ಹುಬ್ಬಳ್ಳಿ(ಫೆ.27): ಅಕ್ರಮ ಹಣ ಸಂಪಾದನೆ ಮತ್ತು ಲಂಚ ಸ್ವೀಕಾರ ಪ್ರಕರಣದ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆ (ಪಶ್ಚಿಮ) ವಿಭಾಗದ ಹಿರಿಯ ಎಂಜಿನೀಯರ್‌ ನೀರಜ್‌ ಭಾಪಣಾ ಎಂಬುವವರ ಹುಬ್ಬಳ್ಳಿ ನಿವಾಸ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ನಸುಕಿನ ವೇಳೆ ದಾಳಿ ನಡೆಸಿ ಸಂಜೆವರೆಗೂ ಪರಿಶೀಲನೆ ನಡೆಸಿದ್ದಾರೆ.

ಹುಬ್ಬಳ್ಳಿ ಅಲ್ಲದೆ ಆನೇಕಲ್‌ ಮತ್ತು ಅನಂತಪುರ ನಿವಾಸದ ಮೇಲೆಯೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಹುಬ್ಬಳ್ಳಿಯ ಗದಗ ರಸ್ತೆಯ ಗಾಲ್ಫ್‌ ಕ್ಲಬ್‌ ಬಳಿ ಇರುವ ನೀರಜ್‌ ನಿವಾಸದ ಮೇಲೆ ಬೆಳಗ್ಗೆ 3ಕ್ಕೆ ಸಿಬಿಐ ಇನಸ್ಪೆಕ್ಟ​ರ್‌ ವಿನುತಾ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದೆ.

ಹುಬ್ಬಳ್ಳಿ: ಬೀದಿಗೆ ಬಂತು ಖ್ಯಾತ ವೈದ್ಯ ದಂಪತಿಯ ಕೌಟುಂಬಿಕ ಕಲಹ..!

ಮಧ್ಯಾಹ್ನ 2ಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಟ್ಟಡದಲ್ಲಿರುವ ನೀರಜ್‌ ಕಚೇರಿಗೆ ತೆರಳಿ ಸಂಜೆವರೆಗೂ ವಿಚಾರಣೆ ನಡೆಸಿತು. ಕಳೆದ ವರ್ಷವಷ್ಟೇ ನೀರಜ್‌ ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗವಣೆಯಾಗಿದ್ದರು. ಅವರು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಕ್ರಮ ಹಣ ಸಂಪಾದನೆ ಮತ್ತು ಲಂಚ ಸ್ವೀಕರಿಸಿದ ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.