Asianet Suvarna News Asianet Suvarna News

ವಿಜಯಪುರ ಸ್ಮಾರ್ಟ್‌ಸಿಟಿಗೆ 1000 ಕೋಟಿ: ಸಚಿವ ಭೈರತಿ ಬಸವರಾಜ್‌

ಕೇಂದ್ರ ಹಾಗೂ ರಾಜ್ಯ ಸರ್ಕಾರಿಂದ ತಲಾ 500 ಕೋಟಿ: ಸಚಿವ ಭೈರತಿ ಬಸವರಾಜ್‌| ವಿಜಯಪುರ ಐತಿಹಾಸಿಕ ಬಾವಿಗಳ ಸಂರಕ್ಷಣೆಗೆ ಸಮಗ್ರ ಯೋಜನೆ ಸಿದ್ಧಪಡಿಸಿ| ನಗರದಲ್ಲಿ ಮಾಸ್ಟರ್‌ಪ್ಲ್ಯಾನ್‌ಗೆ 25 ಕೋಟಿ ಅವಶ್ಯಕತೆ ಇದೆ| ಅನುದಾನ ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿಯೂ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ ಸಹ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಸಚಿವರು|

Byrati Basavaraj Talks Over Vijayapura Smartcity
Author
Bengaluru, First Published Jun 24, 2020, 10:37 AM IST

ವಿಜಯಪುರ(ಜೂ.24): ಸ್ಮಾರ್ಟ್‌ಸಿಟಿ ಪಟ್ಟಿಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯನ್ನು ಸೇರ್ಪಡೆ ಮಾಡಲಾಗುವುದು ಎಂದು ಭರವಸೆ ನೀಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಅವರು, ಈ ಯೋಜನೆಯಡಿ ವಿಜಯಪುರ ಮಹಾನಗರ ಪಾಲಿಕೆಗೆ 1 ಸಾವಿರ ಕೋಟಿ ವಿಶೇಷ ಅನುದಾನ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ತಿಳಿಸಿದ್ದಾರೆ.

ಮಂಗಳವಾರ ನಗರ ಪ್ರದಕ್ಷಿಣೆ ಬಳಿಕ ಮಾತನಾಡಿದ ಅವರು, ಸ್ಮಾರ್ಟ್‌ಸಿಟಿ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 500 ಕೋಟಿ ನೀಡಲಿವೆ. ಕೂಡಲೇ ಈ ಪಟ್ಟಿಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯನ್ನು ಸೇರ್ಪಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

'ಬಿಜೆಪಿ ಸರ್ಕಾರ ಉತ್ತಮ ಜನಪರ ಆಡಳಿತ ನೀಡುವಲ್ಲಿ ವಿಫಲ'

ನಗರದಲ್ಲಿ ಮಾಸ್ಟರ್‌ಪ್ಲ್ಯಾನ್‌ಗೆ 25 ಕೋಟಿ ಅವಶ್ಯಕತೆ ಇದೆ ಎಂದು ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾಗಿದೆ. ಈ ಅನುದಾನ ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿಯೂ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ ಸಹ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ 8.5 ಕೋಟಿ ವೆಚ್ಚದ ಸಿಂಥೆಟಿಕ್‌ ಟ್ರ್ಯಾಕ್‌ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಅಂತಾರಾಷ್ಟ್ರೀಯ ಈಜುಕೊಳ ಸಹ ಶೀಘ್ರ ಪೂರ್ಣಗೊಳ್ಳಲಿದೆ ಎಂದರು.

ಬಾವಿ ಸಂರಕ್ಷಣೆಗೆ ಯೋಜನೆ:

ವಿಜಯಪುರ ನಗರದಲ್ಲಿ ಐತಿಹಾಸಿಕ ಬಾವಿಗಳ ಸಂರಕ್ಷಣೆಗೆ ಸಮಗ್ರ ಯೋಜನೆ ರೂಪಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಜಯಪುರ ನಗರದಲ್ಲಿ 144 ಐತಿಹಾಸಿಕ ಬಾವಿಗಳನ್ನು ಗುರುತಿಸಲಾಗಿದೆ. ಈ ಐತಿಹಾಸಿಕ ಬಾವಿಗಳ ಸಂರಕ್ಷಣೆಗೆ ಸಮಗ್ರ ಯೋಜನೆ ರೂಪಿಸಿ ಸಲ್ಲಿಸಲು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದರು.

ಅತಿ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ ವಿಜಯಪುರ ನಗರದ ಪ್ರಗತಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಕೆಲವೊಂದು ನಿಯಮಾವಳಿಗಳು, ಮಾರ್ಗಸೂಚಿಗಳು ಅಡ್ಡ ಬರುತ್ತಿವೆ ಎಂಬ ದೂರು ಕೇಳಿ ಬಂದಿವೆæ. ಈ ಬಗ್ಗೆ ಕೇಂದ್ರ ಸಚಿವರನ್ನು ಸಂಪರ್ಕಿಸಿ ಗೊಂದಲಗಳಿಗೆ ತೆರೆ ಎಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಸೊಲ್ಲಾಪೂರ ಬೈಪಾಸ್‌ ಬಳಿ ಇರುವ ಕಲ್ಲು ಗಣಿಗಾರಿಕೆಯ ಪ್ರದೇಶ (ಖಣಿ)ಯಲ್ಲಿ ಮಳೆ ನೀರು ನಿಲ್ಲುತ್ತದೆ. ಈ ಪ್ರದೇಶವನ್ನೇ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಅನುಕೂಲ. ಹೀಗಾಗಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ ಎಂದರು.

ಜೋರಾಪೂರ ಪೇಟ ರಸ್ತೆ ಅಗಲೀಕರಣಕ್ಕೆ ಡಿಪಿಆರ್‌ ಸಿದ್ಧಪಡಿಸಲು ಸೂಚಿಸಲಾಗಿದೆ. ಗಾಂಧಿ ವೃತ್ತದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲೊಂದು ಅಂಡರ್‌ ಪಾಸ್‌ ಮಾಡಲು ವಿಜಯಪುರ ನಗರ ಶಾಸಕರು ಮನವಿ ಮಾಡಿಕೊಂಡಿದ್ದು, ಅದಕ್ಕಾಗಿ 25 ಕೋಟಿ ವೆಚ್ಚವಾಗಲಿದ್ದು ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
 

Follow Us:
Download App:
  • android
  • ios