ಬೆಂಗಳೂರು(ನ.21): ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಎಚ್ಚರಿಕೆ ನೀಡಿದ್ದಾರೆ. 

ಶುಕ್ರವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ವೀಕ್ಷಣೆ ವೇಳೆ ಅವೈಜ್ಞಾನಿಕ ಮತ್ತು ವಿಳಂಬ ಕಾಮಗಾರಿ ಕಂಡು ಸಚಿವರು ಗರಂ ಆದರು. ಇನ್ಫೆಂಟ್ರಿ ರಸ್ತೆಯ ಎರಡೂ ಕಡೆಗಳಲ್ಲಿ ಏಕಕಾಲದಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಪ್ರಾರಂಭಿಸಲಾಗಿದೆ. ಇದು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. ರಸ್ತೆಯಲ್ಲಿ ಪೊಲೀಸ್‌ ಕಮೀಷನರ್‌ ಕಚೇರಿ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕಾಮಗಾರಿಯಿಂದ ವಾಹನ ದಟ್ಟಣೆಯುಂಟಾಗುತ್ತಿದ್ದು ಕಚೇರಿ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಾಮಗಾರಿಯ ಬಿಲ್‌ ಪಾಸ್‌ ಮಾಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಕೆ ಆರ್‌ ಪುರಂನಲ್ಲಿ ಸಚಿವ ಭೈರತಿ ಬಸವರಾಜುವಿನಿಂದ ಫುಡ್ ಕಿಟ್ ವಿತರಣೆ

ಕಳೆದ ಎರಡ್ಮೂರು ತಿಂಗಳಿನಿಂದ ರೇಸ್‌ಕೋರ್ಸ್‌ ರಸ್ತೆ, ರಾಜಭವನ ರಸ್ತೆ ಮತ್ತಿತರ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಜತೆಗೆ ರಸ್ತೆಯಲ್ಲಿರುವ ಚೇಂಬರ್‌ಗಳನ್ನು ಸರಿಯಾಗಿ ಅಳವಡಿಸದಿರುವುದನ್ನು ಕಂಡು ಸಚಿವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜಾರಾಂ ಮೋಹನ್‌ರಾಯ್‌ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌, ಡಿಕನ್ಸನ್‌ರಸ್ತೆ, ಹಲಸೂರು ರಸ್ತೆ, ಮಿಲ್ಲರ್ಸ್‌ ರಸ್ತೆ, ಕ್ವೀನ್ಸ್‌ ರಸ್ತೆ, ಲ್ಯಾವೆಲ್ಲಾ ರಸ್ತೆ ಮತ್ತಿತರ ಪ್ರದೇಶಗಳಿಗೂ ಸಚಿವರು ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.