ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.15): ಖಾಸಗಿ ವ್ಯಕ್ತಿಗಳು ನಡೆಸಿದ ಬೆಳೆ ಸರ್ವೇಗೂ, ಕಂದಾಯ ಇಲಾಖೆ ನಡೆಸಿದ ಬೆಳೆ ಸರ್ವೇಗೆ ತಾಳೆಯಾಗದೆ ಮತ್ತೊಮ್ಮೆ ಸರ್ವೇ ಮಾಡುವಂತೆ ಕಂದಾಯ ಇಲಾಖೆ ಖಾಸಗಿಯವರಿಗೆ ಸೂಚಿಸಿದೆ. ಇದರಿಂದ ಆತಂಕಗೊಂಡ ಸರ್ವೇದಾರರು ಈ ಕಾರ್ಯದಿಂದಲೇ ದೂರವುಳಿದಿದ್ದು ತಹಸೀಲ್ದಾರ್‌ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.

ಏನಿದೆ ಸಮೀಕ್ಷೆ:

ರೈತರು ಯಾವ ಬೆಳೆ ಬೆಳೆದಿದ್ದಾರೆ ಎನ್ನುವುದನ್ನು ಸ್ಥಳದಲ್ಲಿಯೇ (ಹೊಲದಲ್ಲಿ) ಇದ್ದುಕೊಂಡು ಮೊಬೈಲ್‌ ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡಬೇಕು. ಹೀಗೆ ಅಪ್‌ಲೋಡ್‌ ಆಗಿರುವುದು ಬೆಳೆ ವಿಮಾ ಪರಿಹಾರ, ಸರ್ಕಾರದ ಪರಿಹಾರ ಸೇರಿದಂತೆ ಮೊದಲಾದ ಕಾರ್ಯಕ್ರಮಗಳಿಗೆ ಆಧಾರವಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಪ್ರತಿ ಪ್ಲಾಟ್‌ಗೆ 10 ಬೆಳೆ ಸರ್ವೇದಾರರಿಗೆ ನೀಡಲಾಗುತ್ತದೆ. ಹೊಲದಲ್ಲಿ ರೈತರು ಯಾವ ಬೆಳೆ ಬೆಳೆದಿದ್ದಾರೆ ಎಂಬುವುದನ್ನು ಅರಿಯಲು ಮಾಡಿರುವ ಯೋಜನೆಯಾಗಿದೆ.

ತಾಳೆಯಾಗುತ್ತಿಲ್ಲ:

ಈಗಾಗಲೇ ಖಾಸಗಿ ವ್ಯಕ್ತಿಗಳು ಮಾಡಿದ ಸರ್ವೇಗೂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇಗೂ ತಾಳೆಯಾಗುತ್ತಿಲ್ಲ. ರೈತರು ಬೆಳೆದಿರುವ ಬೆಳೆ ಬೇರೆಯಾದರೆ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಬೆಳೆ ಬೇರೆಯಾಗಿದೆ. ಆದರೆ, ಖಾಸಗಿ ಅವರು ಹೇಳುವ ಪ್ರಕಾರ ನಾವು ಸರ್ವೇ ಮಾಡಿದಾಗ ರೈತರು ಅದೇ ಬೆಳೆಯನ್ನು ತೋರಿಸಿದ್ದಾರೆ. ಇದೀಗ ಬೇರೆ ಬೆಳೆದಿದ್ದು ಅದು ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಮತ್ತೊಮ್ಮ ಸರ್ವೇ ಮಾಡಿ:

ಸರ್ವೇ ತಾಳೆಯಾಗದ ಪರಿಣಾಮ ಕಂದಾಯ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಸರ್ವೇ ನಡೆಸುವಂತೆ ಖಾಸಗಿಯವರಿಗೆ ಸೂಚಿಸಿದ್ದಾರೆ. ಆದರೆ, ಈಗಾಗಲೇ ರೈತರು ಮುಂಗಾರು ಬೆಳೆ ಕಟಾವು ಮಾಡಿದ್ದು, ಹಿಂಗಾರು ಬೆಳೆ ಬೆಳೆಯುತ್ತಿದ್ದಾರೆ. ಇದೀಗ ನಾವು ಯಾವ ಬೆಳೆಯನ್ನು ಸರ್ವೇ ಮಾಡಬೇಕು ಎಂದು ಸರ್ವೇದಾರರ ವಾದ.

ಪ್ರಕರಣ ದಾಖಲಿಸಲು ಸೂಚನೆ:

ಸರ್ವೇ ಮಾಡಲು ಸರ್ವೇದಾರರು ಹಿಂದೇಟು ಹಾಕುತ್ತಿರುವುದರಿಂದ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲು ತಹಸೀಲ್ದಾರ್‌ ಜೆ.ಬಿ. ಮಜ್ಜಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಪ್ಪಂದದಂತೆ ಸರ್ವೇ ಮಾಡಿಕೊಡಿ, ಇಲ್ಲವೇ ದೂರು ದಾಖಲಿಸುತ್ತೇವೆ ಎಂದು ಎಚ್ಚರಿಕೆಯನ್ನು ಸರ್ವೇದಾರರಿಗೆ ನೀಡಲಾಗಿದೆ. ಹೀಗಾಗಲೇ ಕಾರತಕಿ ಸರ್ವೇದಾರರನ್ನು ಪೊಲೀಸ್‌ ಠಾಣೆಗೂ ಕರೆಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀವು ನೀಡುವ 10 ಗೆ ಹತ್ತಾರು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಸಂಚರಿಸಿ ಸರ್ವೇ ಮಾಡಲು ಹಾಕುವುದಿಲ್ಲ. ನಮಗೆ ಈ ಕೆಲಸವೇ ಬೇಡ ಎಂದು ಅಧಿಕಾರಿಗಳಿಗೆ ಕೈಮುಗಿಯುತ್ತಿದ್ದಾರೆ. ಬೆಳೆ ಸರ್ವೇ ಮಾಡುವಾಗ ಬೇರೆ ಬೆಳೆ ಇದ್ದರೆ, ರೈತರು ಬೆಳೆ ವಿಮೆ ಪಾವತಿ ಮಾಡುವಾಗ ಬೇರೆ ಬೆಳೆ ತುಂಬುತ್ತಾರೆ. ಇದರಿಂದ ನಾವು ತಪ್ಪಿತಸ್ಥರಾಗುತ್ತಿದ್ದೇವೆ. ಈ ಕೆಲಸವೇ ನಮಗೆ ಬೇಡ ಎಂದು ಹೆಸರು ಹೇಳದ ಬೆಳೆ ಸರ್ವೇದಾರರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಕೊಪ್ಪಳ ತಹಸೀಲ್ದಾರ್‌ ಜೆ.ಬಿ. ಮಜ್ಜಿಗೆ ಅವರು, ಬೆಳೆ ಸರ್ವೇ ಮಾಡುವುದಾಗಿ ಒಪ್ಪಿಕೊಂಡು ಈಗ ಮಾಡದಿದ್ದರೆ ಹೇಗೆ? ಇದರಿಂದ ಸರ್ಕಾರದ ಕೆಲಸಕ್ಕೆ ಅಡ್ಡಿಯಾಗುತ್ತಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.