ಬೆಂಗಳೂರು [ಸೆ.01]:  ಕಾನೂನು ಬಾಹಿರವಾಗಿ ವಹಿವಾಟು ನಡೆಸುತ್ತಿದ್ದ ಆರೋಪದ ಮೇರೆಗೆ ನಗರದ ಲೀ ಮೆರಿಡಿಯನ್‌ ಹೋಟೆಲ್‌ನಲ್ಲಿರುವ ‘ಶುಗರ್‌ ಫ್ಯಾಕ್ಟರಿ’ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮೇಲೆ ದಾಳಿ ನಡೆಸಿದ ಸಿಸಿಬಿ, ರೆಸ್ಟೋರೆಂಟ್‌ ವ್ಯವಸ್ಥಾಪಕ ಸೇರಿ ಮೂವರನ್ನು ಬಂಧಿಸಿದೆ.

ವಿದ್ಯಾರಣ್ಯಪುರದ ಎಎಂಎಸ್‌ ಲೇಔಟ್‌ ನಿವಾಸಿ, ವ್ಯವಸ್ಥಾಪಕ ಮಂಜುನಾಥ್‌ ಮಾದೇಗೌಡ ಅಲಿಯಾಸ್‌ ರೋಹನ್‌ ಗೌಡ, ಶೇಷಾದ್ರಿಪುರಂನ ಡಿಜೆ ನವೀದ್‌ ಹಾಗೂ ಮತ್ತಿಕೆರೆಯ ಬೃಂದಾವನ ನಗರದ ಕ್ಯಾಷಿಯರ್‌ ಶಶಿಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಹಾಗೂ ಸಂಗೀತ ಪರಿಕರಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಅರಮನೆ ರಸ್ತೆಯ ಲೀ ಮೆರಿಡಿಯಿನ್‌ ಹೋಟೆಲ್‌ ನೆಲ ಮಹಡಿಯಲ್ಲಿರುವ ಶುಗರ್‌ ಫ್ಯಾಕ್ಟರಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಅಬಕಾರಿ ಮತ್ತು ಡಿಸ್ಕೋಥೆಕ್‌ ನಿಯಮಗಳನ್ನು ಉಲ್ಲಂಘಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ರೆಸ್ಟೋರೆಂಟ್‌ ಮೇಲೆ ಶನಿವಾರ ಮುಂಜಾನೆ ನಡೆಸಲಾಯಿತು ಎಂದು ಸಿಸಿಬಿ ಡಿಸಿಪಿ ಕುಲದೀಪ್‌ ಜೈನ್‌ ತಿಳಿಸಿದ್ದಾರೆ.

ಕಾನೂನು ಬಾಹಿರವಾಗಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ನಡೆಸಿದ ಆರೋಪದ ಮೇರೆಗೆ ಲೀ ಮೆರಿಡಿಯನ್‌ ಹೋಟೆಲ್‌ನ ಛೇರ್‌ಮನ್‌ ಮ್ಯಾಕ್‌ ಚಾರ್ಲ್ಸ್ ಮತ್ತು ಎಂ.ಎಸ್‌.ರೆಡ್ಡಿ ವಿರುದ್ಧ ಸಹ ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿಪಿ ಸ್ಪಷ್ಟಪಡಿಸಿದರು.

ವ್ಯವಸ್ಥಾಪಕ ರೋಹನ್‌ ಗೌಡ, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಅಲ್ಲದೆ, ಕಿರಿತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ನಲ್ಲೂ ಸಹ ಆತ ಭಾಗವಹಿಸಿದ್ದ. ರಾಜಕೀಯ ಪ್ರಭಾವ ಬಳಸಿಕೊಂಡು ರೋಹನ್‌, ಶುಗರ್‌ ಫ್ಯಾಕ್ಟರಿ ಹೆಸರಿನ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಡಿಸ್ಕೊಬೕಥೆಕ್‌ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.