ಬೆಂಗಳೂರು(ನ.20): ಡಾರ್ಕ್‌ನೆಟ್‌ ಡ್ರಗ್ಸ್‌ ಜಾಲದಲ್ಲಿ ಮಾಜಿ ಸಚಿವರ ಹಾಗೂ ಉದ್ಯಮಿಗಳ ಮಕ್ಕಳು ಸೆರೆಯಾದ ಬೆನ್ನಲ್ಲೇ ಮತ್ತಷ್ಟು ಗಣ್ಯರ ಕುಟುಂಬಗಳಿಗೆ ಸಿಸಿಬಿ ತನಿಖೆ ಆತಂಕ ಸೃಷ್ಟಿಸಿದೆ.

ಡ್ರಗ್ಸ್‌ ದಂಧೆ ಮಾತ್ರವಲ್ಲದೆ ದೇಶ-ವಿದೇಶದ ಕಂಪನಿಗಳ ವೆಬ್‌ಸೈಟ್‌ ಅನ್ನು ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಮೂಲಕ ಹ್ಯಾಕ್‌ ಮಾಡಿಸಿ ಸುಲಿಗೆ ಮಾಡುವುದೇ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಸ್ನೇಹಿತರ ಕೃತ್ಯವಾಗಿತ್ತು. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಅವರು ಚಟುವಟಿಕೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಜತೆ ಡ್ರಗ್ಸ್‌ ಪ್ರಕರಣದ ಆರೋಪಿಗಳಾದ ಪ್ರಸಿದ್‌ ಶೆಟ್ಟಿ, ಸುನೀಷ್‌ ಹೆಗ್ಡೆ, ಹೇಮಂತ್‌ ಮುದ್ದಪ್ಪ ಹಾಗೂ ಸುಜಯ್‌ಗೆ ನಿಕಟ ಸಂಬಂಧವಿತ್ತು. ಡಾರ್ಕ್ ನೆಟ್‌ನಲ್ಲಿ ಡ್ರಗ್ಸ್‌ ಖರೀದಿಗೆ ಬಿಟ್‌ ಕಾಯಿನ್‌ಗಳನ್ನು ಆರೋಪಿಗಳು ಬಳಸುತ್ತಿದ್ದರು. ಆಗ ಹ್ಯಾಕರ್‌ ಶ್ರೀಕಿ ಮೂಲಕ ಪ್ರಸಿದ್ ಶೆಟ್ಟಿ ಹಾಗೂ ಸುನೀಷ್‌, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿಸಿ ಮಾಹಿತಿ ಕದಿಯುತ್ತಿದ್ದರು. ಬಳಿಕ ಹಣಕ್ಕಾಗಿ ಆ ಕಂಪನಿಗಳನ್ನು ಬೆದರಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ದಿನಗಳಿಂದ ಡ್ರಗ್ಸ್‌ ದಂಧೆ ಹಾಗೂ ಹ್ಯಾಕಿಂಗ್‌ ಕೃತ್ಯಗಳನ್ನು ಈ ಆರೋಪಿಗಳು ನಡೆಸಿದ್ದಾರೆ. ಈ ಜಾಲವು ಬೃಹತ್ತಾಗಿದ್ದು, ಮತ್ತಷ್ಟುಮಂದಿಯನ್ನು ವಿಚಾರಣೆಗೆ ಕರೆಯಬೇಕಿದೆ. ಸಂಜಯನಗರ ಹಾಗೂ ಸದಾಶಿವನಗರದ ಫ್ಲ್ಯಾಟ್‌ಗಳಲ್ಲಿ ಬುಧವಾರ ಆರೋಪಿ ಶ್ರೀಕಿಯನ್ನು ಕರೆದೊಯ್ದು ಮಹಜರ್‌ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್ ಜಾಲ ಬಯಲು ಮಾಡಲು ಹೊರಟ ಪತ್ರಕರ್ತನ ಹತ್ಯೆ

ಡ್ರಗ್ಸ್‌ ತಂಡಕ್ಕೆ ಖಾಕಿ ನಂಟು

ವಿಐಪಿ ಮಕ್ಕಳ ಡ್ರಗ್ಸ್‌ ಜಾಲಕ್ಕೆ ಕೆಲವು ಪೊಲೀಸರು ಕೂಡಾ ಸಹಕರಿಸಿದ್ದಾರೆ. ಈ ನೆರವಿನ ಕಾರಣಕ್ಕೆ ಐದಾರು ವರ್ಷಗಳಿಂದ ನಿರತರವಾಗಿ ಹ್ಯಾಕಿಂಗ್‌ನಲ್ಲಿ ಶ್ರೀಕಿ ತೊಡಗಿದ್ದರೂ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ. ಇದೇ ಮೊದಲ ಬಾರಿಗೆ ಆತನ ಬಂಧನವಾಗಿದೆ ಎಂದು ಮೂಲಗಳು ಹೇಳಿವೆ.

ಈಗಾಗಲೇ ಡ್ರಗ್ಸ್‌ ಪ್ರಕರಣದ ಆರೋಪಿಗಳಿಗೆ ಸಹಕರಿಸಿದ ಆರೋಪದ ಮೇರೆಗೆ ಸದಾಶಿವನಗರ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಪ್ರಭಾಕರ್‌ನನ್ನು ಅಮಾನತುಗೊಳಿಸಲಾಗಿದೆ. ಈಗ ಆರೋಪಿಗಳ ಸ್ನೇಹ ವಲಯದಲ್ಲಿದ್ದ ಪೊಲೀಸರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ರಗ್ಸ್ ಕೇಸಲ್ಲಿ ಪ್ರತಿಷ್ಠಿತರ ಮಕ್ಕಳ ಬಂಧನ; ಡ್ರಗ್ಸ್‌ ಜೊತೆ ನಡೀತಿತ್ತು ಸೆಕ್ಸ್ ದಂಧೆ!

ಆರೋಪಿಗಳ ಪರ ಐಎಎಸ್‌, ಐಪಿಎಸ್‌ ಲಾಬಿ

ಡ್ರಗ್ಸ್‌ ಪ್ರಕರಣದ ಬಂಧಿತರ ಆರೋಪಿಗಳ ಪರವಾಗಿ ಪೊಲೀಸರಿಗೆ ಕರೆ ಮಾಡಿ ಕೆಲವು ಹಿರಿಯ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ಸದಾಶಿವನಗರದ ವೈದ್ಯರ ಪುತ್ರನಾದ ಪ್ರಸಿದ್‌ ಶೆಟ್ಟಿ, ಸುನೀಷ್‌ ಹೆಗ್ಡೆ, ಹೇಮಂತ್‌ ಮುದ್ದಪ್ಪ ಹಾಗೂ ಸುಜಯ್‌ ಬಂಧನ ವಿಚಾರ ತಿಳಿದ ಕೆಲವು ಅಧಿಕಾರಿಗಳು, ‘ಒಳ್ಳೆಯ ಕುಟುಂಬದ ಮಕ್ಕಳು. ಏನೋ ತಿಳಿಯದೆ ತಪ್ಪು ಮಾಡಿರಬಹುದು. ಸ್ಪಲ್ಪ ಸಹಾಯ ಮಾಡಿ’ ಎಂದು ಸಿಸಿಬಿಗೆ ವಿನಂತಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಒತ್ತಡಕ್ಕೆ ಆಯುಕ್ತ ಕಮಲ್‌ ಪಂತ್‌ ಹಾಗೂ ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಕ್ಯಾರೆ ಎನ್ನದೆ ತನಿಖೆ ಮುಂದುವರೆಸಿದ್ದು, ಗಣ್ಯರ ಮತ್ತಷ್ಟು ಭೀತಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.