ಸಿಂಧನೂರು(ಏ.08): ರಾಜ್ಯದಲ್ಲಿರುವ ಕುರುಬ ಸಮಾಜಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ ಶೂನ್ಯ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಟೀಕಿಸಿದ್ದಾರೆ.

ನಗರದ ಸುಕಾಲಪೇಟೆಯಲ್ಲಿರುವ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ನಿವಾಸದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಸಚಿವರಾದ ನಂತರ ಆರು ತಿಂಗಳು ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೂ ಪ್ರವಾಸ ಮಾಡಿ ಕುರುಬ ಸಮಾಜದ ಮುಖಂಡರ ಸಭೆ ನಡೆಸಿ ಸಮಾಜದ ಪರಿಸ್ಥಿತಿ ಅವಲೋಕನ ಮಾಡಿದ್ದೇನೆ. ಬೆಳಗಾವಿಯಲ್ಲಿ ಸಮಾಜದವರ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಕೆಲ ಜಿಲ್ಲೆಗಳಲ್ಲಿ ಕನಕ ಪ್ರತಿಮೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಸಮುದಾಯ ಭವನ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ರಾಯಚೂರಿನಲ್ಲಿ ಜಾಗ ಖರೀದಿಸಿ ಕುರುಬ ಸಮಾಜದ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದರು.

'ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕೈ ಮುಖಂಡ ಬಿಜೆಪಿಗೆ'

ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ರನ್ನು ಜನತೆ ಗೆಲ್ಲಿಸುವ ಮೂಲಕ ಅಭಿವೃದ್ಧಿಪರ ಆಡಳಿತಕ್ಕೆ ಸಹಕರಿಸಬೇಕು. ಪ್ರತಾಪಗೌಡ ಪಾಟೀಲರಿಗೆ ಕುರುಬ ಸಮಾಜದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮುಖಂಡರಾದ ಭೀಮಣ್ಣ ಸಂಗಟಿ, ಎಂ.ದೊಡ್ಡಬಸವರಾಜ, ಪೂಜಪ್ಪ ಪೂಜಾರಿ, ಶಂಭಣ್ಣ, ಟಿ.ಹನುಮಂತಪ್ಪ ಇದ್ದರು.