ಬೆಳಗಾವಿಯ ತಿಳಕವಾಡಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಉದ್ಯಮಿಯೊಬ್ಬರ ಖಾತೆಯಿಂದ ₹1.32 ಕೋಟಿಯನ್ನು ಅನುಮತಿಯಿಲ್ಲದೆ ವರ್ಗಾಯಿಸಿ, ₹86 ಲಕ್ಷಕ್ಕೂ ಹೆಚ್ಚು ಹಣ ಮರಳಿಸದೆ ವಂಚಿಸಿದ ಆರೋಪದಡಿ ಬ್ಯಾಂಕ್‌ನ ಆರು ಅಧಿಕಾರಿಗಳ ವಿರುದ್ಧ ತಿಳಕವಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಳಗಾವಿ(ನ.27) ಖಾತೆದಾರರಿಗೆ ಗಮನಕ್ಕೆ ಬಾರದೆ ₹1.32 ಕೋಟಿಯನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ, ₹86 ಲಕ್ಷಕ್ಕೂ ಅಧಿಕ ಮೊತ್ತವನ್ನು ವಂಚಿಸಿರುವ ಆರೋಪದಡಿ ಕೆನರಾ ಬ್ಯಾಂಕ್‌ನ ಆರು ಅಧಿಕಾರಿಗಳ ವಿರುದ್ಧ ತಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬ್ಯಾಂಕ್‌ ನ ಅಧಿಕಾರಿಗಳು ವಂಚನೆ ಮಾಡಿರುವ ಬಗ್ಗೆ ಖಾನಾಪುರ ತಾಲೂಕಿನ ರುಮೇವಾಡಿ ಕ್ರಾಸ್ ನಿವಾಸಿ, ಶ್ರೀದತ್ತ ಕ್ಯಾಶೋ ಇಂಡಸ್ಟ್ರೀಸ್‌ನ ಮಾಲೀಕ ಸುರೇಶ ಲಕ್ಷ್ಮಣ ಶಿವನಗೇಕರ ಅವರು ದೂರು ನೀಡಿದ್ದಾರೆ.

ವಂಚನೆ ನಡೆದಿದ್ದು ಹೇಗೆ?

ಗೋಡಂಬಿ ಕಾರ್ಖಾನೆ ನಡೆಸುತ್ತಿರುವ ಅವರು, ಉದ್ಯಮದ ಉದ್ದೇಶಕ್ಕಾಗಿ 2024ರ ಫೆಬ್ರವರಿಯಲ್ಲಿ ಬೆಳಗಾವಿಯ ತಿಳಕವಾಡಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ₹2.86 ಕೋಟಿ ಓವರ್‌ಡ್ರಾಫ್ಟ್ ಹಾಗೂ ಟರ್ಮ್ ಲೋನ್ ಪಡೆದಿದ್ದರು. ಅವರ ಬ್ಯಾಂಕ್ ಖಾತೆಯಿಂದ 2023ರ ಅ.31ರಂದು ₹5 ಲಕ್ಷ , 2024ರ ಫೆ.19ರಂದು ₹27.30 ಲಕ್ಷ ಹಾಗೂ ಫೆ.22ರಂದು ಒಂದು ಕೋಟಿ ರು.ಸೇರಿ ಒಟ್ಟು ₹1.32 ಕೋಟಿ ಹಣವನ್ನು ಅವರ ಅನುಮತಿಯಿಲ್ಲದೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದರು.

ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ, ತಪ್ಪಾಗಿ ಬೇರೆ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಶೀಘ್ರವೇ ಮರಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ₹46 ಲಕ್ಷ ಮರುಪಾವತಿಸಿದ್ದು, ಉಳಿದ ₹86.30 ಲಕ್ಷ ಹಣವನ್ನು 2 ವರ್ಷಗಳಿಂದಲೂ ಪಾವತಿಸದೆ ಸತಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೆನರಾ ಬ್ಯಾಂಕ್‌ನ ಆರು ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಈ ಸಂಬಂಧ ಕೆನರಾ ಬ್ಯಾಂಕ್ ನ ತಿಲಕವಾಡಿ ಶಾಖೆಯ ಮಾಜಿ ಮುಖ್ಯ ವ್ಯವಸ್ಥಾಪಕ ನಿರಜಕುಮಾರ ತಿವಾರಿ, ಹುಬ್ಬಳ್ಳಿಯ ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಸ್ವಾಮಿ, ಬೆಳಗಾವಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶ್ರೀವಿದ್ಯಾ, ಮಾಜಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವರಾಮಕೃಷ್ಣ ಹಾಗೂ ಮಾಜಿ ಉಪ ವ್ಯವಸ್ಥಾಪಕ ಕೆ.ವಿಜಯಕುಮಾರ ವಿರುದ್ಧ ಪ್ರಕರಣ ದಾಖಲಾಗಿದೆ.

ಬ್ಯಾಂಕ್ ಅಧಿಕಾರಿಗಳು ಒಳಸಂಚು ರೂಪಿಸಿ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ, ಉಳಿದ ಹಣವನ್ನು ಮರಳಿಸದೆ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.