್ಲಿ ಸಫಲರಾಗಿದ್ದಾರೆ. ಇನ್ನೂ ತಾಂತ್ರಿಕ ಹಾಗೂ ಭೂಮಿ ಲಭ್ಯವಾಗದ 83 ಗ್ರಾಮಗಳಿಗೆ ಭೂಮಿ ಗುರುತಿಸುವ ಕಾರ್ಯದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿದ್ದಾರೆ.

ವರ್ಷವಾದರೂ ಸಿಗದ ಅಧಿಕಾರ ಭಾಗ್ಯ, Belagavi ಪಾಲಿಕೆ ಸದಸ್ಯರಿಂದ ಕೇಕ್ ಕತ್ತರಿಸಿ ವ್ಯಂಗ್ಯ

ಪ್ರತಿ ಹಳ್ಳಿಗಳಿಗೂ ಸ್ಮಶಾನ ಭೂಮಿ ಒದಗಿಸುವ ಶಪತ ಮಾಡಿರುವ ಬೆಳಗಾವಿ ಜಿಲ್ಲಾಡಳಿತಕ್ಕೆ ಭೂಮಿಯ ಕೊರತೆ ಸವಾಲಾಗಿ ಪರಿಣಮಿಸಿತು. ಆದರೂ ಈ ಕಾರ್ಯವನ್ನು ಕೈ ಬಿಡದ ಅಧಿಕಾರಿಗಳು ಸರ್ಕಾರಿ ಭೂಮಿ ಇದ್ದಲ್ಲಿ ಮಂಜೂರು ಮಾಡಿಕೊಡಲು ಅಷ್ಟೇನು ಸಮಸ್ಯೆ ಎದುರಾಗಲಿಲ್ಲ. ಇನ್ನೂ ಕೆಲವು ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಇಲ್ಲದೆ ಇರುವುದರಿಂದ ಖಾಸಗಿ ವ್ಯಕ್ತಿಗಳ ಮನವೊಲಿಸಿ, ಆಯಾ ಪ್ರದೇಶದಲ್ಲಿ ಮಾರುಕಟ್ಟೆದರದ ಆಧಾರದಲ್ಲಿಯೇ ಭೂಮಿಯನ್ನು ಖರೀದಿಸುವ ಕಾರ್ಯ ಮಾಡಿದ್ದರಿಂದ ಸ್ವಲ್ಪ ಸಮಯಾವಕಾಶ ತೆಗೆದುಕೊಂಡಿದ್ದಾರೆ. ಜತೆಗೆ ಕೆಲವು ಕಡೆಗಳಲ್ಲಿ ಅರಣ್ಯ ಭೂಮಿಯನ್ನು ಸ್ಮಶಾನಕ್ಕೆ ಮಂಜೂರು ಮಾಡಿದ್ದಾರೆ.

ಜಿಲ್ಲೆಯಲ್ಲಿ ಎಲ್ಲ ಹಳ್ಳಿಗಳಿಗೂ ಸ್ಮಶಾನ ಭೂಮಿ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ ಕೇವಲ 2-3 ತಿಂಗಳ ಅವಧಿಯಲ್ಲಿ 226 ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಲಾಗಿದೆ. ಇನ್ನೂಳಿದ ಗ್ರಾಮಗಳಲ್ಲಿ ಭೂಮಿ ಹುಡುಕುವ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಯಾವುದೇ ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಇಲ್ಲದಿದ್ದಲ್ಲಿ, ತಕ್ಷಣ ಸಂಬಂಧ ಪಟ್ಟತಹಶಿಲ್ದಾರ, ಉಪವಿಭಾಗಾಧಿಕಾರಿಯನ್ನು ಭೇಟಿ ಮಾಡಿ ತಿಳಿಸಿದ್ದಲ್ಲಿ ಆಧ್ಯತೆ ಮೆರೆಗೆ ಪರಿಶೀಲನೆ ನಡೆಸಲಾಗುವುದು. ಯಾರಾದರೂ ಮರಣ ಹೊಂದಿದ್ದಲ್ಲಿ ಅಂತ್ಯಕ್ರಿಯೆಗೆ ಪರದಾಡುವ ಪರಿಸ್ಥಿತಿಯನ್ನು ಇಲ್ಲದಾಗಿಸುವುದೇ ಜಿಲ್ಲಾಡಳಿತ ಉದ್ದೇಶವಾಗಿದೆ ಅಂತ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios