ಮತ್ತೆ ಮುನ್ನೆಲೆಗೆ ಬಂದ ಕಪ್ಪತಗುಡ್ಡ ಮೈನಿಂಗ್ ವಿಚಾರ: ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ..?
ಕಪ್ಪತಗುಡ್ಡದಲ್ಲಿದೆ ಅಪಾರವಾದ ಖನಿಜ ಸಂಪತ್ತು| ಇಲ್ಲಿ ಗಣಿಗಾರಿಕೆ ನಡೆಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು| ಹಲವು ಹೋರಾಟಕ್ಕೆ ಮಣಿದಿದ್ದ ಅಂದಿನ ಸಿದ್ದರಾಮಯ್ಯ ಸರ್ಕಾರ| 24 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವನ್ನು ವನ್ಯಧಾಮ ಎಂದು ಘೋಷಣೆ ಮಾಡಿದ್ದ ಸಿದ್ದು ಸರ್ಕಾರ|
ಬಳ್ಳಾರಿ/ಗದಗ(ಮೇ.28): ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ಮಾಡಲು ಸದ್ದಿಲ್ಲದೇ ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಹೌದು, ಇಂದು(ಗುರುವಾರ) ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕಪ್ಪತಗುಡ್ಡ ವಿವಾದಾಸ್ಪದ ಮೈನಿಂಗ್ ವಿಚಾರ ಮತ್ತೆ ಮುನ್ನೆಲೆಗೆ ಬರಲು ಸಿದ್ಧವಾಗುತ್ತಿದೆ.
ಕಪ್ಪತಗುಡ್ಡದಲ್ಲಿ ಅಪಾರವಾದ ಖನಿಜ ಸಂಪತ್ತು ಇರುವ ಹಿನ್ನೆಲೆಯಲ್ಲಿ ಇಲ್ಲಿ ಗಣಿಗಾರಿಕೆ ನಡೆಸಲು ಈ ಹಿಂದೆ ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಆದರೆ ಹಲವು ಹೋರಾಟದ ಬಳಿಕ ಮಣಿದ ಅಂದಿನ ಸಿದ್ದರಾಮಯ್ಯ ಸರ್ಕಾರ 24 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವನ್ನು ವನ್ಯಧಾಮ ಎಂದು ಘೋಷಣೆ ಮಾಡಿತ್ತು. (ಒಟ್ಟು 70 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ಇದೆ).
'ಕಪ್ಪತಗುಡ್ಡದ ಮೇಲೆ ಬಿಜೆಪಿ ವಕ್ರ ದೃಷ್ಟಿ ಬಿದ್ದಿದೆ'
ಇದೀಗ ವನ್ಯಜೀವಿಧಾಮ ಎಂದು ಘೋಷಿಸಿದ ಅಧಿಸೂಚನೆಯನ್ನೇ ಡಿನೋಟಿಫೈ ಮಾಡುವಂತೆ ಕಡತವೊಂದು ಸರ್ಕಾರದ ಮುಂದೆ ಬಂದಿದೆ ಎನ್ನಲಾಗುತ್ತಿದೆ. ಇದಕ್ಕೆ ಬಳ್ಳಾರಿ ಮೂಲದ ಗಣಿ ಕಂಪನಿಯೊಂದು ಸರ್ಕಾರದ ಮೇಲೆ ಭಾರಿ ಒತ್ತಡ ಹಾಕುತ್ತಿದೆ. ಇದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ.
'ಯಡಿಯೂರಪ್ಪ ಮಾತು ತಪ್ಪಿದರೆ ಉಗ್ರ ಹೋರಾಟ'
ಈ ಹಿಂದೆ ಕಪ್ಪತಗುಡ್ಡದಲ್ಲಿ ಮೈನಿಂಗ್ ವಿರೋಧಿಸಿ ಗದಗದ ತೋಂಟದಾರ್ಯ ಶ್ರೀಗಳು ಸೇರಿದಂತೆ ಹಲವು ಪರಿಸರ ವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅಂದಿನ ಸರ್ಕಾರ ಈ ವಿಚಾರವನ್ನ ಕೈಬಿಟ್ಟಿತ್ತು. ಇಂದು ನಡೆಯಲಿರುವ ಸಚಿವ ಸಂಪುಟದ ಅಜೆಂಡಾದಲ್ಲಿ ಈ ವಿಷಯ ಇಲ್ಲದೇ ಇದ್ರೂ ಅನೌಪಚಾರಿಕ ಚರ್ಚೆ ನಡೆಸಲಾಗುತ್ತದೆ. ಒಂದು ವೇಳೆ ಸರ್ಕಾರ ಡಿನೋಟಿಫೈ ಮಾಡಿದ್ರೂ ಕೂಡ ರಾಜ್ಯ ಮತ್ತು ಕೇಂದ್ರದ ವನ್ಯಜೀವಿ ನಿಗಮದಿಂದ ಅನುಮತಿ ಪಡೆಯಬೇಕಾಗುತ್ತದೆ.