ವರದಿ : ಆತ್ಮಭೂಷಣ್‌ ಮಂಗಳೂರು

ಮಂಗಳೂರು (ಅ.12):  ಕಾಸರಗೋಡು ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆ ಅಡಕೆಯ ಖರೀದಿಗೆ ಈಗ ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ, ಬೆಳೆಗಾರರ ಮನೆಗೆ ಧಾವಿಸುತ್ತಿದೆ!

ಕ್ಯಾಂಪ್ಕೋ ಆನ್‌ ವೀಲ್‌ ಯೋಜನೆಯಡಿ ಅಪೇಕ್ಷಿಸಿದ ಬೆಳೆಗಾರರ ಬಳಿಗೆ ತೆರಳಿ ಅಡಕೆ ಖರೀದಿಸುತ್ತಿದೆ. ಈ ಕಾಲದ ಅವಶ್ಯಕತೆಗೆ ಅನುಗುಣವಾಗಿ ಕ್ಯಾಂಪ್ಕೋ ತನ್ನ ಅಡಕೆ ಖರೀದಿ ನೀತಿಯನ್ನು ಬದಲಾಯಿಸುತ್ತಿದೆ. ಕ್ಯಾಂಪ್ಕೋದ ಈ ಯೋಜನೆಯಿಂದ ಮನೆಗಳಿಗೆ ತೆರಳಿ ಅಡಕೆ ಖರೀದಿಸುವ ಖಾಸಗಿ ಖರೀದಿದಾರರಿಗೆ ಹಾಗೂ ದಲ್ಲಾಳಿಗಳಿಗೆ ತೀವ್ರ ಹೊಡೆತ ಬಿದ್ದಂತಾಗಿದೆ. ಇದು ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಹಿಡಿತ ಇನ್ನಷ್ಟುಬಲಗೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಪಾನ್‌ ಮಸಾಲಾ ಬ್ಯಾನ್‌ : ಅಡಕೆ ಬೆಳೆಗಾರರಿಗೆ ಕಾದಿದ್ಯಾ ಆಘಾತ ...

ಈಗಾಗಲೇ ಕ್ಯಾಂಪ್ಕೋ ಪ್ರಾಯೋಗಿಕವಾಗಿ ಪುತ್ತೂರು, ವಿಟ್ಲ ವ್ಯಾಪ್ತಿಯಲ್ಲಿ ಬೆಳೆಗಾರರ ಮನೆಗೆ ತೆರಳಿ ಅಡಕೆ ಖರೀದಿಸುತ್ತಿದೆ. ಇದಕ್ಕೆ ಬೆಳೆಗಾರರಿಂದ ವ್ಯಾಪಕ ಸ್ಪಂದನೆಯೂ ವ್ಯಕ್ತವಾಗುತ್ತಿದೆ.

* ಕರೆ ಮಾಡಿದ್ರೆ ಮನೆಗೇ ಬರ್ತಾರೆ ಸಿಬ್ಬಂದಿ

ಅಡಕೆ ಮಾರಾಟ ಮಾಡಲು ಇಚ್ಛಿಸುವ ಬೆಳೆಗಾರರು ಸಮೀಪದ ಕ್ಯಾಂಪ್ಕೋ ಶಾಖೆಗೆ ಕರೆ ಮಾಡಿದರೆ ಸಾಕು, ಕ್ಯಾಂಪ್ಕೋ ಸಿಬ್ಬಂದಿ ಮನೆಗೆ ಹಾಜರಾಗುತ್ತಾರೆ. ಅಲ್ಲೇ ಅಡಕೆಗೆ ದರ ನಿಗದಿಪಡಿಸಿ, ತೂಕ ಮಾಡಿ ವಾಹನದಲ್ಲಿ ಕ್ಯಾಂಪ್ಕೋ ಶಾಖೆಗೆ ತೆಗೆದುಕೊಂಡು ಹೋಗುತ್ತಾರೆ. ಬಳಿಕ ಮಾರಾಟದ ಮೊತ್ತವನ್ನು ನೇರ ಬೆಳೆಗಾರರ ಖಾತೆಗೆ ಜಮೆ ಮಾಡುತ್ತಾರೆ. ಅವಶ್ಯಕತೆ ಇದ್ದರೆ ನಗದು ರೂಪದಲ್ಲೂ ಪಾವತಿಸುತ್ತಾರೆ. ಅಡಕೆ ಸಾಗಾಟಕ್ಕೆ ಸಣ್ಣ ಪ್ರಮಾಣದ ಸಾಗಾಟ ವೆಚ್ಚ ಪಡೆಯುತ್ತಾರೆ.

ನೇರವಾಗಿ ಕ್ಯಾಂಪ್ಕೋ ಸಿಬ್ಬಂದಿಯೇ ಮನೆಗೆ ಆಗಮಿಸುವ ಕಾರಣ ಇಲ್ಲಿ ಅಡಕೆ ಬೆಲೆ ವಿಚಾರದಲ್ಲಿ ಬೆಳೆಗಾರರನ್ನು ವಂಚಿಸಲು ಸಾಧ್ಯವಾಗದು. ದಲ್ಲಾಳಿ ಅಥವಾ ಖಾಸಗಿ ಖರೀದಿದಾರರಂತೆ ಇಲ್ಲಿ ಬೆಳೆಗಾರರಿಗೆ ಯಾವುದೇ ವಿಳಂಬ ಅಥವಾ ಅನ್ಯಾಯ ಆಗುವುದಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತದೆ ಕ್ಯಾಂಪ್ಕೋ.

ಕರಾವಳಿಯುದ್ದಕ್ಕೂ ಕ್ಯಾಂಪ್ಕೋ 155 ನೇರ ಹಾಗೂ ಉಪ ಖರೀದಿ ಕೇಂದ್ರಗಳನ್ನು ಹೊಂದಿದೆ. ಪ್ರಸ್ತುತ ಸುಮಾರು 1.15 ಲಕ್ಷ ಮಂದಿ ಅಡಕೆ ಬೆಳೆಗಾರ ಸದಸ್ಯರಿದ್ದಾರೆ. ಕ್ಯಾಂಪ್ಕೋ ಶಾಖೆಗಳಲ್ಲೂ ಖರೀದಿ ಕೇಂದ್ರ ತೆರೆದಿರುತ್ತದೆ. ಬೆಳೆಗಾರರ ಮನೆ ಬಾಗಿಲಿಗೆ ಕ್ಯಾಂಪ್ಕೋ ತೆರಳುವುದರಿಂದ ಖರೀದಿ ಕೇಂದ್ರದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.

ಯಾಕಾಗಿ ಕ್ಯಾಂಪ್ಕೋ ಆನ್‌ ವೀಲ್‌?

ಖಾಸಗಿ ದಲ್ಲಾಳಿ ಹಾಗೂ ಖರೀದಿದಾರರು ಬಹಳ ಹಿಂದಿನಿಂದಲೇ ಬೆಳೆಗಾರರ ಮನೆಗೆ ತೆರಳಿ ಅಡಕೆ ಖರೀದಿಸುತ್ತಿದ್ದರು. ಆದರೆ ಸಹಕಾರಿ ಸಂಸ್ಥೆಯೊಂದು ಮನೆಗೆ ತೆರಳಿ ಅಡಕೆ ಖರೀದಿಸುವುದು ಇದೇ ಮೊದಲು. ಮುಖ್ಯವಾಗಿ ತರುಣ ಪೀಳಿಗೆ ಇನ್ನೂ ಪರಿಪೂರ್ಣವಾಗಿ ಅಡಕೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿಲ್ಲ. ಎಲ್ಲವನ್ನೂ ಈಗಲೂ ಮನೆಯ ಹಿರಿಯರೇ ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಡಿಗೆ ವಾಹನ ಗೊತ್ತುಪಡಿಸಿ ಅಡಕೆ ಮಾರುಕಟ್ಟೆಗೆ ತರಬೇಕು. ಇಂದಿನ ದಿನಗಳಲ್ಲಿ ಕೆಲಸಗಾರರ ಕೊರತೆಯೂ ಕಾಡುತ್ತಿದೆ. ಹಿರಿಯ ನಾಗರಿಕರಿಗೆ ಮಾರುಕಟ್ಟೆಗೆ ಧಾವಿಸುವುದು ಸುಲಭವಲ್ಲ. ಈ ತೊಂದರೆಯನ್ನು ತಪ್ಪಿಸಲು, ಬೆಳೆಗಾರರಿಗೆ ನ್ಯಾಯಯುತ ದರ ನೀಡುವಂತಾಗಲು ಕ್ಯಾಂಪ್ಕೋ ಆನ್‌ ವೀಲ್‌ ಕಾರ್ಯರೂಪಕ್ಕೆ ಬರುತ್ತಿದೆ. ಸದ್ಯ ಅಡಕೆ ಮಾತ್ರ ವಿಕ್ರಯಿಸಲಾಗುತ್ತಿದೆ. ಮುಂದೆ ಇದು ಯಶಸ್ವಿಯಾದರೆ, ಇತರೆ ಕೃಷ್ಯುತ್ಪನ್ನಗಳಿಗೂ ವಿಸ್ತರಣೆಯಾಗುವ ಸಂಭವ ಇದೆ.