ಕಳೆದ ವರ್ಷ ಮೈಸೂರು ದಸರಾ ವೇಳೆ ಬಲೂನ್ ಮಾರುತ್ತಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾ*ರವೆಸಗಿ ಕೊಲೆ ಮಾಡಿದ್ದ ಆರೋಪಿಗೆ ಪೋಕ್ಸೋ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಸಿಸಿಟಿವಿ ದೃಶ್ಯಗಳು ಹಾಗೂ ಡಿಎನ್ಎ ಪರೀಕ್ಷೆಯಂತಹ ವೈಜ್ಞಾನಿಕ ಸಾಕ್ಷ್ಯಗಳು ಆರೋಪ ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಂತ್ರಸ್ತ ಕುಟುಂಬಕ್ಕೆ 13.5 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ.
ಮೈಸೂರು: ನಾಡಹಬ್ಬ ಮೈಸೂರು ದಸರಾ ಸಂಭ್ರಮದ ನಡುವೆಯೇ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಕೊನೆಗೂ ತೀರ್ಪು ಹೊರಬಿದ್ದಿದೆ. ದಸರಾ ವೇಳೆ ಬಲೂನ್ ಮಾರಾಟ ಮಾಡಲು ಪೋಷಕರೊಂದಿಗೆ ಮೈಸೂರಿಗೆ ಬಂದಿದ್ದ ಒಂಬತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಗೆ ಗಲ್ಲುಶಿಕ್ಷೆಯಾಗಿದೆ. ಪೊಲೀಸರ ತನಿಖೆ ಮತ್ತು ಪ್ರಾಸಿಕ್ಯೂಷನ್ನ ವಾದಗಳು ಆರೋಪ ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
2025 ದಸರಾ ಸಂಭ್ರಮದ ನಡುವೆ ನಡೆದಿದ್ದ ಘೋರ ಕೃತ್ಯಕ್ಕೆ ಈಗ ನ್ಯಾಯಾಲಯದ ತೀರ್ಪು
ಕಳೆದ ವರ್ಷ ಅಕ್ಟೋಬರ್ನಲ್ಲಿ ಮೈಸೂರು ದಸರಾ ಮಹೋತ್ಸವದ ವೇಳೆ ಬಲೂನ್ ಮಾರಾಟ ಮಾಡಲು ಕಲಬುರಗಿಯಿಂದ ಕುಟುಂಬ ಸಮೇತ ಬಂದಿದ್ದ ಬಾಲಕಿ, ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದ ಬಳಿ ಪೋಷಕರೊಂದಿಗೆ ತಾತ್ಕಾಲಿಕ ಟೆಂಟ್ನಲ್ಲಿ ಮಲಗಿದ್ದಳು. ಅಕ್ಟೋಬರ್ 8ರ ಮಧ್ಯರಾತ್ರಿ ಬಾಲಕಿಯನ್ನು ಅಲ್ಲಿಂದ ಕರೆದೊಯ್ದ ಆರೋಪಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಅಕ್ಟೋಬರ್ 9ರಂದು ಬೆಳಗಿನ ಜಾವ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಮೈಸೂರು ಮಾತ್ರವಲ್ಲದೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ನಜರಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ತನಿಖೆಯಲ್ಲಿ ಸಿಸಿಟಿವಿ ದೃಶ್ಯಗಳು ಮಹತ್ವದ ಸುಳಿವು ನೀಡಿದ್ದವು. ಅವುಗಳ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಘಟನೆ ನಡೆದ 24 ಗಂಟೆಗಳೊಳಗೆ ಆರೋಪಿ ಕಾರ್ತಿಕ್ನನ್ನು ಬಂಧಿಸಿದ್ದರು.
ಡಿಜಿಟಲ್ ಸಾಕ್ಷ್ಯದಿಂದ ಡಿಎನ್ಎ ಪರೀಕ್ಷೆಯವರೆಗೆ...
ಆರೋಪ ಸಾಬೀತುಪಡಿಸಿದ ವೈಜ್ಞಾನಿಕ ಪುರಾವೆಗಳು...
ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಕೊರತೆಯ ನಡುವೆಯೂ ಪೊಲೀಸರು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳು, ವೈದ್ಯಕೀಯ ಹಾಗೂ ಜೈವಿಕ ಸಾಕ್ಷ್ಯಗಳು, ಡಿಎನ್ಎ ಪರೀಕ್ಷೆಯ ವರದಿ ಮತ್ತು ಆರೋಪಿಯ ಚಲನವಲನಕ್ಕೆ ಸಂಬಂಧಿಸಿದ ಸಿಸಿ ಕ್ಯಾಮರಾಗಳ ದಾಖಲೆಗಳು ತನಿಖೆಯಲ್ಲಿ ಪ್ರಮುಖವಾಗಿದ್ದವು. ಕೃತ್ಯಕ್ಕೆ ಬಳಸಿದ್ದ ಚಾಕುವನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು.
ಅತ್ಯಾಚಾರ, ಕೊಲೆ ಬಳಿಕ ಆಟೋದಲ್ಲಿ ಪ್ರಯಾಣಿಸುವಾಗ ಅಪರಾಧಿ ಕೃತ್ಯದ ಬಗ್ಗೆ ಹೇಳಿಕೊಂಡಿದ್ದನೆಂಬ ಆಟೋ ಚಾಲಕನ ಸಾಕ್ಷ್ಯವೂ ವಿಚಾರಣೆಯಲ್ಲಿ ಮಹತ್ವ ಪಡೆದಿತ್ತು. ಬಳಿಕ ಬಸ್ನಲ್ಲಿ ಪ್ರಯಾಣಿಸಿದ್ದ ಆರೋಪಿಯನ್ನು ಗುರುತಿಸಿದ ಬಸ್ ಚಾಲಕನ ಹೇಳಿಕೆಯೂ ಪ್ರಾಸಿಕ್ಯೂಷನ್ಗೆ ನೆರವಾಗಿತ್ತು.
ಹಿಂದೆಯೂ ಗಂಭೀರ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಕಾರ್ತಿಕ್, ಈ ಪ್ರಕರಣದಲ್ಲಿ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದ. ಆದರೆ ವಿಚಾರಣೆ ವೇಳೆ ಮಂಡಿಸಲಾದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅಕ್ಟೋಬರ್ 15ರಂದು ಆರೋಪಿಯನ್ನು ದೋಷಿ ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.
ಅಕ್ಟೋಬರ್ 17ರಂದು ಮರಣದಂಡನೆ ಪ್ರಕಟ...
ಸಂತ್ರಸ್ತ ಕುಟುಂಬಕ್ಕೆ 13.5 ಲಕ್ಷ ರೂಪಾಯಿ ಪರಿಹಾರ...
ಮೈಸೂರು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ್ ಪಿ. ವಘಾಡೆ ಅವರು ಅತ್ಯಾ*ರ, ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಅಪರಾಧಗಳ ಹಿನ್ನೆಲೆಯಲ್ಲಿ ಕಾರ್ತಿಕ್ಗೆ ಮರಣದಂಡನೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ಪ್ರಬಲ ವಾದ ಮಂಡಿಸಿದ್ದರು. ತೀರ್ಪಿನ ಬಳಿಕ ಮಾತನಾಡಿದ ಕೆ.ಬಿ. ಜಯಂತಿ, ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ನ್ಯಾಯ ಕೊಡಿಸಬೇಕೆಂಬ ಉದ್ದೇಶ ನಮ್ಮದಾಗಿತ್ತು. ಪೊಲೀಸರ ತನಿಖೆ, ಸಿಸಿಟಿವಿ ದೃಶ್ಯಗಳು, ವೈದ್ಯಕೀಯ ಹಾಗೂ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದರು.
ಬಾಲಕಿಯನ್ನು ಕುಟುಂಬಕ್ಕೆ ಮರಳಿ ಕೊಡಲು ಸಾಧ್ಯವಿಲ್ಲ. ಆದರೆ ಆ ಕುಟುಂಬಕ್ಕೆ ನ್ಯಾಯ ಕೊಡಿಸಿದ ತೃಪ್ತಿ ಇದೆ. ಈ ತೀರ್ಪು ಇಂತಹ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶವಾಗಲಿದೆ ಎಂದು ಅವರು ಹೇಳಿದರು. ಸಂತ್ರಸ್ತ ಕುಟುಂಬಕ್ಕೆ 13.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದು, ಈಗಾಗಲೇ ಎರಡು ಲಕ್ಷ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದರು.
ಒಟ್ಟಾರೆ ದಸರಾ ಸಂಭ್ರಮಕ್ಕಾಗಿ ಮೈಸೂರಿಗೆ ಬಂದಿದ್ದ ಬಡ ಕುಟುಂಬದ ಪುಟ್ಟ ಬಾಲಕಿಯ ಬದುಕು ಕ್ರೂರ ಕೃತ್ಯಕ್ಕೆ ಬಲಿಯಾಗಿತ್ತು. ಒಂದು ವರ್ಷದ ಹಿಂದೆ ನಗರವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದಲ್ಲಿ ಇದೀಗ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಇಲ್ಲಿ ಬಾಲಕಿಯನ್ನು ಮರಳಿ ತರಲು ಸಾಧ್ಯವಿಲ್ಲವಾದರೂ, ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಹೋರಾಟದಲ್ಲಿ ನ್ಯಾಯಾಲಯದ ಈ ತೀರ್ಪು ಮಹತ್ವದ ಘಟ್ಟವಾಗಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)


