ಬೆಂಗಳೂರು [ಸೆ.24]:   ಎರಡು ದಿನಗಳ ಹಿಂದೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸವಾಲೆಸೆದು ಸಾಮಾಜಿಕ ಜಾಲ ತಾಣಗಳಲ್ಲಿ ‘ಸ್ಟಾರ್’ ಆಗಿದ್ದ ಮೈಸೂರಿನ ಕ್ಯಾಬ್ ಚಾಲಕ ಸೋಮವಾರ ಸಂಜೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹಣಸೂರು ತಾಲೂಕಿನ ಮಾಚಬಾಯನಹಳ್ಳಿ ನಿವಾಸಿ ರಘು ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ಪೊಲೀಸರಿಗೆ ಸವಾಲು ಹಾಕಿ ಸಾಮಾಜಿಕ ಜಾಲ ತಾಣಗಳಲ್ಲಿ ಆರೋಪಿ ವಿಡಿಯೋ ಹಾಕಿದ್ದ. ಈ ವಿಡಿಯೋದಲ್ಲಿ ಲಭಿಸಿದ ಕ್ಯಾಬ್ ನೋಂದಣಿ ಸಂಖ್ಯೆ ಆಧರಿಸಿ ಮೈಸೂರು ಮತ್ತು ಬೆಂಗಳೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಚಾಲಕನನ್ನು ಬಂಧಿಸಿದ್ದಾರೆ.

ರಘು ವಿರುದ್ಧ ಬೆಂಗಳೂರಿನಲ್ಲಿ ಮೊಬೈಲ್ ಬಳಕೆ, ಏಕಮುಖ ಸಂಚಾರ ಉಲ್ಲಂಘನೆ ಹಾಗೂ ಸಿಗ್ನಲ್ ಜಂಪ್ ಸೇರಿದಂತೆ ಪ್ರಕರಣಗಳು ಪತ್ತೆಯಾಗಿದ್ದು, ಆತ 1200 ರು. ದಂಡ ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ. ಇದಲ್ಲದೆ ಹುಣಸೂರಿನಲ್ಲಿ ಕೂಡಾ ರಾಜು ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಶುಕ್ರವಾರ ಸಂಚಾರ ನಿಯಮ ಉಲ್ಲಂಘಿಸಿದ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಸರಕು ಸಾಗಾಣಿಕೆ ಆಟೋ ಚಾಲಕನ ಮೇಲೆ ಸಂಚಾರ ಠಾಣೆ ಹೆಡ್ ಕಾನ್‌ಸ್ಟೇಬಲ್ ಮಹಾಸ್ವಾಮಿ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಕೌಂಟರ್ ನೀಡಿದ್ದ ಕ್ಯಾಬ್ ಚಾಲಕ ರಘು, ‘ನಾನು ಬೆಂಗಳೂರಿಗೆ ಬರುತ್ತೇನೆ. ತಾಕತ್ತಿದ್ದರೆ ನನ್ನನ್ನು ತಡೆದು ನನ್ನ ವಿರುದ್ಧ ಕೇಸ್ ದಾಖಲಿಸಿ’ ಎಂದು ಸವಾಲು ಹಾಕಿದ್ದ. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಜಂಟಿ ಆಯುಕ್ತ (ಸಂಚಾರ) ಬಿ.ಆರ್.ರವಿಕಾಂತೇಗೌಡ ಅವರು, ಪೊಲೀಸರನ್ನು ಅವಮಾನಿಸಿದ ಕ್ಯಾಬ್ ಚಾಲಕನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು. ಬಳಿಕ ಮೈಸೂರು ಪೊಲೀಸರ ಸಹಕಾರದಲ್ಲಿ ವಿಡಿಯೋದಲ್ಲಿ ಲಭಿಸಿದ ನೋಂದಣಿ ಸಂಖ್ಯೆ ಆಧರಿಸಿ ಕೊನೆಗೂ ಸೋಮವಾರ ಆತನನ್ನು ಪತ್ತೆ ಹಚ್ಚಿದ್ದಾರೆ.

‘ನಾನು ಮಾಡಿದ ವಿಡಿಯೋ ಈ ಮಟ್ಟಿಗೆ ಪ್ರಚಾರ ಪಡೆ ಯುತ್ತದೆ ಎಂದು ಗೊತ್ತಿರಲ್ಲಿಲ್ಲ. ನಾನು ತಪ್ಪು ಮಾಡಿದೆ’ ಎಂದು ಆರೋಪಿ ವಿಚಾರಣೆ ಹೇಳಿಕೆ ನೀಡಿದ್ದಾನೆ.