ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌(ಸ್ಪಾ್ಯನ್‌)ಗಳ ನಡುವೆ ಹೊಸದಾಗಿ 240 ಕೇಬಲ್‌ ಅಳವಡಿಕೆ ಕಾರ್ಯ ವಾರದಲ್ಲಿ ಆರಂಭವಾಗಲಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಮೇ.29): ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌(ಸ್ಪಾ್ಯನ್‌)ಗಳ ನಡುವೆ ಹೊಸದಾಗಿ 240 ಕೇಬಲ್‌ ಅಳವಡಿಕೆ ಕಾರ್ಯ ವಾರದಲ್ಲಿ ಆರಂಭವಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಕರೆದಿದ್ದ ಟೆಂಡರ್‌ನಲ್ಲಿ ಪಾಲ್ಗೊಂಡು ಬಿಡ್‌ ಪಡೆದಿದ್ದ ಪ್ರೆಸಿನೇಟ್‌ ಕಂಪನಿಯು ಮಧ್ಯಪ್ರದೇಶದ ಭೋಪಾಲ್‌ನಿಂದ ಮೊದಲ ಹಂತದಲ್ಲಿ 25 ಟನ್‌ ಕೇಬಲ್‌ ತರಿಸಿದ್ದು, ಮೇ 27ರಂದೇ ಕೇಬಲ್‌ ಕಾಯಿಲ್‌ಗಳು ರಾಜಧಾನಿ ತಲುಪಿವೆ. ಈ ಕೇಬಲ್‌ ಅನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯು ಕೆಮಿಕಲ್‌ ಅನಾಲಿಸಿಸ್‌, ಮೆಕ್ಯಾನಿಕಲ್‌ ಸ್ಟೆ್ರಂಥ್‌ ಸೇರಿದಂತೆ ಹಲವು ಪರೀಕ್ಷೆಗೆ ಒಳಪಡಿಸಲಿದ್ದು ಬಳಿಕವಷ್ಟೇ ಅಳವಡಿಕೆಗೆ ಚಾಲನೆ ಸಿಗಲಿದೆ.

ಪ್ರೆಸಿನೇಟ್‌ ಕಂಪನಿಯ ಇಂಜನಿಯರ್‌ಗಳು ಭೋಪಾಲ್‌ಗೆ ತೆರಳಿ ಕೇಬಲ್‌ನ ಕ್ಷಮತೆ ಪರೀಕ್ಷಿಸಿ ಬಳಿಕ ನಗರಕ್ಕೆ ಕೇಬಲ್‌ ತರಿಸಿದ್ದರೂ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಪುನಃ ಹಲವು ಪರೀಕ್ಷೆಗಳನ್ನು ನಡೆಸಲಿದ್ದಾರೆ. ಎಲ್ಲ ಪರೀಕ್ಷೆಗಳಲ್ಲೂ ಸಕಾರಾತ್ಮಕ ಫಲಿತಾಂಶ ಬಂದ ಬಳಿಕವಷ್ಟೇ ಕೇಬಲ್‌ ಅನುಮತಿಗೆ ಒಪ್ಪಿಗೆ ನೀಡಲಿದ್ದಾರೆ. ಕೇಬಲ್‌ನ ಭಾರ ತಡೆದುಕೊಳ್ಳುವ ಸಾಮರ್ಥ್ಯ, ಬಿರುಕು ಬಿಡದ ಗುಣ ಮತ್ತಿತರ ಅಂಶಗಳು ಪರೀಕ್ಷೆಯಲ್ಲಿ ತಿಳಿದುಬರಲಿವೆ.

ಮೆಟ್ರೋ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ: ಹೀಗಾದರೆ ಕಾಮಗಾರಿ ನಿಗದಿತ ಅವಧಿಗೆ ಪೂರ್ಣ ಕಷ್ಟ

ಮೂರು ಭಾರಿ ಲೋಡ್‌ ಟೆಸ್ಟ್‌: ಮೇ 29ರಂದು ಪ್ರೆಸಿನೇಟ್‌ ಕಂಪನಿಯ ಎಂಜಿನಿಯರ್‌ಗಳು, ತಾವು ಕೇಬಲ್‌ ಬದಲಾವಣೆ ಪ್ರಕ್ರಿಯೆಯನ್ನೂ ಹೇಗೆಲ್ಲಾ ಮಾಡಲಿದ್ದೇವೆ ಎಂಬುದನ್ನು ಮೇಲುಸ್ತುವಾರಿ ವಹಿಸಿರುವ ಭಾರತೀಯ ವಿಜ್ಞಾನ ಸಂಸ್ಥೆಗೆ ವಿವರಣೆ ನೀಡಲಿದ್ದಾರೆ. ಕೇಬಲ್‌ ಅಳವಡಿಕೆಗೂ ಮುನ್ನ ಪಿಲ್ಲರ್‌, ಪಿಲ್ಲರ್‌ಗಳ ನಡುವಿನ ಪ್ಯಾಸೇಜ್‌ನಲ್ಲಿ ಏನಾದರೂ ಬಿರುಕು ಉಂಟಾಗಿದೆಯೇ ಎಂಬುದನ್ನು ಕಂಪನಿ ಪರೀಕ್ಷಿಸಬೇಕಿದೆ. ಜೊತೆಗೆ ಪ್ಯಾಸೇಜ್‌ನಲ್ಲಿ ಕಸ ಕಡ್ಡಿ ಇದ್ದರೆ ಅದನ್ನೂ ತೆರವುಗೊಳಿಸಬೇಕಿದೆ.

ಇದೆಲ್ಲಾ ಪ್ರಕ್ರಿಯೆಗೂ ಮುನ್ನ ಭಾರತೀಯ ವಿಜ್ಞಾನ ಸಂಸ್ಥೆಯ ಎಂಜಿನಿಯರ್‌ಗಳು ಮೇಲ್ಸೇತುವೆಯ ಸಾಮರ್ಥ್ಯ ಪರೀಕ್ಷಿಸಲು ‘ಲೋಡ್‌ ಟೆಸ್ಟ್‌’ ನಡೆಸಲಿದ್ದಾರೆ. ಬಳಿಕ ಕೇಬಲ್‌ ಅಳವಡಿಕೆ ಆರಂಭವಾಗಲಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ್ತೊಮ್ಮೆ ಲೋಡ್‌ ಟೆಸ್ಟ್‌ ನಡೆಯಲಿದೆ. 240 ಕೇಬಲ್‌ ಅಳವಡಿಕೆ ಪೂರ್ಣಗೊಂಡ ಬಳಿಕ ಇನ್ನುಳಿದ 1200 ಕೇಬಲ್‌ ಅಳವಡಿಸಿದ ಬಳಿಕವೂ ಪುನಃ ಲೋಡ್‌ ಟೆಸ್ಟ್‌ ನಡೆಯಲಿದೆ.

ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆಜಿ ಫ್ಯಾಕ್ಟರಿವರೆಗೂ 5 ಕಿ.ಮೀ. ಉದ್ದದಲ್ಲಿ ನಿರ್ಮಿಸಿರುವ ಈ ಮೇಲ್ಸೇತುವೆಯ ಮೂಲಕ ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳಿಗೆ ಸಂಚರಿಸಬಹುದಾಗಿದೆ. 8ನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103ನೇ ಪಿಲ್ಲರ್‌ ನಡುವಿನ 3 ಕೇಬಲ್‌ ಬಾಗಿದ್ದರಿಂದ 2021ರ ಡಿಸೆಂಬರ್‌ ಕೊನೆಯ ವಾರದಲ್ಲಿ ಮೇಲ್ಸೇತುವೆಯಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಬಳಿಕ 2022 ಫೆಬ್ರವರಿಯಿಂದ ಲಘು ವಾಹನಗಳಿಗೆ ಸಂಚರಿಸಲು ಅವಕಾಶ ನೀಡಲಾಗಿತ್ತು. ಸದ್ಯ ಬೆಳಗ್ಗೆ 5ರಿಂದ ರಾತ್ರಿ 12ರವರೆಗೂ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ.

ಚುನಾವಣೆಯ ವೇಳೆ ಹೇಳಿದ ರೀತಿಯಲ್ಲಿ ಗ್ಯಾರಂಟಿ ಜಾರಿ ಇಲ್ಲ: ಸಚಿವ ರಾಜಣ್ಣ

ಮಧ್ಯಪ್ರದೇಶದ ಭೋಪಾಲ್‌ನಿಂದ ಶನಿವಾರವಷ್ಟೇ 25 ಟನ್‌ ಕೇಬಲ್‌ ನಗರಕ್ಕೆ ಬಂದಿದೆ. ಪೀಣ್ಯ ಮೇಲ್ಸೇತುವೆಯ ಸಾಮರ್ಥ್ಯ ಪರೀಕ್ಷಿಸಲು ‘ಲೋಡ್‌ ಟೆಸ್ಟ್‌’ ನಡೆಸಿದ ಬಳಿಕ ವಾರದಲ್ಲಿ ಕೇಬಲ್‌ ಬದಲಾವಣೆ ಪ್ರಕ್ರಿಯೆ ಆರಂಭವಾಗಲಿದೆ.
-ಡಾ.ಚಂದ್ರ ಕಿಶನ್‌, ಐಐಎಸ್‌ಸಿ ತಜ್ಞ