ಮಂಗಳೂರು(ಆ.06): ಸಾರ್ವಜನಿಕ ಸಾರಿಗೆಗಳ ಬಳಿಕ ಈಗ ಕರಾವಳಿಯ ಕೊಂಕಣ ಮಾರ್ಗದಲ್ಲಿ ರೈಲ್ವೆಯೂ ಸಿಸಿ ಕ್ಯಾಮೆರಾ ಕಣ್ಗಾವಲಿಗೆ ಒಳಪಡಲಿದೆ. ಇದರಿಂದಾಗಿ ಇನ್ನು ಮುಂದೆ ರೈಲಿನಲ್ಲಿ ಸಂಚರಿಸುವವರು ಯಾವುದೇ ಭೀತಿ ಇಲ್ಲದೆ ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ.

ಕರಾವಳಿಯ ಕೊಂಕಣ್‌ ಮಾರ್ಗದಲ್ಲಿ ಸಂಚರಿಸುವ ಎರಡು ರೈಲುಗಳಿಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಇನ್ನು ಮುಂದೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ವಿಧದ ರೈಲುಗಳಿಗೂ ವಿಸ್ತರಣೆಗೊಳ್ಳಲಿದೆ.

ರೈಲ್ವೆ ಪ್ರಯಾಣಿಕರಿಗೆ ಪ್ರಯಾಣದ ವೇಳೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ರೈಲ್ವೇ ನೀಡಿದ ಸೂಚನೆ ಮೇರೆಗೆ ರೈಲ್ವೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಉತ್ತರ ಭಾರತದಲ್ಲಿ ಈಗಾಗಲೇ ಬಹುತೇಕ ರೈಲುಗಳು ಸಿಸಿ ಕ್ಯಾಮರಾ ವ್ಯವಸ್ಥೆ ಹೊಂದಿವೆ.

ಪ್ರಾಯಣಿಕರಿಗಿನ್ನು ಆರಾಮದಾಯಕ ಪ್ರಯಾಣ:

ರೈಲು ನಿಲ್ದಾಣ ಹಾಗೂ ಪ್ರಯಾಣಿಕರ ಸುರಕ್ಷತೆ ಸಲುವಾಗಿ ಮೊದಲ ಹಂತದಲ್ಲಿ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ ಅಳವಡಿಕೆಗೆ ಚಾಲನೆ ನೀಡಲಾಗಿತ್ತು. ಈ ಕಾರ್ಯ ಒಂದೆರಡು ಸಣ್ಣಪುಟ್ಟರೈಲು ನಿಲ್ದಾಣಗಳನ್ನು ಹೊರತುಪಡಿಸಿ ಬಹುತೇಕ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ರೈಲು ನಿಲ್ದಾಣಗಳ ಪ್ರವೇಶ ದ್ವಾರ ಹಾಗೂ ಫ್ಲ್ಯಾಟ್‌ಫಾರಂಗಳ ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ರೈಲು ನಿಲ್ದಾಣಗಳಲ್ಲಿ ಆಂತರಿಕ ಸುರಕ್ಷೆ ಇನ್ನಷ್ಟುಬಲಗೊಳ್ಳುವಂತಾಗಿದೆ. ಅಲ್ಲದೆ ಪ್ರಯಾಣಿಕರು ಕೂಡ ನೆಮ್ಮದಿಯಿಂದ ಪ್ರಯಾಣಿಸಲು ಸಾಧ್ಯವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಕರಾವಳಿ ರೈಲಿಗೂ ಬಂತು ಸಿಸಿ ಕ್ಯಾಮೆರಾ:

ಸಿಸಿ ಕ್ಯಾಮೆರಾ ಕಲ್ಪನೆ ಹೊಸತಲ್ಲದಿದ್ದರೂ ಇದು ಕರಾವಳಿಯ ರೈಲು ಬೋಗಿಗಳಿಗೆ ಇರಲಿಲ್ಲ. ಇದೀಗ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಎಲ್ಲ ವಿಧದ ರೈಲು ಬೋಗಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಮಂಗಳೂರು: ನೇತ್ರಾವತಿ ಸೇತುವೆಗೆ ಸಿಸಿ ಟಿವಿ ಅಳವಡಿಕೆ

ಸಿಸಿ ಕ್ಯಾಮೆರಾ ಅಳವಡಿಕೆ ನಂತರ ಕ್ರಿಮಿನಲ್ ಕೇಸ್‌ ದಾಖಲಾಗಿಲ್ಲ:

ಕರಾವಳಿಯಲ್ಲಿ ಕೊಂಕಣ ರೈಲ್ವೆ ವ್ಯಾಪ್ತಿಯ ಜನದಟ್ಟಣೆ ಹೊಂದಿರುವ ಕೊಂಕಣ್‌-ಕನ್ಯಾ ಮಾಂಡೋವಿ ಎಕ್ಸ್‌ಪ್ರೆಸ್‌ ಹಾಗೂ ಸಿಎಸ್‌ಟಿ-ಮಡ್ಗಾಂವ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳಿಗೆ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಎರಡು ರೈಲುಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿರುವುದು ಯಶಸ್ವಿಯಾಗಿದ್ದು, ರೈಲುಗಳಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ನಿಯಂತ್ರಿಸುವಲ್ಲಿ ಇದು ಸಹಕಾರಿಯಾಗಿದೆ. ಅಲ್ಲದೆ ಈ ರೈಲುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ ಬಳಿಕ ಕಳೆದ ಮೂರು ತಿಂಗಳಲ್ಲಿ ಯಾವುದೇ ಕ್ರಿಮಿನಲ್‌ ಕೇಸ್‌ ದಾಖಲಾಗಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಸ್ಲೀಪರ್‌ ಕೋಚ್‌ನಲ್ಲೂ ಸಿಸಿಟಿವಿ:

ಎಲ್‌ಎಚ್‌ಬಿ ಕೋಚ್‌ ಹೊಂದಿರುವ ಈ ರೈಲುಗಳಲ್ಲಿ 36 ಸ್ಲೀಪರ್‌ ಕೋಚ್‌ಗಳಿವೆ. ಈ ಎಲ್ಲ ಸ್ಲೀಪರ್‌ ಕೋಚ್‌ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ರೈಲ್ವೆ ಕೋಚ್‌ನ್ನು ಪ್ರವೇಶಿಸುವ ಮೇಲ್ಭಾಗದಲ್ಲಿ ಹಾಗೂ ಸ್ಲೀಪರ್‌ ಕೋಚ್‌ನ ಕಾರಿಡಾರ್‌ಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಈ ಕ್ಯಾಮರಾ ಸೆರೆಹಿಡಿಯುವ ದೃಶ್ಯಾವಳಿಗಳು ರೈಲಿನಲ್ಲೇ ಪ್ರತ್ಯೇಕವಾಗಿ ರೂಪಿಸಿದ ಕಂಟ್ರೋಲ್‌ ರೂಂ ಮಾದರಿಯ ವ್ಯವಸ್ಥೆಯಲ್ಲಿ ಸಂಗ್ರಹಗೊಳ್ಳುತ್ತವೆ. ಇದರ ಫುಟೇಜ್‌ನ್ನು ಪಡೆದುಕೊಳ್ಳಲು ರೈಲ್ವೆ ಇಲಾಖೆಗೆ ಅವಕಾಶ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರೈಲುಗಳಿಗೆ ವಿಸ್ತರಣೆ:

ಕೊಂಕಣ ರೈಲ್ವೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಮಾದರಿಯಲ್ಲೇ ಇನ್ನು ಎಲ್ಲ ರೈಲುಗಳಲ್ಲೂ ಸಿಸಿ ಕ್ಯಾಮರಾ ಅಳವಡಿಕೆ ನಡೆಯಲಿದೆ. ಆಯಾ ರೈಲ್ವೆ ವಲಯದ ಅಧಿಕಾರಿಗಳು ಈ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ. ಐಷಾರಾಮಿ ಹವಾನಿಯಂತ್ರಿತ ಬೋಗಿಗಳಲ್ಲಿ ಮಾತ್ರವಲ್ಲ ಎಲ್ಲ ಬೋಗಿಗಳಲ್ಲೂ ಸಿಸಿ ಕ್ಯಾಮರಾ ಅಳವಡಿಕೆಯಾಗಲಿದೆ. ಇದರಿಂದಾಗಿ ರೈಲುಗಳಲ್ಲಿ ನಡೆಯುವ ಕಳ್ಳತನ, ದರೋಡೆ, ಟಿಕೆಟ್‌ ರಹಿತ ಪ್ರಯಾಣ ಹಾಗೂ ಅಪಘಾತದಂತಹ ಪ್ರಕರಣಗಳು ಸಂಭವಿಸಿದಾಗ ಈ ಸಿಸಿ ಕ್ಯಾಮೆರಾಗಳು ಪ್ರಯೋಜನಕ್ಕೆ ಬರಲಿವೆ ಎನ್ನುವುದು ರೈಲ್ವೆ ಅಧಿಕಾರಿಗಳ ಮಾತು.

-ಆತ್ಮಭೂಷಣ್‌, ಮಂಗಳೂರು