ಬೆಳಗಾವಿ(ಮಾ.17): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ 222 ಹುದ್ದೆಗಳಿಗೆ ಕೆಪಿಎಸ್‌ಸಿ ಮೂಲಕ ನೇಮಕವಾಗಿದ್ದರೂ ಇನ್ನೂ ನೇಮಕಾತಿ ಆದೇಶ ನೀಡದಿರುವ ಸರ್ಕಾರದ ವಿಳಂಬ ನೀತಿ ಖಂಡಿಸಿ ನೇಮಕವಾದ ಅಭ್ಯರ್ಥಿಗಳು ಕಳೆದ ಮೂರು ದಿನಗಳಿಂದ ಸಚಿವ ಶ್ರೀಮಂತ ಪಾಟೀಲ ಅವರ ಬೆಂಗಳೂರು ನಿವಾಸದೆದುರು ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಭಾಗಗಳ ಅಭ್ಯರ್ಥಿಗಳು ಧರಣಿ ನಡೆಸುತ್ತಿದ್ದಾರೆ.

ಕೆಪಿಎಸ್‌ಸಿ ಮೂಲಕ ಈಗಾಗಲೇ 222 ಹುದ್ದೆಗಳನ್ನು ನೇಮಿಸಿಕೊಂಡು ಈಗಾಗಲೇ ಒಂದು ವರ್ಷ ಪೂರೈಸಲಾಗಿದೆ. ಮಾತ್ರವಲ್ಲ, ಈ ನೇಮಕಾತಿಯ ಕಾಲಾವಧಿ ಕೂಡ ಮುಗಿಯುವ ಹಂತಕ್ಕೂ ಬಂದು ತಲುಪಿದೆ. ಇಷ್ಟಾಗಿದ್ದರೂ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಆದೇಶ ಪ್ರತಿ ನೀಡಿಲ್ಲ. ಆರ್ಥಿಕ ಇಲಾಖೆಯವರು ನೇಮಕವಾದವರಿಗೆ ಆದೇಶ ನೀಡಲು ಇನ್ನೂ ಸಮ್ಮತಿಸದಿರುವುದೇ ಕಾರಣವಾಗಿದೆ ಎಂದು ದೂರಿರುವ ಅಭ್ಯರ್ಥಿಗಳು, ಬೇರೆ ಬೇರೆ ಇಲಾಖೆಯಲ್ಲಿರುವ ಸುಮಾರು 7500 ವಿವಿಧ ಹುದ್ದೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಕೇವಲ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 222 ವಿವಿಧ ಹುದ್ದೆಗಳಿಗೆ ಇನ್ನೂ ಅನುಮತಿ ನೀಡದಿರುವುದು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಎಂಇಎಸ್‌ ಯುವಕನ ವಿಡಿಯೋ ವೈರಲ್ : ಭಾರೀ ಆಕ್ರೋಶ

2017ರಲ್ಲಿ ಅಧಿಸೂಚನೆ ಹೊರಡಿಸಿದ್ದ ಕೆಪಿಎಸ್‌ಸಿ 2020ರಲ್ಲಿ ನೇಮಕಾತಿ ಅಂತಿಮ ಅಧಿಸೂಚನೆ ಹೊರಡಿಸಿತು. ಆದರೆ, ಈ ವೇಳೆ ಕೊರೋನಾ ಹಿನ್ನೆಲೆಯಲ್ಲಿ 2020 ಜುಲೈನಲ್ಲಿ ಮುಂದಿನ ಆರ್ಥಿಕ ವರ್ಷದವರೆಗೆ ಯಾವುದೇ ನೇಮಕಾತಿಯ ಹಂತಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂದು ಹೇಳಿತು. ಇದೇ ಕಾರಣಕ್ಕೆ ಆರ್ಥಿಕ ಇಲಾಖೆ ನಮಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಈಗಾಗಲೇ ಸರ್ಕಾರವು 1203 ಪಿಯು ಉಪನ್ಯಾಸಕರು, ಪೊಲೀಸ್‌ಇಲಾಖೆಯ 2000ಕ್ಕಿಂತ ಅಧಿಕ ನೇಮಕ ಅಭ್ಯರ್ಥಿಗಳು, ಕರ್ನಾಟಕ ವಸತಿ ಶಿಕ್ಷಣ ಸಂಘಕ್ಕೆ ಆಯ್ಕೆಯಾಗಿರುವ 600ಕ್ಕೂ ಹೆಚ್ಚು ಜನರಿಗೆ ಆದೇಶ ಪ್ರತಿ ಕೊಟ್ಟಿದ್ದಾರೆ. ಆದರೆ, ನಮಗೆ ಆದೇಶ ಕೊಡಲು ಮೀನಮೇಶ ಎಣಿಸುತ್ತಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿಯಾಗಿ ನೇಮಕವಾಗಿರುವ ಅಭ್ಯರ್ಥಿ ಶಿವಾನಂದ ಪಟ್ಟಣ ಶೆಟ್ಟಿ ಹೇಳಿದ್ದಾರೆ.