Asianet Suvarna News Asianet Suvarna News

ದೇವ್ರಾಣೆ ಮಾಡಿ ಹೇಳು ಯಾರಿಗೆ ವೋಟು ಹಾಕಿದಿ..!

ಮತದಾರರಿಗೆ ಪ್ರಶ್ನಿಸಿದ ಅಭ್ಯರ್ಥಿಗಳು| ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಲ್ಲಿ ಮತಹಾಕಿ ಬಂದವರನ್ನು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದ ಪರಿಯಿದು| ಕೋವಿಡ್‌ ನಿಯಮ ಪಾಲನೆಯೆ ಇಲ್ಲವೇ ಇಲ್ಲ| 

Candidates Questioning to Voters during Election in Dharwad grg
Author
Bengaluru, First Published Dec 23, 2020, 11:41 AM IST

ಹುಬ್ಬಳ್ಳಿ(ಡಿ.23): ದೇವ್ರಾಣೆ ಮಾಡಿ ಹೇಳು ನೀ ಯಾರಿಗೆ ವೋಟು ಹಾಕಿದಿ ಅಂಥ!. ಇದು ಮಂಗಳವಾರ ನಡೆದ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿ ಬಂದ ಜನರಿಗೆ ಅಭ್ಯರ್ಥಿಗಳು ನಿಂತು ಕೇಳುತ್ತಿದ್ದ ಪರಿ.

ಮತಗಟ್ಟೆಯಿಂದ ನೂರು ಮೀಟರ್‌ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಪ್ರಚಾರ ನಡೆಸುವಂತಿಲ್ಲ. ಆದರೆ, ನೂರು ಮೀಟರ್‌ ದೂರದಲ್ಲೇ ನಿಂತಿದ್ದ ಅಭ್ಯರ್ಥಿಗಳೆಲ್ಲರೂ ಮತದಾರರಿಗೆ ಕೈ ಕೈ ಮುಗಿದು ತಮಗೆ ಮತ ಹಾಕುವಂತೆ ಹೇಳಿ ಕಳುಹಿಸುತ್ತಿದ್ದರು. ಕೆಲವರಂತೂ ತಮಗೆ ನೀಡಿದ್ದ ಚಿಹ್ನೆಯ ವಸ್ತುಗಳನ್ನು ಕೈಗಳಲ್ಲಿ ಹಿಡಿದುಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದರು.

ಇನ್ನೂ ಮತಹಾಕಿ ಬಂದವರಿಗೆ ಹಿಡಿದು ’ಏಯ್‌ ಕಾಕಾ ಯಾರಿಗೆ ಮತ ಹಾಕಿದಿ..’ ಎಂದು ಕೇಳುತ್ತಿದ್ದರು. ಅದಕ್ಕೆ ಮತದಾರರು, ‘ನಿನಗೆ ಹಾಕೇನಿ ಬಿಡು.. ಎಂದು ಸಮಾಜಾಯಿಷಿ ನೀಡಿದರೂ ಸುಮ್ಮನಾಗದೇ ‘ದೇವರಾಣೆ ಮಾಡಿ ಹೇಳು, ತಾಯಿ ಆಣೆ ಮಾಡಿ ಹೇಳು’ ‘ನನ್ನ ಗುರುತು ಯಾವುದೇಳು’ ಅಂತ ಒತ್ತಾಯಿಸಿ ಕೇಳುತ್ತಿದ್ದರು. ಅದಕ್ಕೆ ಕೆಲ ಮತದಾರರು ಸರಿಯಾಗಿ ಉತ್ತರಿಸಿದರೆ, ಕೆಲವರು ತಡಬಡಾಯಿಸುತ್ತಿದ್ದರು. ಹೀಗೆ ತಡಬಡಾಯಿಸುವುದನ್ನು ನೋಡುತ್ತಿದ್ದಂತೆ ‘ಆಯ್ತು ಬಿಡು ನೀ ನನಗೆ ಹಾಕಿಲ್ಲ.. ಗೊತ್ತಾಯ್ತು ನನಗೆ..’ ಎಂದು ಹೇಳಿ ಸ್ವಲ್ಪ ಬೇಸರಿಸಿಕೊಂಡು ಕಳುಹಿಸುತ್ತಿದ್ದರು.

ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆತ್ಮಹತ್ಯೆ

ಈ ಎಲ್ಲ ದೃಶ್ಯಗಳು ಕಲಘಟಗಿ ತಾಲೂಕಿನ ಚಳಮಟ್ಟಿ, ಮಿಶ್ರೀಕೋಟಿ, ದುಮ್ಮವಾಡ ಗ್ರಾಮಗಳ ಮತಗಟ್ಟೆಗಳಲ್ಲಿ ಕಂಡು ಬಂದವು. ಈ ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಬಿರುಸಿನಿಂದಲೇ ನಡೆಯಿತು. ಇನ್ನೂ ಮತದಾರರನ್ನು ಯಾವ ಅಭ್ಯರ್ಥಿಯೂ ವಾಹನದ ಮೂಲಕ ಕರೆತರಬಾರದು ಎಂಬುದು ಜಿಲ್ಲಾಡಳಿತದ ನಿಯಮ. ಆದರೆ, ಎಲ್ಲ ಗ್ರಾಮಗಳಲ್ಲಿ ಟಾಟಾ ಏಸ್‌, ಆಟೋ ರಿಕ್ಷಾ, ಜೀಪ್‌ಗಳ ಮೂಲಕ ಮತದಾರರನ್ನು ಕರೆದುಕೊಂಡು ಬಂದು ಮತಹಾಕಿಸುತ್ತಿದ್ದ ದೃಶ್ಯ ಕಂಡು ಬಂತು.

ಕೋವಿಡ್‌ ಭಯವಿಲ್ಲ

ಇನ್ನೂ ಮಿಶ್ರೀಕೋಟೆ ಸೇರಿದಂತೆ ಎಲ್ಲೆಡೆ ಕೋವಿಡ್‌ ನಿಯಮಗಳನ್ನು ಗ್ರಾಮಸ್ಥರಾರ‍ಯರು ಪಾಲಿಸಲಿಲ್ಲ. ಭದ್ರತಾ ಸಿಬ್ಬಂದಿಯೂ ಯಾರನ್ನು ತಡೆಯುವ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ, ಕಡ್ಡಾಯವಾಗಿ ಎಲ್ಲೆಡೆ ಥರ್ಮಲ್‌ ಸ್ಕಾ್ಯನಿಂಗ್‌ ಮೂಲಕ ಆರೋಗ್ಯ ತಪಾಸಣೆ ಮಾತ್ರ ನಡೆಯುತ್ತಿತ್ತು. ಮಾಸ್ಕ್‌ ಇಲ್ಲದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಗುಂಪು ಗುಂಪಾಗಿ ಜನರು ಆಗಮಿಸಿ ಮತಚಲಾಯಿಸಿದ್ದು ಕಂಡು ಬಂತು. ಕೆಲವೆಡೆ ಪೊಲೀಸರು ಮಾಸ್ಕ್‌ ಹಾಕಿಕೊಳ್ಳಿ ಎಂದರೆ ಸೀರೆಯ ಸೆರಗನ್ನೇ ಮಹಿಳೆಯರು ಮೂಗಿಗೆ ಕಟ್ಟಿಕೊಂಡರೆ, ಪುರುಷರು, ‘ಏನು ಆಗಲ್ಲ ಬಿಡಿ ಸಾರ್‌..’ ಎಂದು ಹೇಳುತ್ತಾ ಒಳಗೆ ತೆರಳುತ್ತಿದ್ದರು.

Follow Us:
Download App:
  • android
  • ios