ಚಾಮರಾಜನಗರ(ಜ.14): ಪೌರತ್ವ ಕಾಯ್ದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಜಾರಿಗೆ ತಂದಿರುವ ಕಾಯ್ದೆಯಲ್ಲ. ರಾಷ್ಟ್ರೀಯ ಭದ್ರತೆಗಾಗಿ ಸಂವಿಧಾನ ಬದ್ಧವಾಗಿ ಪೌರತ್ವ ಕಾಯ್ದೆ ಜಾರಿಯಾಗಿದೆ. ಇದರಿಂದ ಉಗ್ರಗಾಮಿಗಳಿಗಷ್ಟೇ ತೊಂದರೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಮಂಡಿಸಿ ನಂತರ ರಾಜ್ಯಸಭೆಯಲ್ಲಿ ಮಂಡಿಸಿ, ರಾಷ್ಟ್ರಪತಿಗಳಿಂದ ಅಂಕಿತ ಹಾಕಿದ ಮೇಲೆ ಜಾರಿಯಾಗಿರುವ ಸಂವಿಧಾನ ಬದ್ಧವಾದ ಕಾಯ್ದೆ ಪೌರತ್ವ ತಿದ್ದುಪಡಿ ಕಾಯ್ದೆ. ಕಾಯ್ದೆಯಿಂದ ಭಾರತದಲ್ಲಿರುವ ಯಾವುದೇ ಅಲ್ಪಸಂಖ್ಯಾತರಿಗೂ ತೊಂದರೆ ಇಲ್ಲ ಎಂದಿದ್ದಾರೆ.

ಸುತ್ತೂರು ಶಾಖಾ ಮಠಕ್ಕೆ ನಿವೃತ್ತ ಸಿಜೆ ರಂಜನ್‌ ಗೊಗೋಯ್‌ ದಂಪತಿ ಭೇಟಿ

ಬೇರೆ ದೇಶದಿಂದ ಭಾರತಕ್ಕೆ ನುಸುಳುವ ಯಾವುದೇ ಧರ್ಮದ ವಲಸಿಗರಿಗೆ ತೊಂದರೆ ಇಲ್ಲ. ಉಗ್ರಗಾಮಿಗಳ ದೇಶ ಎಂದು ಅಮೆರಿಕವೇ ಘೋಷಣೆ ಮಾಡಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಬರುವ ಮುಸ್ಲಿಂರಿಗೆ ಪೌರತ್ವ ಕೊಡುವುದು ಬೇಡ. ಅವರಿಗೆ ಪೌರತ್ವ ಕೊಟ್ಟರೆ ದೇಶದಲ್ಲಿ ರಕ್ತಪಾತವಾಗಬಹುದು ಎಂದು ರಾಷ್ಟ್ರೀಯ ಭದ್ರತೆಗಾಗಿ ಕಾಯ್ದೆಯನ್ನು ಸಂವಿಧಾನ ಬದ್ಧವಾಗಿ ಜಾರಿಗೆ ತರಲಾಗಿದೆ ಎಂದಿದ್ದಾರೆ.

ಕಾಯ್ದೆಯನ್ನು ವಿರೋಧ ಮಾಡಬಾರದು ಎಂದು ಹೇಳಿಲ್ಲ. ಪ್ರತಿಭಟನೆ ಮಾಡಬಾರದು, ಸಭೆ ಮಾಡಬಾರದು ಎಂದು ಕೂಡ ಹೇಳಿಲ್ಲ. ಆದರೆ, ಪ್ರತಿಭಟನೆ, ಸಭೆ ಮಾಡಿದರೆ ಅದರಿಂದ ಜನಸಾಮಾನ್ಯರ ಆಸ್ತಿಗಳಿಗೆ ಯಾವುದೇ ತೊಂದರೆಯಾಗಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆಸ್ತಿಗಳಿಗೆ ತೊಂದರೆಯಾದರೆ ಪ್ರತಿಭಟನಾ ನೇತೃತ್ವ ವಹಿಸಿರುವವರು ದಂಡಕ್ಕೆ ಗುರಿಯಾಗುತ್ತಾರೆ. ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ಇದರಲ್ಲಿ ಪ್ರತಿಪಕ್ಷದವರು ಅಲ್ಪ ಸಂಖ್ಯಾತರನ್ನು ಎತ್ತಿ ಕಟ್ಟುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಬ್ಬರ್ ತೋಟದಲ್ಲಿ ಒಂದೇ ಕಡೆ 6 ಹೆಬ್ಬಾವು..!

ಪೌರತ್ವ ಸಾಬೀತು ಪಡಿಸಲು ಒಂದು ಮತದಾನದ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಯಾವುದಾದರೂ ಒಂದು ದಾಖಲಾತಿ ಇದ್ದರೆ ಸಾಕು. ಒಂದಾದರೂ ದಾಖಲಾತಿ ಇದ್ದೇ ಇರುತ್ತದೆ. ಪೌರತ್ವದ ಬಗ್ಗೆ ಮಿಸ್‌ಗೈಡ್‌ ಮಾಡಿ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್‌ ಪಕ್ಷ ಮಾಡುತ್ತಿದೆ ಎಂದು ಆರೋಪಿಸಿದರು.