ಬೆಂಗಳೂರು [ಅ.05]:  ತನ್ನ ನೆರೆ ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ ಖಾಸಗಿ ಕಾಲೇಜಿನ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇರೆಗೆ ಕ್ಯಾಬ್‌ ಚಾಲಕನೊಬ್ಬನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನಕಪುರ ರಸ್ತೆ ಸಮೀಪದ ನಿವಾಸಿ ಗಿರೀಶ್‌ ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ತನ್ನ ಪಕ್ಕದ ಮನೆಯ ಯುವತಿ ಜತೆ ಆತ ಸಭ್ಯತೆ ಮೀರಿ ನಡೆದುಕೊಂಡಿದ್ದ. ಬಳಿಕ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉತ್ತರಪ್ರದೇಶ ಮೂಲದ 19 ವರ್ಷದ ಸಂತ್ರಸ್ತೆ, ನಗರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಯ ಮನೆ ಪಕ್ಕದಲ್ಲೇ ಕ್ಯಾಬ್‌ ಚಾಲಕ ನೆಲೆಸಿದ್ದ. ಕೆಲ ದಿನಗಳಿಂದ ವಿದ್ಯಾರ್ಥಿನಿ ಚಲನವಲನದ ಮೇಲೆ ಆರೋಪಿ ನಿಗಾವಹಿಸಿದ್ದ. ಎಂದಿನಂತೆ ಅ.1 ರಂದು ಸಹ ಮಧ್ಯಾಹ್ನ ಕಾಲೇಜು ಮುಗಿಸಿ ಮನೆಗೆ ಮರಳಿದ ವಿದ್ಯಾರ್ಥಿನಿ, ಬಳಿಕ ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಳು. ಆಗ ಆಕೆ ಮನೆ ನುಗ್ಗಿದ ಆರೋಪಿ, ವಿದ್ಯಾರ್ಥಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಭಯಗೊಂಡು ಆಕೆ ರಕ್ಷಣೆಗೆ ಜೋರಾಗಿ ಕಿರುಚಿದ್ದಾಳೆ. ಈ ಹಂತದಲ್ಲಿ ಸಂತ್ರಸ್ತೆ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ಕೊನೆಗೆ ಸಂತ್ರಸ್ತೆ ಚೀರಾಟದಿಂದ ಭಯಗೊಂಡು ಆರೋಪಿ ಕಾಲ್ಕಿತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.