ಅಡ್ಯಾರ್ ಪೌರತ್ವ ಪ್ರತಿಭಟನೆ: 'ಹೋರಾಟ ಇಲ್ಲಿಗೇ ಮುಗಿದಿಲ್ಲ'..!
ಅಡ್ಯಾರ್‌ನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ‘ಹೋರಾಟ ಇಲ್ಲಿಗೇ ಮುಗಿದಿಲ್ಲ. ಇದು ಆರಂಭ ಮಾತ್ರ. ಎಂದು ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಹೇಳಿದ್ದಾರೆ.
ಮಂಗಳೂರು(ಜ.19): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇತ್ತೀಚೆಗೆ ಅಡ್ಯಾರ್‌ನಲ್ಲಿ ಶಾಂತಿಯುತವಾಗಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ಯಶಸ್ವಿಯಾಗಿರುವ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಇದೀಗ ‘ಹೋರಾಟ ಇಲ್ಲಿಗೇ ಮುಗಿದಿಲ್ಲ. ಇದು ಆರಂಭ ಮಾತ್ರ. ಇಲ್ಲಿಂದಲೇ ಪೌರತ್ವ ವಿರೋಧಿ ಹೋರಾಟವನ್ನು ಆರಂಭಿಸಲಿದ್ದೇವೆ’ ಎಂದು ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಇನ್ನು 15 ದಿನ ಸಮಯಾವಕಾಶ ಕೊಡಿ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೋಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಎಲ್ಲರೂ ಶಾಂತಿಯಿಂದ ಇರಬೇಕು. ಮುಂದಿನ ತೀರ್ಮಾನವನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ಕೈಗೊಳ್ಳಲಿದೆ ಎಂದಿದ್ದಾರೆ.
ಸ್ವಚ್ಛತಾ ಕಾರ್ಯ:
ಅಡ್ಯಾರ್‌ನಲ್ಲಿ ಮೂರು ಲಕ್ಷ ಮಂದಿ ಒಟ್ಟುಗೂಡಿದ್ದರೂ ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮಾವೇಶ ಆಯೋಜಿಸಿದ್ದೆವು. ಸಮಾವೇಶದ ಬಳಿಕ ಅಲ್ಲಿನ ಹೆದ್ದಾರಿಯಲ್ಲಿ ಪ್ಲಾಸ್ಟಿಕ್ ಬಾಟಲಿ ಮತ್ತಿತರ ಕಸಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛತೆಯನ್ನೂ ಪಾಲನೆ ಮಾಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಸಹಕರಿಸಿದ್ದಾರೆ ಎಂದು ಮಸೂದ್ ಹೇಳಿದ್ದಾರೆ.
ರಸ್ತೆ ಅಗೆದು ಕಾಮಗಾರಿ ಗುಣಮಟ್ಟ ಪರಿಶೀಲನೆ..!
ಮರುಚಿಂತನೆ ನಡೆಸಲಿ:
ಕಮಿಟಿಯ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದೆಲ್ಲೆಡೆಯಂತೆ ಕರಾವಳಿಯ ಸಮಾವೇಶವೂ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇನ್ನಾದರೂ ಮರು ಚಿಂತನೆ ನಡೆಸಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಬಿ.ಎಂ.ಮುಮ್ತಾಝ್ ಅಲಿ, ಸೈಯದ್ ಅಹ್ಮದ್ ಬಾಷಾ ತಂಙಳ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಸಮಾವೇಶ ಸಂಘಟನಾ ಸಮಿತಿಯ ಸಂಯೋಜಕರಾದ ಎಸ್.ಎಂ.ರಶೀದ್, ಖಾಸಿಮ್ ಅಹ್ಮದ್ ಎಚ್.ಕೆ., ಮನ್ಸೂರ್ ಅಹ್ಮದ್ ಅಝಾದ್ ಮತ್ತಿತರರು ಇದ್ದರು.