ಬೆಂಗಳೂರು [ಡಿ.16]:  ಹೈಡ್ರೋ ಗಾಂಜಾ ಬೆಳೆದು ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಪೊಲೀಸರಿಗೆ ಸೆರೆ ಸಿಕ್ಕ ಯುವಕರು ತಮ್ಮ ಬಂಧನಕ್ಕೂ ಮೊದಲೇ ವಿದೇಶದ ಲ್ಲಿರುವ ಗಾಂಜಾ ಮಾಫಿಯಾಕ್ಕೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ಡಾರ್ಕ್‌ನೆಟ್ ಮೂಲಕ ವ್ಯವಹರಿಸುವ ಇವರು ವಿದೇಶಿ ದಂಧೆಕೋರರಿಗೆ ಎಚ್ಚರಿಕೆ ನೀಡಿದ್ದರೂ ತಾವೇ ಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ!

ನೆದರ್‌ಲೆಂಡ್‌ನಿಂದ ಹೈಡ್ರೋ ಗಾಂಜಾದ ಬೀಜ ತರಿಸಿ ಹೂ ಕುಂಡದಲ್ಲಿ ಬೆಳೆಯುತ್ತಿದ್ದ ಬಿಹಾರ ಮೂಲದ ಬಿಬಿಎಂ ವಿದ್ಯಾರ್ಥಿ ಅಮಾತ್ಯ ರಿಷಿ (23) ಎಂಬಾತ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತ ನಾಗಿದ್ದಾನೆ. ಈತನ ಬಂಧನಕ್ಕೂ ಮೊದಲು ಇದೇ ದಂಧೆ ನಡೆಸುತ್ತಿದ್ದ ಕೊಲ್ಕತಾದ ಅತೀಫ್ ಸಲೀಂ ಎಂಬುವನನ್ನು ಬೆಂಗಳೂರು ಸಿಸಿಬಿ ಪೊಲೀಸರು ಕೊಲ್ಕತಾದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಅತೀಫ್‌ನ ಬಂಧನದ ವಿಷಯ ತಿಳಿದ ಅಮಾತ್ಯ ರಿಷಿ, ನಮ್ಮ ಜಾಲದವನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ನಾವೆಲ್ಲ ಎಚ್ಚರಿಕೆಯಿಂ ದಿರಬೇಕು ಎಂದು ವಾಟ್ಸ್‌ಆ್ಯಪ್ ಹಾಗೂ ಡಾರ್ಕ್‌ನೆಟ್ ಮೂಲಕ ಸಂದೇಶ ಕಳಿಸಿದ್ದ. ನಂತರ ಅತೀಫ್ ನೀಡಿದ ಮಾಹಿತಿ ಆಧರಿಸಿ ರಿಷಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ಡಾರ್ಕ್‌ನೆಟ್ ಕೂಡ ಸೇಫ್ ಅಲ್ಲ: ನಾವು ದಂಧೆಗೆ ಬಳಸುತ್ತಿರುವ ಡಾರ್ಕ್‌ನೆಟ್ ಜಾಲ ವನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಡಾರ್ಕ್‌ನೆಟ್ ಕೂಡ ನಮಗೆ ಸುರಕ್ಷಿತವಲ್ಲ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು.  ಹೀಗಾಗಿ ಎಲ್ಲರೂ ನಿಮ್ಮ ಖಾತೆಗ ಳನ್ನು ನಿಷ್ಕ್ರಿಯಗೊಳಿಸಿ ಎಂದು ರಿಷಿ ಸಂದೇಶ ಕಳುಹಿಸಿದ್ದ. ಅದರ ಜೊತೆಗೆ, ಅತೀಫ್ ಸಲೀಂ ಬಂಧನಕ್ಕೆ ಒಳಗಾದ ಸುದ್ದಿಯ ಆಂಗ್ಲಪತ್ರಿಕೆಯ ತುಣಕುಗಳನ್ನೂ ಕಳಿಸಿದ್ದ. ಅದನ್ನು ನೋಡಿದ ದಂಧೆಕೋರರು ಅಲರ್ಟ್ ಆಗಿದ್ದಾರೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟಾಯ್ಲೆಟ್‌ನಲ್ಲೇ ಪ್ರಳಯಾಂತಕನ ನೆದರ್ಲ್ಯಾಂಡ್ ಗಾಂಜಾ ಕೃಷಿ....

ಮೊಬೈಲ್ ಸಂಖ್ಯೆ ಪತ್ತೆಗೆ ಕ್ರಮ: ಅಮಾತ್ಯ ರಿಷಿ ತಮ್ಮ ಡ್ರಗ್ಸ್ ಮಾಫಿಯಾದ ಹಲವು ಮಂದಿಗೆ ಸಂದೇಶ ರವಾನಿಸಿದ್ದಾನೆ. ಈ ಪೈಕಿ ಮುಂಬೈ, ಕೊಲ್ಕತಾ, ಬೆಂಗಳೂರು ಹಾಗೂ ಹೈದರಾಬಾದ್ ನ ಕೆಲ ಮೊಬೈಲ್ ಸಂಖ್ಯೆಗಳಿಗೆ ಸಂದೇಶ ರವಾನೆಯಾಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಉಳಿದಂತೆ ವಿದೇಶದಲ್ಲಿನ ದಂಧೆಕೋರರ ಮೊಬೈಲ್ ಸಂಖ್ಯೆಗಳಿಗೂ ಸಂದೇಶ ಹೋಗಿದೆ. ಹೀಗಾಗಿ ಯಾವ್ಯಾವ ದೇಶಗಳಲ್ಲಿರುವ ದಂಧೆಕೋರರಿಗೆ ಈ ಮಾಹಿತಿ ಹೋಗಿದೆ ಎಂಬುದನ್ನು ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಪತ್ತೆಹಚ್ಚಲಾಗುವುದು ಎಂದು ಅಧಿಕಾರಿ ತಿಳಿಸಿದರು. 

ವಿದ್ಯಾರ್ಥಿ ಖಾತೆಯಲ್ಲಿ 9 ಲಕ್ಷ: ಬಂಧಿತ ಬಿಹಾರ ಮೂಲದ ವಿದ್ಯಾರ್ಥಿ ಅಮಾತ್ಯ ರಿಷಿಯ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಹಣ ಇದೆ. ಇದೆಲ್ಲವೂ ದಂಧೆಯಲ್ಲಿ ಸಂಗ್ರಹಿಸಿರುವುದು ಎಂಬುದು ಮೇಲ್ನೋಟಕ್ಕೆ ತಿಳಿದಿದೆ. ಕೆಂಗೇರಿಯಲ್ಲಿನ ಪ್ರತಿಷ್ಠಿತ ‘ಶಾಂಗ್ರಿಲಾ’ ಅಪಾರ್ಟ್‌ಮೆಂಟ್‌ನಲ್ಲಿ ಈತ ಸ್ವಂತ ಫ್ಲ್ಯಾಟ್ ಹೊಂದಿದ್ದಾನೆ. ಈ ಫ್ಲ್ಯಾಟನ್ನು ತಂದೆ ತನ್ನ ಓದಿಗೆಂದು 40 ಲಕ್ಷ ರು. ಪಾವತಿಸಿ ಕೊಡಿಸಿದ್ದರು ಎಂದು ಹೇಳಿಕೆ ನೀಡಿದ್ದಾನೆ. ಆತನ ಪೋಷಕರನ್ನು ಪ್ರಶ್ನಿಸಿದ ಬಳಿಕ ಸತ್ಯಾಂಶ ಹೊರಬರಲಿದೆ ಎಂದರು.