ರೈತರ ಪಂಪ್ ಸೆಟ್‌ಗಳ ಉಚಿತ ಮೂಲ ಸೌಕರ್ಯ ಯೋಜನೆ ರದ್ದು
ರೈತರ ಪಂಪ್‌ಸೆಟ್‌ಗಳಿಗೆ ಟಿಸಿ ಮತ್ತಿತರ ಮೂಲ ಸೌಕರ್ಯಗಳನ್ನು ಉಚಿತವಾಗಿ ಅಳವಡಿಸುವ ಯೋಜನೆಯನ್ನು ಸರ್ಕಾರ ರದ್ದುಗೊಳಿಸಲು ನಿರ್ಧರಿಸಿರುವುದನ್ನು ಖಂಡಿಸಿ ಗುರುವಾರ ರೈತ ಸಂಘದ ಸದಸ್ಯರು ಪ್ರತಿಭಟಿಸಿದರು.
ಹುಣಸೂರು : ರೈತರ ಪಂಪ್‌ಸೆಟ್‌ಗಳಿಗೆ ಟಿಸಿ ಮತ್ತಿತರ ಮೂಲ ಸೌಕರ್ಯಗಳನ್ನು ಉಚಿತವಾಗಿ ಅಳವಡಿಸುವ ಯೋಜನೆಯನ್ನು ಸರ್ಕಾರ ರದ್ದುಗೊಳಿಸಲು ನಿರ್ಧರಿಸಿರುವುದನ್ನು ಖಂಡಿಸಿ ಗುರುವಾರ ರೈತ ಸಂಘದ ಸದಸ್ಯರು ಪ್ರತಿಭಟಿಸಿದರು.
ಪಟ್ಟಣದ ಸಂವಿಧಾನ ವೃತ್ತದಿಂದ ರೈತ ಸಂಘ ಮತ್ತು ಹಸಿರುಸೇನೆ (ಪ್ರೊ. ನಂಜುಂಡಸ್ವಾಮಿ ಬಣ)ಯ ಸದಸ್ಯರು ಪ್ರತಿಭಟನಾ ಮೆರವಣಿಗೆ ಅರಂಭಿಸಿ ತಾಲೂಕು ಕಚೇರಿಯ ಆವರಣದಲ್ಲಿ ಜಮಾವಣೆಗೊಂಡರು.
ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆಗಳನ್ನು ಮೊಳಗಿಸಿದರು.
ಸಂಘದ ತಾಲೂಕು ಅಧ್ಯಕ್ಷ ಮೋದೂರು ಮಹೇಶ್ ಮಾತನಾಡಿ, ಈಗಾಗಲೇ ರೈತರು ಬರಗಾಲದ ಭೀಕರತೆಗೆ ನಲುಗುತ್ತಿದ್ದಾರೆ. ಈರುಳ್ಳಿ ಸೇರಿದಂತೆ ದಿನನಿತ್ಯದ ವಸ್ತುಗಳು ಬೆಲೆ ಗಗನಕ್ಕೇರಿದೆ. ಇಂತಹ ಕಠಿಣ ಪರಿಸ್ಥಿತಿಯ ವೇಳೆಯಲ್ಲಿ ಸರ್ಕಾರ ರೈತರ ಮೇಲೆ ಗದಾಪ್ರಹಾರ ನಡೆಲು ಹೊರಟಿದೆ. ಜನರಿಗೆ ಅಗತ್ಯವಿಲ್ಲದ ಗ್ಯಾರಂಟಿ ಯೋಜನೆಗಳ ಜಾರಿಗೆ ಒದ್ದಾಡುತ್ತಿರುವ ರಾಜ್ಯ ಸರ್ಕಾರ ರೈತರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ. ರೈತರ ಪಂಪ್ಸೆಟ್ ಗಳಿಗೆ ಟಿಸಿ ಅಳವಡಿಕೆಗೆ ಈ ಹಿಂದೆ ನೀಡುತ್ತಿದ್ದ ಎಲ್ಲ ಉಚಿತ ಮೂಲ ಸೌಕರ್ಯಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿರುವುದು ಖಂಡನೀಯ. ರೈತ ಸಂಸ್ಕೃತಿಯ ನಾಶಕ್ಕೆ ಈ ಸರ್ಕಾರ ಹೊರಟಂತಿದೆ. ಪಂಪ್ ಸೆಟ್ ಗಳಿಗೆ ಸರಬರಾಜಾಗುತ್ತಿದ್ದ ವಿದ್ಯುತ್ ಅವಧಿಯನ್ನು ಎರಡು ಗಂಟೆ ಕಡಿತಗೊಳಿಸಿದ್ದಲ್ಲದೇ, ರಾತ್ರಿ ವೇಳೆ ಮಾತ್ರ ಸರಬರಾಜು ಮಾಡುತ್ತಿರುವುದು ರೈತರ ಜೀವಕ್ಕೆ ಬೆಲೆಯಿಲ್ಲವೆನ್ನುವ ಸಂದೇಶ ಸರ್ಕಾರ ನೀಡುತ್ತಿದೆ.
ಈ ಕೂಡಲೇ ಸರ್ಕಾರ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ರೈತಪರ ನಿಲುವು ತಳೆಯುವುದು ಸೂಕ್ತ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘವು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಂ. ಕೃಷ್ಣೇಗೌಡ, ಗೌರವಾಧ್ಯಕ್ಷ ರಾಜಣ್ಣ, ನಿಂಗಮ್ಮ, ರೂಪ, ಮಹೇಂದ್ರ, ಪ್ರಮೋದ್, ಸಿದ್ದಮ್ಮ, ಸೋಮನಾಯಕ, ಸ್ವಾಮಿ, ಚಲುವಯ್ಯ ಇದ್ದರು.