ಮಡಿಕೇರಿ(ಜ.19): ಸೋಮವಾರಪೇಟೆ ತಾಲೂಕಿನಲ್ಲಿ ಅಪೆಂಡಿಕ್ಸ್‌-ಇ ಮತ್ತು ಕೊಡಗು ಪ್ಯಾಕೇಜ್‌ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಕೂಡಲೆ ಗುಣಭರವಸೆ ಅಧಿಕಾರಿಗಳಿಂದ ಪರೀಕ್ಷಿಸಬೇಕು ಎಂದು ಲೋಕೋಪಯೋಗಿ ಬಂದು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮುಖ್ಯ ಅಭಿಯಂತರರಿಗೆ ಆರ್‌ಟಿಐ ಕಾರ್ಯಕರ್ತ ಬಿ.ಪಿ. ಅನಿಲ್‌ ಕುಮಾರ್‌ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಮಡಿಕೇರಿ ಲೋಕೋಪಯೋಗಿ ಇಲಾಖೆಯ ಗುಣಭರವಸೆ ಅಧಿಕಾರಿ ಗಿರೀಶ್‌ ಹಾಗೂಡ ಎಇಇ ಬಾಲಕೃಷ್ಣ ಅವರು ಬಾಣಾವಾರ-ಗಣಗೂರು- ಶನಿವಾರಸಂತೆ ಹಾಗೂ ಬೀಟಿಕಟ್ಟೆ-ಚನ್ನಾಪುರ-ಹಿರಿಕರ- ತಣ್ಣೀರುಹಳ್ಳ ರಸ್ತೆ ಕಾಮಗಾರಿಯನ್ನು ಶುಕ್ರವಾರ ಪರಿಶೀಲನೆ ನಡೆಸಿದರು. ರಸ್ತೆಗಳಿಗೆ ಡಬ್ಲ್ಯೂಎಂಎಂ, ಮಿಶ್ರಣವನ್ನು ನಿಗದಿತ ಪ್ರಮಾಣದಲ್ಲಿ ಹಾಕದಿರುವುದು ಬೆಳಕಿಗೆ ಬಂದಿದ್ದು, ಪೂರ್ಣ ವರದಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಗ್ರಾಮಸ್ಥರಿಗೆ ಅಧಿಕಾರಿಗಳು ತಿಳಿಸಿದರು. ಮುಂದಿನ ಅದೇಶ ಬರುವವರೆಗೆ ಡಾಂಬರು ಹಾಕದಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

ಕುಡಿಯಲು ಹಣ ಕೊಡದ ತಂದೆಯನ್ನೇ ಕೊಂದುಬಿಟ್ಟ..!

ಅಂದಾಜುಪಟ್ಟಿಯ ಪ್ರಕಾರ ವೆಟ್‌ಮಿಕ್ಸ್‌, ಮ್ಯಾಕ್‌ಡ್ಯಾಮ್‌ 6 ರಿಂದ 8 ಇಂಚು ದಪ್ಪದಲ್ಲಿ ಹಾಕಬೇಕು. ಆದರೆ, ಕಾಮಗಾರಿ ನಡೆಯುವ ರಸ್ತೆಗಳನ್ನು ಪರಿಶೀಲಿಸಿದಾಗ 3ರಿಂದ 4 ಇಂಚು ದಪ್ಪದಲ್ಲಿ ಹಾಕಿ ಡಾಮರೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ವೆಟ್‌ಮಿಕ್ಸ್‌ನಲ್ಲಿ ಐಆರ್‌ಸಿ ನಿಗದಿಪಡಿಸಿರುವ ಕಚ್ಚಾ ಸಾಮಾಗ್ರಿಗಳು ಇರುವುದಿಲ್ಲ ಮತ್ತು ಜೆಲ್ಲಿಪುಡಿ ಅಧಿಕವಾಗಿ ಬಳಸಲಾಗುತ್ತಿದೆ. ರಸ್ತೆಗಳಿಗೆ ಹಾಕಿರುವ ವೆಟ್‌ಮಿಕ್ಸ್‌ ಕಾಂಪ್ಯಾಕ್ಸನ್‌ ಆಗಿರುವುದಿಲ್ಲ. ಎಂಜಿನಿಯರ್‌ಗಳು ಕೂಡ ಸ್ಥಳದಲ್ಲಿದ್ದು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿಲ್ಲ ಎಂದು ಅನಿಲ್‌ ಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

ಡಾಮರೀಕರಣ ಮಾಡುವ ಸಮಯದಲ್ಲಿ ಹಾಟ್‌ಮಿಕ್ಸ್‌ ಪ್ಲ್ಯಾಂಟ್‌ ಮತ್ತು ಡಾಂಬರನ್ನು ಗುಣಭರವಸೆ ಅಧಿಕಾರಿಗಳು ಪರೀಕ್ಷಿಸಿ ನಂತರವೇ ಕಾಮಗಾರಿ ಪ್ರಾರಂಭ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.