ಕುಣಿಗಲ್‌ [ಜೂ.29]: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಸಿದ್ದಾಪುರದ ಬಳಿ ಇನ್ನೋವಾ ಕಾರಿನ ಟೈಯರ್‌ ಸ್ಫೋಟಗೊಂಡು ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ 7 ಮಂದಿ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಬೆಂಗಳೂರಿನ ಸಂಜಯ್‌ಗಾಂಧಿ ನಗರದ ಗೌಂಡಮಣಿ (48), ವೀರಮ್ಮ (48), ಸೆಲ್ವಿ (55), ನಾಗಮ್ಮ (58), ನಿರ್ಮಲಾ (46), ಕಾಳಿದಾಸ (48) ಹಾಗೂ ಉಮಾ ಮೃತಪಟ್ಟವರು. ಇವರು ಶುಕ್ರವಾರ ಬೆಳಗ್ಗೆ ಯಡಿಯೂರು ಹೋಬಳಿಯ ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿರುವ ದೇವಾಲಯವೊಂದರಲ್ಲಿ ಪೂಜೆ ಮುಗಿಸಿ ಸಂಜೆ ಬೆಂಗಳೂರಿಗೆ ಆಗಮಿಸುವ ವೇಳೆ ಅಪಘಾತ ನಡೆದಿದೆ. 

ವೀರಮ್ಮ ಮತ್ತು ನಿರ್ಮಲಾ ಒಂದೇ ಕುಟುಂಬದವಾಗಿದ್ದು, ಉಳಿದವರು ಅಕ್ಕಪಕ್ಕದ ಮನೆಯವರಾಗಿದ್ದಾರೆ. ಕಾರಿನಲ್ಲಿ ಚಾಲಕ ಸೇರಿ ಒಟ್ಟು 11 ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ವೇಳೆ 2 ವರ್ಷದ ಮಗುವೊಂದು ಸಣ್ಣ-ಪುಟ್ಟಗಾಯಗಳೊಂದಿಗೆ ಬಚಾವ್‌ ಆಗಿದೆ.