ರೋಣ(ಅ.3): ಕಪ್ಪತ್ತಗುಡ್ಡಕ್ಕೆ ವನ್ಯಜೀವಿ ಸ್ಥಾನ ಬೇಡವೆಂದು ಶಾಸಕ ಕಳಕಪ್ಪ ಬಂಡಿ ಅವರು ನೀಡಿರುವ ಹೇಳಿಕೆ ತೀವ್ರ ಕಳವಳಕಾರಿ ಸಂಗತಿ ಆಗಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.\

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವನ್ಯಜೀವಿ ಸ್ಥಾನ ನೀಡಿರುವುದರಿಂದ ಅರಣ್ಯ ಇಲಾಖೆ ಮತ್ತು ಪೊಲೀಸ್‌ ಅಧಿಕಾರಿಗಳು ಆಡು, ಕುರಿ, ಗೋವು ಸೇರಿದಂತೆ ಜಾನುವಾರು ಮೇಯಿಸಲು ಬೀಡುತ್ತಿಲ್ಲ ಎಂಬ ಕಾರಣ ನೀಡಿ, ಇಂತಹ ಪರಿಸರ ಹೇಳಿಕೆ ನೀಡುವುದು ಸಮಂಜಸವಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕಪ್ಪತ್ತಗುಡ್ಡದಲ್ಲಿ ವಿವಿಧ ಪ್ರಾಣಿ ಪಕ್ಷಿ ಪ್ರಭೇದಗಳು, ವಿವಿಧ ಜಾತಿಯ ಸಸ್ಯಗಳು ಇರುವುದರಿಂದ ಪ್ರಾಕೃತಿಕ ಸಮತೋಲನಕ್ಕೆ ಸಹಾಯಕವಾಗಿದೆ ಎಂಬ ವಿಷಯ ಬಹುಶಃ ಶಾಸಕ ಬಂಡಿ ಅವರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ. ಈ ಭಾಗವು ಪ್ರಕೃತಿ ಸಮತೋಲನ ಕಾಯ್ದುಕೊಂಡಿದೆ ಎಂದರೆ ಅದಕ್ಕೆ ಕಪ್ಪತ್ತಗುಡ್ಡದ ಅರಣ್ಯ ಸಂಪತ್ತು ಕಾರಣವಾಗಿದೆ. ಗದಗ ಜಿಲ್ಲೆಯವರೇ ಆಗಿರುವ ಸಿ.ಸಿ. ಪಾಟೀಲ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಮೇಲೆ ಶಾಸಕರಾದ ಕಳಕಪ್ಪ ಬಂಡಿ ಅವರ ಈ ಹೇಳಿಕೆ ಅನುಮಾನ ಮೂಡಿಸಿದೆ ಎಂದರು.

ಕಪ್ಪತ್ತಗುಡ್ಡದ ಖನಿಜ ಸಂಪತ್ತಿನ ಮೇಲೆ ಇವರ ವಕ್ರ ದೃಷ್ಟಿಬಿದ್ದಂತೆ ಕಾಣುತ್ತಿದೆ. ಈ ಹಿಂದೆ ಗಣಿ ಕಳಂಕದಿಂದಲೇ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡಿದ್ದನ್ನು ಕಳಕಪ್ಪ ಬಂಡಿವರು ಮರೆಯಬಾರದು. ಈ ಭಾಗದ ಪ್ರಾಕೃತಿಕ ಸಮತೋಲನ ಕಾಪಾಡಲು ಕಪ್ಪತ್ತಗುಡ್ಡ ಅತ್ಯವಶ್ಯಕ. ಕಪ್ಪತ್ತಗುಡ್ಡ ರಕ್ಷಿಸಲು ವನ್ಯಜೀವಿ ಸ್ಥಾನಮಾನ ಮುಂದುವರೆಯುವದು ಸೂಕ್ತವಾಗಿದೆ. 

ಕಳಕಪ್ಪ ಬಂಡಿ ಅವರ ಈ ಹೇಳಿಕೆ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸುವ ಪರೋಕ್ಷ ಸುಳಿವು ನೀಡುತ್ತಿದೆ. ಕಾಂಗ್ರೆಸ್‌ ಪಕ್ಷ ಕಪ್ಪತ್ತಗುಡ್ಡ ಮತ್ತು ಕರ್ನಾಟಕದ ನೆಲ ಜಲ ಮತ್ತು ಪರಿಸರ ಸಂರಕ್ಷಣೆ ಪರವಾಗಿದೆ. ಒಂದು ವೇಳೆ ಕಪ್ಪತ್ತಗುಡ್ಡದ ವಿರೋಧಿ ಚಟುವಟಿಕೆ ನಡೆದಿದ್ದೇ ಆದಲ್ಲಿ, ಈ ಭಾಗದ ಪರಿಸರ ಪ್ರೇಮಿಗಳ ಜೊತೆಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.